ADVERTISEMENT

ಹೆಸರಿಗಷ್ಟೇ ಘನತ್ಯಾಜ್ಯ ನಿರ್ವಹಣೆ ಘಟಕ

32 ಎಕರೆ ವಿಶಾಲ ಪ್ರದೇಶದಲ್ಲಿ ಇನ್ನೂ ಆರಂಭವಾಗದ ತ್ಯಾಜ್ಯ ಸಂಸ್ಕರಣೆ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜೂನ್ 2019, 19:30 IST
Last Updated 3 ಜೂನ್ 2019, 19:30 IST
ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿದು ಬೆಂಕಿ ಹಚ್ಚಿರುವುದರಿಂದ ಎಲ್ಲೆಡೆ ಹೊಗೆ ಆವರಿಸಿಕೊಂಡಿರುವುದು
ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿದು ಬೆಂಕಿ ಹಚ್ಚಿರುವುದರಿಂದ ಎಲ್ಲೆಡೆ ಹೊಗೆ ಆವರಿಸಿಕೊಂಡಿರುವುದು   

ಹೊಸಪೇಟೆ: ನಗರದ ಹೊರವಲಯದ ಜಂಬುನಾಥಹಳ್ಳಿ ರಸ್ತೆ ಬಳಿಯಿರುವ ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಘಟಕ ಹೆಸರಿಗಷ್ಟೇ ಸೀಮಿತವಾಗಿದೆ.

ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಸಮಪರ್ಕವಾಗಿ ಘಟಕಕ್ಕೆ ವಿಲೇವಾರಿ ಮಾಡುವುದು. ನಂತರ ಅಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ಘಟಕವನ್ನು ಸ್ಥಾಪಿಸಲಾಯಿತು.

ಗುಡ್ಡಕ್ಕೆ ಹೊಂದಿಕೊಂಡಿರುವ ಜಾಗವನ್ನು ಸಮತಟ್ಟುಗೊಳಿಸಿ ಗೋದಾಮು, ಗೊಬ್ಬರ ತಯಾರಿಕೆಗೆ ಕಟ್ಟಡ, ಕಸವನ್ನು ಪ್ರತ್ಯೇಕಗೊಳಿಸಲು ಹೊಂಡವನ್ನು ನಿರ್ಮಿಸಲಾಗಿದೆ. ಸುತ್ತಲೂ ಕಾಂಪೌಂಡ್‌ ನಿರ್ಮಿಸಿ, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕ್ರಷರ್‌ ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ.

ADVERTISEMENT

ವಾರ್ಡ್‌ಗೊಂದರಂತೆ ಟಿಪ್ಪರ್‌ಗಳನ್ನು ಬಿಟ್ಟು ಅವುಗಳ ಮೂಲಕ ಬಡಾವಣೆಗಳ ಜನರಿಂದ ಕಸವನ್ನು ಸಂಗ್ರಹಿಸಲಾಗುತ್ತಿದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಘಟಕಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆದರೆ,ಘನತ್ಯಾಜ್ಯ ನಿರ್ವಹಣೆ, ಸಂಸ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇಡೀ ಘಟಕ ತ್ಯಾಜ್ಯ ಸುರಿಯುವ ಸ್ಥಳವಾಗಿ ಬದಲಾಗಿದೆ.

ಘಟಕದ ಪ್ರವೇಶ ದ್ವಾರದ ಬಳಿ ಕಸದ ಗುಡ್ಡೆ ಬಿದ್ದಿದೆ. ಎಲ್ಲೇ ಆಗಲಿ ಕಸಕ್ಕೆ ಬೆಂಕಿ ಹಾಕಬಾರದು ಎಂದು ಸ್ವತಃ ನಗರಸಭೆಯೇ ಪ್ರಚಾರ ಮಾಡುತ್ತದೆ. ಆದರೆ, ಅಲ್ಲಿ ನಿತ್ಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಹೀಗೆ ಬೆಂಕಿ ಹಚ್ಚುವುದರಿಂದ ಕಸ ಗಾಳಿಗೆ ತೂರಿಕೊಂಡು ಹೋಗಿ ಸುತ್ತಮುತ್ತಲಿನ ಮರ, ಗಿಡಗಳು ಸುಟ್ಟು ಕರಕಲಾಗುತ್ತಿವೆ. ಎಲ್ಲೆಂದರಲ್ಲಿ ತ್ಯಾಜ್ಯ ಹರಡಿಕೊಂಡಿದೆ. ದಟ್ಟ ಹೊಗೆ ಹಾಗೂ ದುರ್ಗಂಧ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ. ಯಾವ ಉದ್ದೇಶಕ್ಕಾಗಿ ಘಟಕವನ್ನು ಸ್ಥಾಪಿಸಲಾಗಿತ್ತೋ ಅದು ಈಡೇರಿಲ್ಲ.

ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದು ಮತ್ತು ಸಂಸ್ಕರಣೆಗೊಳಿಸುವ ಸಂಬಂಧ ಸ್ಥಳೀಯ ವಿಕಾಸ ಸೇವಾ ಸಂಸ್ಥೆ ಸೇರಿದಂತೆ ಇತರೆ ಸಂಘಟನೆಗಳು ನಗರಸಭೆಗೆ ವರದಿ ಕೊಟ್ಟಿವೆ. ಆದರೆ, ಆ ವರದಿ ಮೇಲೆ ಕಣ್ಣಾಡಿಸಿರುವ ಸಾಧ್ಯತೆ ಇದ್ದಂತಿಲ್ಲ. ಇಲ್ಲವಾದಲ್ಲಿ ಘಟಕ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿತ್ತು.

‘ವೈಜ್ಞಾನಿಕ ಮತ್ತು ವ್ಯವಸ್ಥಿತವಾಗಿ ಕಸ ವಿಲೇವಾರಿ, ನಿರ್ವಹಣೆಗೆ ಸಂಬಂಧಿಸಿದಂತೆ ನಗರಸಭೆಗೆ ವಿಸ್ತೃತವಾದ ಯೋಜನಾ ವರದಿಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಸಲ್ಲಿಸಲಾಗಿದೆ. ಈ ಕುರಿತು ಪರಿಸರ ಎಂಜಿನಿಯರ್‌ಗಳಿಗೂ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಅದು ಜಾರಿಗೆ ಬಂದಿಲ್ಲ’ ಎಂದು ವಿಕಾಸ ಸೇವಾ ಸಂಸ್ಥೆಯ ಕಸ ನಿರ್ವಹಣೆ ವಿಭಾಗದ ಪ್ರತಿನಿಧಿ ಅನಂತ ಜೋಷಿ ಹೇಳಿದರು.

‘ನಿತ್ಯ ನಗರದಲ್ಲಿ 60 ಟನ್‌ಗೂ ಅಧಿಕ ತ್ಯಾಜ್ಯ ಉತ್ಪಾದನೆಯಾಗುತ್ತದೆ. ತರಕಾರಿ, ಹಣ್ಣುಗಳಂತಹ ತ್ಯಾಜ್ಯದಿಂದ ನೇರವಾಗಿ ಗೊಬ್ಬರ ಉತ್ಪಾದಿಸಬಹುದು. ಈಗಾಗಲೇ ಎಲ್ಲ ಬಡಾವಣೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ವಾಣಿಜ್ಯ ಮಳಿಗೆಯವರಿಗೆ ಅರಿವು ಮೂಡಿಸಬೇಕು. ಶೇ 50ರಷ್ಟು ಕೆಲಸ ತಿಳಿವಳಿಕೆ ಮೂಡಿಸುವುದರಿಂದ, ಶೇ 50ರಷ್ಟು ಕೆಲಸ ಘಟಕದಲ್ಲಿ ಮಾಡಿದರೆ ತ್ಯಾಜ್ಯದ ಸಮಸ್ಯೆಯೇ ಇರುವುದಿಲ್ಲ’ ಎಂದರು.

‘ವಿಶ್ವ ಪ್ರವಾಸಿ ತಾಣ ಹಂಪಿ ಸನಿಹದಲ್ಲೇ ಇರುವುದರಿಂದ ನಿತ್ಯ ನೂರಾರು ಜನ ದೇಶ–ವಿದೇಶಗಳಿಂದ ಬರುತ್ತಾರೆ. ಸ್ವಚ್ಛ–ಸುಂದರ ನಗರವಾಗಿ ಮಾಡಬೇಕಾದರೆ ತ್ಯಾಜ್ಯ ನಿರ್ವಹಣೆ ಅತ್ಯಗತ್ಯ. ಈಗಾಗಲೇ ಘಟಕದಲ್ಲಿ ಅಗತ್ಯ ಸೌಕರ್ಯಗಳಿವೆ. ತಜ್ಞರ ಮಾರ್ಗದರ್ಶನದ ಮೇರೆಗೆ ಕೆಲಸ ಆರಂಭಿಸಬಹುದು’ ಎಂದು ಹೇಳಿದರು.

‘ಕಾರಣಾಂತರಗಳಿಂದ ಕೆಲಸ ನನೆಗುದಿಗೆ ಬಿದ್ದಿದೆ. ಘಟಕದಲ್ಲಿ ಇನ್ನೂ ಕೆಲವೆಡೆ ಗುಡ್ಡ ಸಮತಟ್ಟುಗೊಳಿಸುವ ಕೆಲಸವಾಗಬೇಕಿದೆ. ನಾವು ಕಳುಹಿಸಿರುವ ಯೋಜನಾ ವರದಿಗೆ ಸರ್ಕಾರದಿಂದ ಅನುಮತಿ ಸಿಕ್ಕ ನಂತರ ಟೆಂಡರ್‌ ಕರೆಯಲಾಗುವುದು. ಅದಾದ ಮೂರ್ನಾಲ್ಕು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ’ ಎಂದು ನಗರಸಭೆ ಪೌರಾಯುಕ್ತ ವಿ. ರಮೇಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.