ADVERTISEMENT

ಸ್ಪಾಂಜ್‌ ಐರನ್‌ ಕಂಪನಿಗೆ ಆನ್‌ಲೈನ್‌ನಲ್ಲಿ ₹2.11 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 15:51 IST
Last Updated 3 ಸೆಪ್ಟೆಂಬರ್ 2024, 15:51 IST
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ನಗರದ ‘ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ಆನ್‌ಲೈನ್‌ನಲ್ಲಿ ₹2.11 ಕೋಟಿ ವಂಚನೆ ಮಾಡಲಾಗಿದೆ. 

ಈ ಕುರಿತು ಕಂಪನಿ ಉಪಾಧ್ಯಕ್ಷ ನಗರದ ಸಿಇಎನ್‌ ಠಾಣೆಗೆ ಮಂಗಳವಾರ ದೂರು ನೀಡಿದ್ದು, ಮಧ್ಯಪ್ರದೇಶದ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 

ಕಂಪನಿಯು ಸ್ಪಾಂಜ್‌ ಐರನ್‌ ವ್ಯವಹಾರ ನಡೆಸುತ್ತಿದ್ದು, ವಿವಿಧೆಡೆಗಳಿಂದ ಕಚ್ಚಾ ಕಲ್ಲಿದ್ದಲು ಮಾಲನ್ನು ಖರೀದಿ ಮಾಡಿ, ನಂತರ ಅವರಿಗೆ ಹಣ ಪಾವತಿ ಮಾಡುತ್ತಿತ್ತು. ಅದೇ ರೀತಿ ಈಗ್ಗೆ 7ರಿಂದ 8 ವರ್ಷಗಳಿಂದ ‘ಅಗರ್‌ವಾಲ್‌ ಕೋಲ್‌ ಕಂಪನಿ’ಯೊಂದಿಗೆ ವ್ಯಾಪಾರ ವ್ಯವಹಾರ ನಡೆಸುತ್ತಿತ್ತು. ಆ ಕಂಪನಿ ಸೂಚಿಸಿದ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುತ್ತಿತ್ತು ಎನ್ನಲಾಗಿದೆ. 

ADVERTISEMENT

ಇತ್ತೀಚೆಗೆ ಅಗರ್‌ವಾಲ್‌ ಕಂಪನಿ ಹೆಸರಲ್ಲಿ ತಮ್ಮ ಕಂಪನಿಗೆ ಬಂದ ನಕಲಿ ಇ–ಮೇಲ್‌ನಲ್ಲಿ ‘ನಮ್ಮ ಕಂಪನಿಯ ಬ್ಯಾಂಕ್‌ ಖಾತೆ ಬದಲಾಗಿದೆ’ ಎಂದು ಹೇಳಲಾಗಿತ್ತು. ಜತೆಗೆ, ನಿರ್ದಿಷ್ಟ ಖಾತೆ ಸಂಖ್ಯೆಯನ್ನು ನೀಡಿ, ಅದಕ್ಕೆ ಹಣ ಹಾಕುವಂತೆ ತಿಳಿಸಲಾಗಿತ್ತು.  ಅದನ್ನು ನಂಬಿದ ಕಂಪನಿಯ ಹಣಕಾಸು ವಿಭಾದವರು ಹದಿನೈದು ದಿನಗಳ ಅಂತರದಲ್ಲಿ ಹಂತ ಹಂತವಾಗಿ ₹2,11,50,224 ಹಣ ಹಾಕಿದ್ದಾರೆ. 

ತಮಗೆ ಆನ್‌ಲೈನ್‌ನಲ್ಲಿ ವಂಚನೆಯಾಗಿರುವುದು ಕಂಪನಿಗೆ ತಡವಾಗಿ ಗೊತ್ತಾಗಿದ್ದು,ದೂರು ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಪಾವತಿಯಾದ ₹30 ಲಕ್ಷ ಹಣವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.