ADVERTISEMENT

ನಲಪಾಡ್ ಹಲ್ಲೆ: ಆರೋಪ ಸುಳ್ಳು– ಸಿದ್ದು ಹಳ್ಳೇಗೌಡ

ರಾಜಕೀಯ ಶಿಸ್ತು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ– ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 19:40 IST
Last Updated 20 ಜನವರಿ 2022, 19:40 IST
ಮೊಹಮ್ಮದ್‌ ನಲಪಾಡ್
ಮೊಹಮ್ಮದ್‌ ನಲಪಾಡ್    

ಬೆಂಗಳೂರು: ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆದರೆ, ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿರುವ ಸಿದ್ದು ಹಳ್ಳೇಗೌಡ, ‘ಹಲ್ಲೆ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇದು ಬಿಜೆಪಿಯವರ ಷಡ್ಯಂತ್ರ. ಯುವ ಕಾಂಗ್ರೆಸ್‌ನಲ್ಲಿ ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ’ ಎಂದಿದ್ದಾರೆ.

ನಗರದ ಜೆ. ಡಬ್ಲ್ಯು ಮ್ಯಾರಿಯೆಟ್‌ ಹೋಟೆಲ್‌ನಲ್ಲಿ ಬುಧವಾರ ಮಧ್ಯಾಹ್ನ ಯುವ ಕಾಂಗ್ರೆಸ್‌ ಜಿಲ್ಲಾ ಘಟಕಗಳ ಅಧ್ಯಕ್ಷರ ಜೊತೆ ನಲಪಾಡ್‌ ಸಭೆ ನಡೆಸಿದ್ದರು. ಆ ವೇಳೆ, ಮುಂದಿನ ಅಧ್ಯಕ್ಷರಾಗಿ ಫೆಬ್ರುವರಿ 1ರಂದು ಪ್ರಮಾಣವಚನ ತೆಗೆದುಕೊಳ್ಳುವ ಬಗ್ಗೆ ಅವರು ಪ್ರಸ್ತಾಪಿಸಿದ್ದರು. ಯಲಹಂಕದ ಕ್ಲಬ್‍ ಒಂದರಲ್ಲಿ ರಾತ್ರಿಯ ಭೋಜನಕ್ಕೆ ಎಲ್ಲರೂ ಮತ್ತೆ ಸೇರಿದ್ದರು. ಈ ವೇಳೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ADVERTISEMENT

‘ಹಲ್ಲೆ ವಿಚಾರವಾಗಿ ನನ್ನ ಪಾತ್ರ ಏನೂ ಇಲ್ಲ. ಹುಡುಗರು ಏನೋ ಗಲಾಟೆ ಮಾಡಿಕೊಂಡಿರಬೇಕು. ಗುರುವಾರ ಬೆಳಿಗ್ಗೆ ಈ ವಿಷಯ ನನಗೆ ಗೊತ್ತಾಗಿದೆ. ನಲಪಾಡ್‍ದು ಏನೂ ತಪ್ಪು ಇಲ್ಲ ಎಂದು ಅವರೇ (ಸಿದ್ದು ಹಳ್ಳೇಗೌಡ) ಸ್ಪಷ್ಟಪಡಿಸಿದ್ದಾರೆ’ ಎಂದು ನಲಪಾಡ್‌ ತಿಳಿಸಿದ್ದಾರೆ.

ಯುವ ಕಾಂಗ್ರೆಸ್‌ನಲ್ಲಿ ಗಲಾಟೆ ನಡೆದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಯಾವುದೇ ಗಲಾಟೆ ಆಗಿಲ್ಲ. ನಾನು ಆ ಹುಡುಗನ ಬಳಿ ಮಾತನಾಡಿದ್ದೇನೆ. ಯಾರಾದರೂ ಕೆಲಸ ಮಾಡುತ್ತಿದ್ದಾರೆ ಎಂದರೆ ಅಂಥವರ ವಿರುದ್ಧ ಈ ರೀತಿ ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಈ ಘಟನೆ ಹಿಂದೆ ನಲಪಾಡ್ ಇಲ್ಲ, ಬೇರೆ ಯಾರೂ ಇಲ್ಲ. ರಾಜಕೀಯವಾಗಿ ಯಾರಾದರೂ ಶಿಸ್ತು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಆದರೆ, ಅವರ ವೈಯಕ್ತಿಕ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.