ಬಳ್ಳಾರಿ: ನಗರದ ತಾಳೂರು ರಸ್ತೆಯ ಆಂಜಿನೇಯ ಗುಡಿ ಸುತ್ತಮುತ್ತಲಿನ ನಿವಾಸಿಗಳಿಗೆ ಭಾನುವಾರ ಮುಂಜಾನೆ ಎಂದಿನಂತೆ ಇರಲಿಲ್ಲ.
ಅವರ ಮನೆ ಬಾಗಿಲಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹಕ್ಕಾಗಿ ದೇಣಿಗೆ ಡಬ್ಬಿ ಹಿಡಿದು ನಿಂತಿದ್ದರು.
ಬೆಳಕಾಗುವ ಮುನ್ನವೇ ದೇವಾಲಯದಲ್ಲಿ ಶ್ರೀರಾಮ ಭಕ್ತರೊಂದಿಗೆ ಹಾಜರಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ, ದೇಣಿಗೆ ಸಂಗ್ರಹಿಸಲು ಸಜ್ಜಾಗಿದ್ದರು.
ಎಳೆಬಿಸಿಲು ಮನೆಗಳ ಮೇಲೆ ಬೀಳುವ ಮುನ್ನವೇ ಬಾಗಿಲಲ್ಲಿ ದೇಣಿಗೆ ಡಬ್ಬಿ ಹಿಡಿದು ಬಂದ ಶಾಸಕರನ್ನು ಕಂಡು ನಿವಾಸಿಗಳು ಅಚ್ಚರಿಪಟ್ಟರು. ಇಲ್ಲ ಎನ್ನದೆ ತಮ್ಮ ಕೈಲಾದಷ್ಟು ದೇಣಿಗೆಯನ್ನೂ ನೀಡಿದರು.
ಪ್ರತಿ ಮನೆ ಮುಂದೆಯೂ ಕೊಂಚ ಕಾಲ ನಿಂತು ಶಾಸಕರು ನಿವಾಸಿಗಳ ಉಭಯಕುಶಲೋಪರಿ ವಿಚಾರಿಸಿದರು. ವೃದ್ದರ ಪಕ್ಕದಲ್ಲಿ ಕುಳಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವಾಸಿಗಳು ಮೂಲಸೌಕರ್ಯ ಕೊರತೆಯ ಕುರಿತೂ ಗಮನ ಸೆಳೆದರು.
ತಾಳೂರು ರಸ್ತೆಯ ವಿವಿಧ ಪ್ರದೇಶಗಳಲ್ಲಿ ನಡೆದ ದೇಣಿಗೆ ಸಂಗ್ರಹ ಕಾರ್ಯದಲ್ಲಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.