ADVERTISEMENT

ಬಳ್ಳಾರಿ | ಜಿಲ್ಲೆಯಲ್ಲಿ ಶೇ.12ರಷ್ಟು ಬಿತ್ತನೆ

ಆರಂಭದಲ್ಲಿ ಅಬ್ಬರಿಸಿದ್ದ ಮುಂಗಾರು, ನಂತರ ಕ್ಷೀಣ: ಬಿತ್ತನೆ ಕಾರ್ಯಕ್ಕೆ ಇಲ್ಲ ಹಿನ್ನೆಡೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 6:09 IST
Last Updated 1 ಜುಲೈ 2024, 6:09 IST
ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಬಳ್ಳಾರಿ ಜಿಲ್ಲೆಯ ರೈತ ಕುಟುಂಬ 
ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಬಳ್ಳಾರಿ ಜಿಲ್ಲೆಯ ರೈತ ಕುಟುಂಬ    

ಬಳ್ಳಾರಿ: ಜಿಲ್ಲೆಯಲ್ಲಿ ಉತ್ತಮ ಆರಂಭ ಪಡೆದಿದ್ದ ಮುಂಗಾರು ಮಳೆ ಕಳೆದ ಹತ್ತು ದಿನಗಳಿಂದ ಕ್ಷೀಣಿಸಿದೆ. ಆದರೂ, ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಜಿಲ್ಲೆಯಲ್ಲಿ ಈ ವರೆಗೆ ಶೇ. 12ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 

ಬಳ್ಳಾರಿ ಜಿಲ್ಲೆಯಲ್ಲಿ ಜೂನ್‌, ಜುಲೈ ಬಿತ್ತನೆ ತಿಂಗಳುಗಳಾಗಿದ್ದು, ಮುಂದಿನ ದಿನಗಳಲ್ಲಿ ಬಿತ್ತನೆ ಕಾರ್ಯ ಮತ್ತಷ್ಟು  ಚುರುಕು ಪಡೆಯುವ ವಿಶ್ವಾಸವಿದೆ. ಅದಕ್ಕೆ ಮಳೆರಾಯನೂ ಕೃಪೆ ತೋರಬೇಕಿದೆ. 

ಬರದ ನಾಡು ಎಂದೇ ಕರೆಸಿಕೊಳ್ಳುವ  ಕಬ್ಬಿಣ ಖನಿಜದ ಬೀಡು ಬಳ್ಳಾರಿಯಲ್ಲಿ ಈ ವರ್ಷ ಇಲ್ಲಿಯ ವರೆಗೆ 14.1 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, ವಾಸ್ತವವಾಗಿ 21.40 ಸೆಂ.ಮೀ ಮಳೆಯಾಗಿದೆ. ಅಂದರೆ, 5.20 ಸೆಂ.ಮೀ ಅಧಿಕ ಮಳೆಯಾಗಿದೆ. 

ADVERTISEMENT

ಬಿತ್ತನೆ ಕಾರ್ಯ ಆರಂಭವಾಗುವುದಕ್ಕೆ ಮೊದಲು ಹೆಚ್ಚು ಮಳೆಯಾಗಿತ್ತಾದರೂ, ಬಿತ್ತನೆ ಕಾರ್ಯ ಆರಂಭವಾದ ಬಳಿಕ ಮಳೆ ಇಳಿಮುಖವಾಗಿದೆ.  ಆದರೂ ಬಿತ್ತನೆ ಪ್ರಮಾಣ ಆಶಾಧಾಯಕವಾಗಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. 

ನೀರಾವರಿಯ 1,08,943 ಹೆಕ್ಟೇರ್‌ ಮತ್ತು ಮಳೆಯಾಶ್ರಿತ 6,49,53 ಹೆಕ್ಟೇರ್‌ ಪ್ರದೇಶ ಸೇರಿ ಜಿಲ್ಲೆಯಲ್ಲಿ ಒಟ್ಟು 1,73,897 ಹೆ. ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈ ಪೈಕಿ 3,570 ಹೆ. ನೀರಾವರಿ ಪ್ರದೇಶದಲ್ಲಿ ಮತ್ತು 17,895 ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರೊಂದಿಗೆ ಈ ವರೆಗೆ 12.34 ರಷ್ಟು ಗುರಿ ಸಾಧನೆಯಾಗಿದೆ. 

ಬಿತ್ತನೆ ಗುರಿ ಸಾಧನೆಯಲ್ಲಿ ಸಂಡೂರು ತಾಲೂಕು ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 34,917 ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಹೊಂದಲಾಗಿತ್ತು. ಈ ವರೆಗೆ ಶೇ. 24.72 ರಷ್ಟು ಗುರಿ ಸಾಧನೆಯಾಗಿದೆ. ಇಲ್ಲಿನ 980 ಹೆ. ನೀರಾವರಿ, 7653 ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ.  

ನಂತರದ ಸ್ಥಾನದಲ್ಲಿ ಸಿರುಗುಪ್ಪ ತಾಲೂಕು ಇದ್ದು, ಇಲ್ಲಿನ 60,735 ಹೆ. ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಲಾಗಿತ್ತು. ಇಲ್ಲಿನ 1895 ಹೆ. ನೀರಾವರಿ ಪ್ರದೇಶ, 9480 ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ. 

ಕಂಪ್ಲಿ ಮತ್ತು ಸಂಡೂರು ತಾಲೂಕುಗಳು ಕೊನೇ ಸ್ಥಾನದಲ್ಲಿದ್ದು, ಇಲ್ಲಿ ಈ ವರೆಗೆ ಕ್ರಮವಾಗಿ ಶೇ. 1.41 ಮತ್ತು ಶೇ. 0.75 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಕುರಿಗೋಡಿನಲ್ಲಿ ಶೇ. 4.65 ರಷ್ಟು ಗುರಿ ಸಾಧನೆಯಾಗಿದೆ. 

ಮುಸುಕಿನ ಜೋಳ ಮುಂದು 

ಬಳ್ಳಾರಿ ಜಿಲ್ಲೆಯ 15,291 ಹೆ. ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಪ್ರತಿಯಾಗಿ ಈ ವರೆಗೆ 5867 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ನಂತರದ ಸ್ಥಾನದಲ್ಲಿ ಜೋಳ–2460, ತೊಗರಿ–1511, ಸಜ್ಜೆ–720 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.  

ಇನ್ನು ತೋಟಗಾರಿಕೆ ಬೆಳೆಗಳ ಬಿತ್ತನೆ ಈ ವರೆಗೆ 600 ಹೆಕ್ಟೇರ್‌ ಮೀರಿಲ್ಲ ಎಂಬುದು ಇಲಾಖೆ ಅಂಕಿ ಅಂಶಗಳಿಂದ ಗೊತ್ತಾಗಿದೆ. ಬೋರ್‌ವೆಲ್‌ಗಳನ್ನು ಹೊಂದಿರುವವರು ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಇನ್ನುಳಿದಂತೆ ಇತರ ಬೆಳೆಗಳು ಬೆರಳೆಣಿಕೆಯಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿವೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 38,772 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿದೆ. 

ಈ ವರ್ಷ ಆಶಾದಾಯಕ 

ಜಲಾಶಯದಿಂದ ನೀರು ಬರುತ್ತಲೇ ಭತ್ತ ನಾಟಿ ಪ್ರಕ್ರಿಯೆ ಆರಂಭವಾಗಲಿದೆ. ಇತರ ಬೆಳೆಗಳಾದ ತೊಗರಿ, ಹತ್ತಿ , ಜೋಳ, ಶೇಂಗಾ ಬಿತ್ತನೆ ನಡೆಯುತ್ತಿದೆ. ಇವುಗಳನ್ನು ಜುಲೈ ಅಂತ್ಯದ ವರೆಗೂ ಬಿತ್ತಬಹುದು. ನವಣೆ, ಸಜ್ಜೆಯನ್ನು ಆಗಸ್ಟ್‌ನಲ್ಲೂ ಬಿತ್ತನೆ ಮಾಡಲು ಅವಕಾಶವಿದೆ. ರಸಗೊಬ್ಬರದ ದಾಸ್ತಾನು ಅಗತ್ಯವಾದಷ್ಟು ಇದೆ. ಈ ವರ್ಷ ನಮ್ಮ ಗುರಿಗೆ ತಕ್ಕಂತೆ ಬಿತ್ತನೆಯಾಗಿದೆ.

ಬಿತ್ತನೆಯಲ್ಲಿ ಹಿನ್ನಡೆಯೇನೂ ಆಗಿಲ್ಲ. ಮುಂಗಾರು ಮಳೆಯೂ ಉತ್ತಮವಾಗಿ ಆಗಿದೆ. ಹೀಗಾಗಿ ಈ ವರ್ಷ ಆಶಾದಾಯಕವಾಗಿದೆ
ಮಲ್ಲಿಕಾರ್ಜುನ ಉಪ ನಿರ್ದೇಶಕ ಕೃಷಿ ಇಲಾಖೆ
ಏಳು ದಿನಗಳಲ್ಲಿ ಮಳೆ ಕೊರತೆ 
ಇದು ಬಿತ್ತನೆಯ ಕಾಲ. ಆದರೆ ಏಳು ದಿನಗಳಲ್ಲೇ ಮಳೆ ಜಿಲ್ಲೆಯಾದ್ಯಂತ ಕೈಕೊಟ್ಟಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. ಈ ಏಳು ದಿನಗಳಲ್ಲಿ 1.6 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ 0.5 ಸೆ.ಮೀ ಮಳೆಯಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.