ಬಳ್ಳಾರಿ: ಕರ್ನಾಟಕದ ಗ್ಯಾರಂಟಿ ಯೋಜನೆಗಳ ಕುರಿತು ಮಹಾರಾಷ್ಟ್ರದ ಬಿಜೆಪಿ ಘಟಕ ನೀಡಿದ ‘ವಾದಾ ಕಿಯಾ, ದೋಖಾ ದಿಯಾ (ಮಾತು ಕೊಟ್ಟರು, ಮೋಸ ಮಾಡಿದರು) ಎಂಬ ಜಾಹೀರಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
‘ನಾವು ಮಾತು ಕೊಟ್ಟಿದ್ದೇವೆ, ಈಡೇರಿಸಿದ್ದೇವೆ (ವಾದಾ ದಿಯಾ ಪೂರಾ ಕಿಯಾ)’ ಎಂದ ಅವರು,‘ಸುಳ್ಳು ಹೇಳಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ಸಂಡೂರು ಕ್ಷೇತ್ರದ ಬೊಮ್ಮಘಟ್ಟ, ಚೋರನೂರು, ಬಂಡ್ರಿ, ಯಶವಂತನಗರ ಸೇರಿ ಹಲವು ಕಡೆ ದಿನವಿಡೀ ಪ್ರಚಾರ ಸಭೆ ನಡೆಸಿದ ಸಿದ್ದರಾಮಯ್ಯ ಅವರು ಗ್ಯಾರಂಟಿ ಕಾರ್ಯಕ್ರಮಗಳನ್ನು ಸಮರ್ಥಿಸಿದರು. ಬಿಜೆಪಿಗೆ ತಿರುಗೇಟು ನೀಡಿದರು.
‘ಮಹಾರಾಷ್ಟ್ರ ಬಿಜೆಪಿ ಸುಳ್ಳು ಜಾಹೀರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಲಾಗಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎಂಬರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೇ ನೀಡಲಾಗಿದೆ’ ಎಂದು ಅವರು ಆರೋಪಿಸಿದರು.
ಜೆಪಿಸಿ ಹಿಂದೆಂದಾದರೂ ಬಂದಿತ್ತಾ? ಅವರು ಬಂದಿರುವುದು ರಾಜಕೀಯ ಕಾರಣಕ್ಕೆ. ವಕ್ಫ್ ವಿಚಾರದಲ್ಲಿ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ನೋಟಿಸ್ ಹಿಂಪಡೆಯಿರಿ ಎಂದು. ಇನ್ನು ಸಮಸ್ಯೆ ಎಲ್ಲಿದೆ?.ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಪ್ರಧಾನಿ ನರೇಂದ್ರ ಮೋದಿಯವರೇ, ಇದು ನಿಮ್ಮ ಸುಳ್ಳಿನಿಂದಲೇ ಪ್ರೇರಣೆ ಪಡೆದು ಹೇಳಿರುವ ಸುಳ್ಳು. ದಯವಿಟ್ಟು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಘಟಕ ಹೇಳಿರುವ ಸುಳ್ಳಿಗೆ ದೇಶದ ಜನರ ಕ್ಷಮೆ ಯಾಚಿಸಿ. ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಸಣ್ಣ ತಪ್ಪು ಕೂಡ ಮಾಡದ ನನಗೆ ಕಳಂಕ ತರಲು ಬಿಜೆಪಿ ಸುಳ್ಳು ಪ್ರಕರಣ ಹಾಕಿಸಿ ಷಡ್ಯಂತ್ರ ಮಾಡಿದೆ. ನಾನು ನಿರಂತರ ಮೋದಿ, ಅಮಿತ್ ಶಾ ಅವರ ನೀತಿಗಳನ್ನು, ಸುಳ್ಳುಗಳನ್ನು, ಅವರು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸಿ, ಟೀಕಿಸಿದ್ದರಿಂದ ನನ್ನನ್ನೇ ಮುಗಿಸಲು ಮುಂದಾಗಿದ್ದಾರೆ’ ಎಂದು ಅವರು ತಿಳಿಸಿದರು.
ಮೋದಿ ಹೇಳಿದ್ದೇನು ? ಮಾಡಿದ್ದೇನು?:
‘ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ ₹15 ಲಕ್ಷ ಕೊಡುವುದಾಗಿ ಮೋದಿ ಹೇಳಿದ್ದರು, ಆದರೆ ಕೊಡಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ಮಾಡಲಿಲ್ಲ. ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು, ಮಾಡಿದರಾ? ಮೋದಿ ಪ್ರಧಾನಿ ಆಗುವ ಮುನ್ನ ದೇಶದ ಸಾಲ ₹54 ಲಕ್ಷ ಕೋಟಿ ಇತ್ತು . ಈಗ ₹185 ಲಕ್ಷ ಕೋಟಿಗೆ ಏರಿದೆ. ಇದೇನಾ ಅಚ್ಚೇ ದಿನ’ ಎಂದು ಪ್ರಶ್ನೆ ಮಾಡಿದರು.
ನನ್ನ ಮಗಳು: ಅನ್ನಪೂರ್ಣಮ್ಮ ನನ್ನ ಆತ್ಮೀಯ ಸ್ನೇಹಿತ ರುದ್ರಪ್ಪ ಅವರ ಮಗಳು. ಅವರು ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದರು. ಹೀಗಾಗಿ ನನಗೆ ಪರಿಚಿತರು. ಅದೇ ಕಾರಣಕ್ಕೆ ಅನ್ನಪೂರ್ಣ ಅವರನ್ನು ತುಕಾರಾಂ ‘ನಿಮ್ಮ ಮಗಳು’ ಎಂದು ಹೇಳುತ್ತಿರುತ್ತಾರೆ. ಆಕೆಗೆ ಮತ ನೀಡಿ ಗೆಲ್ಲಿಸಿದರೆ, ನನ್ನನ್ನು ಗೆಲ್ಲಿಸಿದಂತೆ ಎಂದು ಹೇಳಿದರು.
ಸಿಎಂ ಭಾಷಣದ ನಡುವೇ ಜನರ ನಿರ್ಗಮನ
ಚೋರನೂರು ಗ್ರಾಮಕ್ಕೆ ಮಧ್ಯಾಹ್ನ 11.30ರ ಹೊತ್ತಿಗೆ ಮುಖ್ಯಮಂತ್ರಿ ಬರುವುದಾಗಿ ಹೇಳಿ ಮುಖಂಡರು ಕಾರ್ಯಕ್ರಮಕ್ಕೆ ಜನರನ್ನು ಕರೆತಂದಿದ್ದರು. ಆದರೆ ಕಾರ್ಯಕ್ರಮ ಆರಂಭವಾಗಿದ್ದು 2.15ಕ್ಕೆ. ಅಷ್ಟು ಹೊತ್ತಿಗೆ ನೀರು ಭೋಜನ ಶೌಚಾಲಯದ ವ್ಯವಸ್ಥೆ ಇಲ್ಲದೇ ರೋಸಿ ಹೋಗಿದ್ದ ಬಹುತೇಕ ಜನ ಸಚಿವ ಸಂತೋಷ್ ಲಾಡ್ ಭಾಷಣ ಮುಗಿಸುತ್ತಲೇ ಎದ್ದು ಹೊರಟರು.
ಸಾಂಪ್ರದಾಯಿಕ ಮತಗಳು
‘ಅತ್ಯಂತ ಶೋಷಿತ ಅಸ್ಪೃಶ್ಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಇಂದಿರಾಗಾಂಧಿ ಅವರ ಆಡಳಿತದಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚು ಅನುಕೂಲ ಆಗಿದ್ದು ಅದಕ್ಕೆ ಪ್ರತಿಯಾಗಿ ಸಮುದಾಯ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಎಂಬ ಹೆಗ್ಗಳಿಕೆ ಪಡೆದಿದೆ. ಇಂದಿರಾ ಕಾರಣಕ್ಕೆ ದಲಿತರು ಮನೆ ಜಮೀನು ಒಡೆತನ ಪಡೆದರು. ಉಪ ಚುನಾವಣೆಯಲ್ಲಿ ಸಮುದಾಯ ಕಾಂಗ್ರೆಸ್ ಋಣ ತೀರಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಬಿಜೆಪಿ ಪ್ರಚಾರಕ್ಕೆ ದಂಡು
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರ ಪ್ರಚಾರಕ್ಕೆ ಗುರುವಾರ ಪಕ್ಷದ ದಂಡೇ ಬಂದಿತ್ತು. ಮಾಜಿ ಸಚಿವ ರೇಣುಕಾಚಾರ್ಯ ಮಾಜಿ ಶಾಸಕರಾದ ಪ್ರೀತಂ ಗೌಡ ರೂಪಾಲಿ ನಾಯಕ್ ಭಾರತೀ ಶೆಟ್ಟಿ ಸೇರಿದಂತೆ ಹಲವು ನಾಯಕರು ಸಂಡೂರಿಗೆ ಬಂದಿದ್ದರು. ಒಬ್ಬೊಬ್ಬರಿಗೆ ಒಂದೊಂದು ಪಂಚಾಯಿತಿ ನಿಯೋಜಿಸಲಾಗಿದ್ದು ಪಕ್ಷದಲ್ಲಿ ಸಭೆ ಸೇರಿದ ಬಳಿಕ ಎಲ್ಲರೂ ತಮ್ಮ ತಮ್ಮ ಪಂಚಾಯಿತಿಗಳಿಗೆ ತೆರಳಿ ಪ್ರಚಾರ ನಡೆಸಿ ಬಂದರು. ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ ‘ಕಾಂಗ್ರೆಸ್ ಒಳಮೀಸಲಾತಿ ವಿಚಾರದಲ್ಲಿ ಅನಗತ್ಯ ವಿಳಂಬ ಮಾಡಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಅತ್ಯಂತ ಸ್ಪಷ್ಟವಾಗಿ ಮೀಸಲಾತಿ ವರ್ಗೀಕರಣ ಮಾಡಿತ್ತು. ಇಷ್ಟಾದರೂ ಸಮಿತಿ ನೇಮಕದ ಮೂಲಕ ಒಳಮೀಸಲಾತಿ ವಿಳಂಬ ಮಾಡಲಾಗುತ್ತಿದೆ. ನ್ಯಾಯದಾನ ವಿಳಂಬ ಮಾಡುವುದು ಎಂದರೆ ನ್ಯಾಯದ ನಿರಾಕರಣೆ ಎಂದೇ ಅರ್ಥ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.