ಹೊಸಪೇಟೆ: ‘ಸ್ವಾತಂತ್ರ್ಯ ಚಳವಳಿ, ಮಹಾತ್ಮ ಗಾಂಧೀಜಿಯವರ ಪುಣ್ಯದಿಂದ ಕಾಂಗ್ರೆಸ್ ಸುದೀರ್ಘ ವರ್ಷ ಈ ದೇಶದಲ್ಲಿ ಆಡಳಿತ ನಡೆಸಿದೆ. ಆದರೆ, ಭ್ರಷ್ಟಾಚಾರ, ವಂಶಾಡಳಿತ, ಜಾತಿವಾದದ ಆಡಳಿತ ಹಾಗೂ ತುಷ್ಟೀಕರಣದ ರಾಜಕಾರಣದಿಂದ ಅದು ಅವನತಿ ಹೊಂದುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾನುವಾರ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಜೆಪಿ ರಾಷ್ಟ್ರ ಧರ್ಮದ ಹಾದಿಯಲ್ಲಿ ನಡೆದಿದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಹಗರಣ ನಡೆದಿಲ್ಲ. ಕಾಂಗ್ರೆಸ್‌ಗಿಂತ ಬಿಜೆಪಿ ಭಿನ್ನ ಎನ್ನುವುದಕ್ಕೆ ಇದು ಸಾಕ್ಷಿ’ ಎಂದರು.
‘ಗಾಂದಿಗೂ ಇಂದಿರಾ ಗಾಂಧಿಗೂ ಏನು ಸಂಬಂಧ? ಆ ಹೆಸರಿನಲ್ಲಿ ಮತ ಪಡೆದು ಕಾಂಗ್ರೆಸ್ ಅಧಿಕಾರ ಅನುಭವಿಸಿದೆ. ಜಾತಿ– ಮತ, ಬಹುಸಂಖ್ಯಾತ–ಅಲ್ಪಸಂಖ್ಯಾತರು ಎಂದು ಕಾಂಗ್ರೆಸ್ ವಿಭಜನೆ ಮಾಡಿತು. ಭಾರತ ಧ್ವಜ, ದೇಶ ವಿಭಜನೆಯಾಗಿದ್ದು ಕಾಂಗ್ರೆಸ್‌ನಿಂದ. ಹೀಗಾಗಿಯೇ ಜನ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ’ ಎಂದು ಹೇಳಿದರು.
‘ಮೋದಿಯವರು ಈ ದೇಶದ ಚುಕ್ಕಾಣಿ ಹಿಡಿದ ನಂತರ ರಾಜಕೀಯ, ಆಡಳಿತಾತ್ಮಕ ಹಾಗೂ ಮಾನಸಿಕವಾಗಿ ಪರಿವರ್ತನೆಗಳು ಆಗಿವೆ. 2014ರ ಹಿಂದೆ ರಾಜಕಾರಣಿಗಳೆಂದರೆ ಕಳ್ಳರು, ಭ್ರಷ್ಟರು ಎಂಬ ಅಭಿಪ್ರಾಯವಿತ್ತು. ಈಗ ಅದು ಬದಲಾಗಿದೆ. ರಾಜಕೀಯಕ್ಕೆ ಅನೇಕರು ಬರುತ್ತಿದ್ದಾರೆ’ ಎಂದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ. ಪುರಂದೇಶ್ವರಿ ಮಾತನಾಡಿ, ‘ಮೋದಿಯವರು ಈ ದೇಶದ ಪ್ರಧಾನಿಯಾದರೂ ಅವರೊಳಗಿನ ಒಬ್ಬ ಸಾಮಾನ್ಯ ಕಾರ್ಯಕರ್ತ ಎಂಬ ಮನೋಭಾವ ಹೋಗಿಲ್ಲ. ಅದು ಪಕ್ಷದ ಪ್ರತಿಯೊಬ್ಬರಲ್ಲಿ ಬರಬೇಕು. ಅಧಿಕಾರ, ಸ್ಥಾನಮಾನ ಸಿಕ್ಕರೂ ನಮ್ಮೊಳಗಿನ ಕಾರ್ಯಕರ್ತ ಸದಾ ಜೀವಂತ ಇರಬೇಕು. ಅದು ನಮ್ಮನ್ನು ಬೆಳೆಸುವುದರ ಜತೆಗೆ ಪಕ್ಷವನ್ನೂ ಬೆಳೆಸುತ್ತದೆ’ ಎಂದು ಹೇಳಿದರು.
‘ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಮಹಿಳೆಯರನ್ನು ಇದುವರಗೆ ಮತ ಬ್ಯಾಂಕ್ ಆಗಿ ಬಳಸಿಕೊಂಡಿವೆ. ಆದರೆ, ಬಿಜೆಪಿ ಅವರನ್ನು ಗೌರವಿಸಿದೆ. ಅವರ ಕಲ್ಯಾಣಕ್ಕಾಗಿ ಜನ್ ಧನ್, ಜೀವನ್ ಜ್ಯೋತಿ ಜೀವನ್ ಸುರಕ್ಷಾ, ಮಾತೃತ್ವ ಸುರಕ್ಷಾ, ಮಾತೃತ್ವ ವಂದನಾ, ಇಂದ್ರಧನುಷ್, ಸುಕನ್ಯಾ ಸಮೃದ್ದಿ, ಭಾಗ್ಯಲಕ್ಷ್ಮಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಹೆಣ್ಣು, ಗಂಡು ಸಮಾಜದ ಎರಡು ಕಣ್ಣು. ಬಡವನ ಮನೆಯಲ್ಲಿ ಹೆಣ್ಣು ಹುಟ್ಟಿದರೆ ಅದು ದರಿದ್ರವಲ್ಲ ಲಕ್ಷ್ಮಿ, ಭಾಗ್ಯಲಕ್ಷ್ಮಿ ಎಂಬ ಭಾವನೆ ಬರಬೇಕು. ಆ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕೆಲಸ ಮಾಡುತ್ತಿವೆ’ ಎಂದು ಹೇಳಿದರು.
ಸಂಸದ ವೈ. ದೇವೇಂದ್ರಪ್ಪ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಜೆ. ಶಾಂತಾ, ನೇಮರಾಜ ನಾಯ್ಕ ಇದ್ದರು.
ಬೈಕ್ ರ್‍ಯಾಲಿಯಲ್ಲಿ ಜೀಪ್ ಓಡಿಸಿದ ಸಚಿವ
ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಸಚಿವ ಆನಂದ್ ಸಿಂಗ್ ತೆರೆದ ಜೀಪ್‌ಗೆ ಚಾಲನೆ ಮಾಡಿದರು. ಅವರ ಪಕ್ಕ ನಳಿನ್ ಕುಮಾರ್ ಕಟೀಲ್ ಆಸೀನರಾದರೆ, ಡಿ. ಪುರಂದೇಶ್ವರಿ, ಸಚಿವೆ ಶಶಿಕಲಾ ಜೊಲ್ಲೆ, ಗೀತಾ ವಿವೇಕಾನಂದ ಜೀಪ್‌ನಲ್ಲಿ ನಿಂತುಕೊಂಡಿದ್ದರು.
ಅಮರಾವತಿ ಅತಿಥಿ ಗೃಹದಿಂದ ಆರಂಭಗೊಂಡ ರ್‍ಯಾಲಿಯು ಪ್ರಮುಖ ಮಾರ್ಗಗಳ ಮೂಲಕ ಹಾದು ಕಾರ್ಯಕ್ರಮ ಏರ್ಪಡಿಸಿದ್ದ ಪ್ರಿಯದರ್ಶಿನಿ ಪ್ರೈಡ್ ಹೋಟೆಲ್ ಬಳಿ ಕೊನೆಗೊಂಡಿತು.
‘ಸರ್ಕಾರದ ಯೋಜನೆಗಳು ಗೊತ್ತಿಲ್ಲ’
‘ನಾನೊಬ್ಬ ಸಚಿವ. ಆದರೆ, ನನಗೆ ಸರ್ಕಾರದ ಅನೇಕ ಯೋಜನೆಗಳ ಬಗ್ಗೆ ಗೊತ್ತಿಲ್ಲ. ಇದನ್ನು ಹೇಳಿಕೊಳ್ಳುವುದಕ್ಕೆ ನಾಚಿಕೆಯೂ ಇಲ್ಲ. ಇದರ ಬಗ್ಗೆ ಟೀಕೆ ವ್ಯಕ್ತವಾಗಬಹುದು. ಆದರೆ, ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
‘ಬರುವ ದಿನಗಳಲ್ಲಿ ನಾನು ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವೆ. ಅದರಂತೆ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಅವುಗಳ ಬಗ್ಗೆ ತಿಳಿದುಕೊಂಡರೆ ಜನರಿಗೆ ತಿಳಿಸಬಹುದು. ಸಭೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.