ADVERTISEMENT

ಬಳ್ಳಾರಿಯಲ್ಲಿ ಕೆಕೆಆರ್‌ಟಿಸಿ ಭದ್ರತಾ ಇನ್‌ಸ್ಪೆಕ್ಟರ್ ಹುಸೇನಪ್ಪ ಭೀಕರ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 20:21 IST
Last Updated 6 ಆಗಸ್ಟ್ 2023, 20:21 IST
ಹುಸೇನಪ್ಪ 
ಹುಸೇನಪ್ಪ    

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್‌ಸ್ಪೆಕ್ಟರ್‌ ಹುಸೇನಪ್ಪ (54) ಅವರನ್ನು ಭಾನುವಾರ ರಾತ್ರಿ ಜೈಲಿನ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಹುಸೇನಪ್ಪ ರಾತ್ರಿ 8.30ರ ಸುಮಾರಿಗೆ ಬೀದರ್‌ಗೆ ಹೊರಡಲು ಬ್ಯಾಗ್‌ ತೆಗೆದುಕೊಂಡು ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದಾಗ ಅಪರಿಚಿತರು ಬೈಕ್‌ನಲ್ಲಿ ಬಂದು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೆಕೆಆರ್‌ಟಿಸಿ ಮೂಲಗಳು ತಿಳಿಸಿವೆ.

ಬೀದರ್‌ನಲ್ಲಿ ನಡೆಯುತ್ತಿರುವ ಚಾಲಕರ ನೇಮಕಾತಿ ಪರೀಕ್ಷೆಗೆ ಅವರನ್ನು ನಿಯೋಜನೆ ಮಾಡಲಾಗಿತ್ತು. ಮನೆಯಿಂದ ಕೂಗಳತೆ ದೂರದಲ್ಲಿ ಅವರ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ಕೂಗಿಕೊಂಡು ತಪ್ಪಿಸಿಕೊಳ್ಳಲು ಮನೆಯೊಂದರ ಸಮೀಪಕ್ಕೆ ಅವರು ಓಡಿದರು. ಪುನಃ ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲ್ಲಲಾಗಿದೆ. ಹುಸೇನಪ್ಪ ಅವರ ಕಿರುಚಾಟ ಕೇಳಿ ಮನೆಯವರು ಹೊರಗೆ ಓಡಿಬಂದರು. ಆ ವೇಳೆಗೆ ಆರೋಪಿಗಳು ಬೈಕ್‌ನಲ್ಲಿ ಪರಾರಿ ಆದರು ಎಂದು ಮೂಲಗಳು ಹೇಳಿವೆ.

ADVERTISEMENT

ಮೂಲತಃ ರಾಯಚೂರು ಜಿಲ್ಲೆಯವರಾದ ಹುಸೇನಪ್ಪ 20 ವರ್ಷಗಳಿಂದ ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ ಅವರು ಬಡ್ತಿಯ ಮೇಲೆ ಉನ್ನತ ಹುದ್ದೆಗೆ ಬಂದಿದ್ದರು. ಐದು ವರ್ಷದ ಹಿಂದೆ ಅವರಿಗೆ ಭದ್ರತಾ ಇನ್‌ಸ್ಪೆಕ್ಟರ್‌ ಹುದ್ದೆಗೆ ಬಡ್ತಿ ಸಿಕ್ಕಿತ್ತು ಎಂದು ಮೂಲಗಳು ತಿಳಿಸಿವೆ.

ಹುಸೇನಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬ ಪುತ್ರಿ ಇದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್ ಬಂಡಾರು, ಎಎಸ್‌ಪಿ ಎಂ.ಎ. ನಟರಾಜ್‌, ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ್‌ ಹಾಗೂ ಡಿಟಿಒ ಚಾಮರಾಜ್‌ ಸ್ಥಳಕ್ಕೆ ಭೇಟಿ ನೀಡಿದ್ದರು.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ‍ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.