ADVERTISEMENT

ಬಳ್ಳಾರಿ ಜಿಲ್ಲೆಯ ವಿವಿಧೆಡೆ ಮೊಹರಂ ನಿಷೇಧ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:02 IST
Last Updated 7 ಜುಲೈ 2024, 16:02 IST

ಬಳ್ಳಾರಿ: ಭಾನುವಾರದಿಂದ ಜುಲೈ 17 ರವರೆಗೆ ಜರುಗಬೇಕಿದ್ದ ಮೊಹರಂ ಹಬ್ಬದ ಆಚರಣೆಯನ್ನು ಜಿಲ್ಲೆಯ ವಿವಿಧ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ನಿಷೇಧಿಸಿ ಬಳ್ಳಾರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿವಿಧ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ಗುಂಪುಗಳ ನಡುವೆ ವೈಶಮ್ಯ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮೊಹರಂ ಆಚರಿಸುವ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯಸ್ಥೆಗೆ ಧಕ್ಕೆ ಉಂಟಾಗುವ ಬಗ್ಗೆ ವರದಿಗಳು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. 

ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 (ಎ) (ಬಿ) (ಡಿ) (ಇ)ರ ಅಡಿಯಲ್ಲಿ ಮೊಹರಂ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಜನರು ಗುಂಪು ಸೇರದಂತೆ, ಮೆರವಣಿಗೆ ನಡೆಸದಂತೆ ಮತ್ತು ಪಂಜಾಗಳನ್ನು ಕೂಡಿಸದಂತೆ ಆದೇಶದಲ್ಲಿ ತಿಳಿಸಲಾಗಿದೆ. 

ADVERTISEMENT

ಮೊಹರಂಗೆ ನಿಷೇಧವಿರುವ ಗ್ರಾಮಗಳು: ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆಯ (ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್ ಪಕ್ಕದಲ್ಲಿ) ಮಹಾನಂದಿಕೊಟ್ಟಂ ಒಳ ಭಾಗ.

ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸೂಗೂರು, ಮುದೇನೂರು, ಹೀರೆಹಾಳ್, ನಾಡಂಗ, ಬಂಡ್ರಾಳ್, ದೇಶನೂರು, ಕೆ.ಬೆಳಗಲ್ ಗ್ರಾಮಗಳು.

ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರಹೊಸಳ್ಳಿ, ಉಡೇಗೋಳ, ಅರಳಿಗನೂರು ಗ್ರಾಮಗಳು.

ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು ಗ್ರಾಮಗಳು. ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯ ವಣೇನೂರು, ಜಾಲಿಬೆಂಚಿ ಗ್ರಾಮಗಳು.

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಲ್ಲು, ಕಪ್ಪಗಲ್ಲು, ಸಂಜೀವರಾಯನಕೋಟೆ ಗ್ರಾಮಗಳು. ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಡಿ.ಅಂತಾಪುರ, ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಂ.15-ಗೋನಾಳು ಗ್ರಾಮದಲ್ಲಿ ಮೊಹರಂ ನಿಷೇಧಿಸಲಾಗಿದೆ.

ಇವುಗಳನ್ನು ಮಾಡುವಂತಿಲ್ಲ: ಶಸ್ತ್ರ, ಬಡಿಗೆ, ಬರ್ಜಿ, ಗದೆ, ಬಂದೂಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತು, ಸ್ಪೋಟಕ ವಸ್ತು ಒಯ್ಯುವಂತಿಲ್ಲ. ಯಾವುದೇ ವ್ಯಕ್ತಿಗಳ ಭಾವಚಿತ್ರಗಳನ್ನು ಅವಮಾನಕಾರಿ ರೀತಿಯಲ್ಲಿ ಪ್ರದರ್ಶಿಸಬಾರದು.

ಬಹಿರಂಗವಾಗಿ ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಪ್ರದರ್ಶನವನ್ನು, ಸಭ್ಯತೆ ಅಥವಾ ನೀತಿ ಉಲ್ಲಂಘಿಸುವುದು, ವಸ್ತು, ತಯಾರಿ, ಪ್ರದರ್ಶನ ಅಥವಾ ಪ್ರಸಾರವನ್ನು ತಡೆಯುವುದು ಹಾಗೂ ಗುಂಪುಗೂಡಿ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.