ADVERTISEMENT

ಹರಪನಹಳ್ಳಿ | ಏಕಕಾಲಕ್ಕೆ ಶುರುವಾದ ಬೆಳೆ ಕಟಾವು: ಕಾರ್ಮಿಕರಿಗೆ ಭಾರಿ ಬೇಡಿಕೆ

ವಿಶ್ವನಾಥ ಡಿ.
Published 28 ಸೆಪ್ಟೆಂಬರ್ 2024, 5:15 IST
Last Updated 28 ಸೆಪ್ಟೆಂಬರ್ 2024, 5:15 IST
ಹರಪನಹಳ್ಳಿ ತಾಲ್ಲೂಕು ಹುಲಿಕಟ್ಟೆ ಗ್ರಾಮದ ಸಮೀಪ ಬೆಳೆದು ಕಟಾವು ಮಾಡುತ್ತಿದ್ದ ಶೇಂಗಾ ಬಳ್ಳಿಯನ್ನು ರೈತ ಶೇಖರಪ್ಪ ಪ್ರದರ್ಶಿಸಿದರು
ಹರಪನಹಳ್ಳಿ ತಾಲ್ಲೂಕು ಹುಲಿಕಟ್ಟೆ ಗ್ರಾಮದ ಸಮೀಪ ಬೆಳೆದು ಕಟಾವು ಮಾಡುತ್ತಿದ್ದ ಶೇಂಗಾ ಬಳ್ಳಿಯನ್ನು ರೈತ ಶೇಖರಪ್ಪ ಪ್ರದರ್ಶಿಸಿದರು   

ಹರಪನಹಳ್ಳಿ: ಸಕಾಲಕ್ಕೆ ಮಳೆ ಸುರಿದು ಎಲ್ಲೆಡೆ ಸೋಂಪಾಗಿ ಕಾಣಿಸುತ್ತಿರುವ ಬೆಳೆಗಳ ಕಟಾವಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ರೈತರು ದುಬಾರಿ ಹಣ ವ್ಯಯಿಸುವ ಕೃಷಿ ಕಾರ್ಮಿಕರನ್ನು ಕರೆತರುವ ಅನಿವಾರ್ಯತೆ ಇದೆ.

ಮೇ 15 ರಿಂದ ಜೂನ್ 15ರವರೆಗೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಏಕ ಕಾಲಕ್ಕೆ 90 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಆಗಿದೆ. ತಾಲ್ಲೂಕಿನಲ್ಲಿ 75 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, ಶೇಂಗಾ 2200 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದರಿಂದ ಸೆಪ್ಟೆಂಬರ್‌ನಲ್ಲಿ ಏಕಕಾಲಕ್ಕೆ ಕಟಾವಿಗೆ ಬಂದಿರುವ ಕಾರಣ ಎಲ್ಲ ಹಳ್ಳಿಯಲ್ಲೂ ಕೂಲಿ ಕಾರ್ಮಿಕರ ಕೊರತೆ ಸಮಸ್ಯೆ ಕಂಡುಬರುತ್ತಿದೆ. ದಿನಕ್ಕೆ ₹300ವರೆಗೆ ಕೊಟ್ಟರೂ ಕಾರ್ಮಿಕರು ಸಿಗದ ಪರಿಸ್ಥಿತಿ ಇದೆ.

ಹಾರಕನಾಳು ರಸ್ತೆಯಲ್ಲಿ ರೈತ ಶೇಖರಪ್ಪ ತಮ್ಮ ಮೂರುವರೆ ಎಕರೆಯಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿದ್ದಾರೆ. ಇದಕ್ಕೆ ರಸಗೊಬ್ಬರ, ಔಷಧಿ ವೆಚ್ಚ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ. ಶೇಂಗಾ ಬಳ್ಳಿ ಕೀಳುವ ಕಾರ್ಮಿಕರು ಸಿಗದ ಕಾರಣ, ಅವರು ಎಕರೆಯೊಂದಕ್ಕೆ ₹ 4,500ರಂತೆ ₹13,500 ಹಣಕ್ಕೆ ಗುತ್ತಿಗೆ ಕೊಟ್ಟಿದ್ದಾರೆ. ಸಮಯ ಹೊಂದಿಸಿಕೊಂಡಿರುವ ಕಾರ್ಮಿಕರು ಈಗ ಶೇಂಗಾ ಕೀಳಲು ಆರಂಭಿಸಿದ್ದಾರೆ.

ADVERTISEMENT

ಚಿಗಟೇರಿ ಮತ್ತು ತೆಲಗಿ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಕೀಳಲು ಎಕರೆವೊಂದಕ್ಕೆ ₹6ರಿಂದ ₹8 ಸಾವಿರದವರೆಗೂ ಡಿಮ್ಯಾಂಡ್ ಇದೆ. ಈರುಳ್ಳಿ ₹3 ರಿಂದ ₹4 ಸಾವಿರ ಬೇಡಿಕೆಯಿದೆ. ಮೆಕ್ಕೆಜೋಳ ತೆನೆ ಕಟಾವಿಗೆ ದಿನವೊಂದಕ್ಕೆ ಒಬ್ಬ ಕಾರ್ಮಿಕರಿಗೆ ₹300 ಕೂಲಿ ಪಾವತಿಸುವ ಅನಿವಾರ್ಯತೆ ಇದೆ.

‘ಮಂಗಳವಾರ ಮದ್ಯಾಹ್ನ ಮಳೆ ಸುರಿದು ಶೇಂಗಾ ಕೀಳಲು ಮಣ್ಣು ಹದವಾಗಿದೆ. ಕೂಲಿ ಕಾರ್ಮಿಕರ ಡಿಮ್ಯಾಂಡ್ ಹೆಚ್ಚಿರುವ ಕಾರಣ ಶೇಂಗಾ ಬಳ್ಳಿ ಕಿತ್ತು ಕೊಡಲು ಮೂರುವರೆ ಎಕರೆ ಗುತ್ತಿಗೆ ಕೊಟ್ಟಿದ್ದೇವೆ. ಈಗ ಶೇಂಗಾ ಕಾಯಿ ಪ್ರತ್ಯೇಕಿಸಲು ಒಕ್ಕಣೆ ಯಂತ್ರ ಬಾಡಿಗೆಗೆ ಹುಡುಕುತ್ತಿದ್ದೇವೆ’ ಎಂದು ರೈತ ಶೇಖರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.