ಬಳ್ಳಾರಿ: ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ’ (ರಾಬಕೊವಿ) ವ್ಯಾಪ್ತಿಯಲ್ಲಿ ‘ನಂದಿನಿ’ ಹಾಲು ಉತ್ಪಾದನೆ ಹೆಚ್ಚಾಗಿದೆ. ಹೆಚ್ಚುವರಿ ಹಾಲನ್ನು ತೆಲಂಗಾಣದಲ್ಲಿ ಮಾರಲು ಒಕ್ಕೂಟ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ಹಾಲು ಪೂರೈಕೆ ಆಗಲಿದೆ.
ಈ ಪ್ರಕ್ರಿಯೆಗೆ ವಾರಂಗಲ್ ಜಿಲ್ಲೆಯಲ್ಲಿ ಖಾಸಗಿ ಡೇರಿ ಗುರುತಿಸಲಾಗಿದ್ದು, ಅಲ್ಲಿಗೆ ಹಾಲು ರವಾನಿಸಲಾಗುವುದು. ಅಲ್ಲಿ ಹಾಲನ್ನು ಸಂಸ್ಕರಿಸಿ, ವಿವಿಧ ಮಾದರಿಗಳಲ್ಲಿ ಬ್ರ್ಯಾಂಡಿಂಗ್ ಮಾಡಿ ಮಾರುಕಟ್ಟೆಗೆ ತಲುಪಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗಳಿಗೆ ಟೆಂಡರ್ ಪೂರ್ಣಗೊಂಡಿದ್ದು, ಗುತ್ತಿಗೆದಾರರ ಜೊತೆಗೆ ಕರಾರು ಒಪ್ಪಂದ ಆಗುವ ಹಂತದಲ್ಲಿದೆ.
ಆರಂಭಿಕ ಹಂತದಲ್ಲಿ ನಿತ್ಯ 20 ಸಾವಿರ ಲೀಟರ್ ಹಾಲನ್ನು ತೆಲಂಗಾಣಕ್ಕೆ ಪೂರೈಸಿ, ನಂತರದ ದಿನಗಳಲ್ಲಿ ಮಾರುಕಟ್ಟೆ ವಿಸ್ತರಿಸುವ ಉದ್ದೇಶ ಒಕ್ಕೂಟ ಹೊಂದಿದೆ. ಸದ್ಯಕ್ಕೆ ‘ಟೋನ್ಡ್’, ‘ಸ್ಪೆಷಲ್ ಟೋನ್ಡ್’, ‘ಶುಭಂ ಸ್ಟಾಂಡರ್ಡ್’, ‘ಫುಲ್ ಕ್ರೀಮ್’ ಹಾಲನ್ನು ಮಾತ್ರ ಪೂರೈಸಲು ನಿರ್ಧರಿಸಲಾಗಿದೆ.
ಒಕ್ಕೂಟದ ನಾಲ್ಕು ಜಿಲ್ಲೆಗಳಲ್ಲಿ ನಿತ್ಯ 2.20 ಲಕ್ಷ ಕೆಜಿ ಹಾಲು ಉತ್ಪಾದನೆ ಆಗುತ್ತದೆ. ಇದರಲ್ಲಿ ರಾಯಚೂರು ಪಾಲು 25 ಸಾವಿರ ಕೆಜಿ, ಬಳ್ಳಾರಿ 7 ಸಾವಿರ ಕೆಜಿ, ಕೊಪ್ಪಳ 70 ಸಾವಿರ ಮತ್ತು ವಿಜಯನಗರ ಪಾಲು 1.18 ಲಕ್ಷ ಕೆ.ಜಿ. ಇದರಲ್ಲಿ ಒಕ್ಕೂಟದ ವ್ಯಾಪ್ತಿಯ ಗ್ರಾಹಕರಿಗೆ 1.60 ಲಕ್ಷ ಲೀಟರ್ (1.50 ಲಕ್ಷ ಲೀಟರ್ ಹಾಲು, 10 ಸಾವಿರ ಲೀಟರ್ ಮೊಸರು) ಬೇಕು. ಉಳಿದಂತೆ ‘ಮದರ್ ಡೇರಿ’ಗೆ 10 ಸಾವಿರ ಲೀಟರ್ ಹಾಲನ್ನು ಒಕ್ಕೂಟ ಪೂರೈಸುತ್ತದೆ.
ಹಾಲು ಉತ್ಪಾದನೆ ಹೆಚ್ಚಿದೆ. ಒಕ್ಕೂಟಕ್ಕೆ ನಷ್ಟವಾದರೂ ರೈತರಿಂದ ಹಾಲು ಕೊಳ್ಳಬೇಕು. ನಷ್ಟದ ಪರಿಹಾರಕ್ಕೆ ಇತರೆ ರಾಜ್ಯಗಳಲ್ಲಿ ಮಾರುಕಟ್ಟೆ ವಿಸ್ತರಿಸಲಾಗುತ್ತಿದೆ.ಪೀರ್ಯ ನಾಯಕ್, ವ್ಯವಸ್ಥಾಪಕ ನಿರ್ದೇಶಕ ರಾಬಕೊವಿ
ಹಾಲು ಉಳಿಕೆ:
‘ಬೆಣ್ಣೆ, ತುಪ್ಪ ಸೇರಿ ಹಾಲಿನ ಉಪ ಉತ್ಪನ್ನ ತಯಾರಿಸಿದರೂ ಒಕ್ಕೂಟದಲ್ಲಿ ಹೆಚ್ಚುವರಿಯಾಗಿ 30 ಸಾವಿರದಿಂದ 40 ಸಾವಿರ ಲೀಟರ್ ಹಾಲು ಉಳಿಯುತ್ತದೆ. ಅದನ್ನು ಪುಡಿ ಮಾಡುವುದು ವೆಚ್ಚದಾಯಕ ಮತ್ತು ಹಾಲು ಹಿಂದಿರುಗಿಸಿದರೆ ರೈತರಿಗೆ ನಷ್ಟ. ಅದಕ್ಕೆ ಒಕ್ಕೂಟವು ತೆಲಂಗಾಣದಲ್ಲಿ ಮಾರುಕಟ್ಟೆ ವಿಸ್ತರಿಸಲು ಉದ್ದೇಶಿಸಿದೆ’ ಎಂದು ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದರು.
‘ಹಾಲಿನ ದರ ಕರ್ನಾಟಕಕ್ಕಿಂತ ತೆಲಂಗಾಣದಲ್ಲಿ ಹೆಚ್ಚಿದೆ. ಕರ್ನಾಟಕಕ್ಕಿಂತಲೂ ಹೆಚ್ಚುವರಿ ಪ್ರತಿ ಲೀಟರ್‌ಗೆ ₹3 ರಿಂದ ₹4ರ ವರೆಗೆ ಮಾರಲು ನಿರ್ಧರಿಸಲಾಗಿದೆ. ಇದರಲ್ಲೇ ಸಾಗಣೆ, ಸಂಸ್ಕರಣಾ ವೆಚ್ಚ ಸೇರಲಿದೆ. ಬೆಲೆ ನಿಗದಿಗೆ ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳದ ಬಳಿ ಅನುಮತಿ ಕೋರಲಾಗಿದೆ’ ಎಂದರು.
ಎಲ್ಲೆಲ್ಲಿ ಹಾಲು ಪೂರೈಕೆ?
ತೆಲಂಗಾಣ ರಾಜ್ಯದ ಆದಿಲಬಾದ್ ಕಮ್ಮಮ್ ನಿಜಾಮಾಬಾದ್ ಕರೀಂ ನಗರ ಮೇಡಕ್ ರಂಗಾರೆಡ್ಡಿ ನಿರ್ಮಾಲ ಕಮಾರೆಡ್ಡಿ ನಿಜಾಮಾಬಾದ್ ಜತ್ಯಾಲ್ ಪೆದ್ದಪಲ್ಲಿ ಜಯಶಂಕರ್ ಭೂಪಾಲಪಲ್ಲಿ ಸಿದ್ದಪೇಟ ಹನುಮಕೊಂಡ ಮೊಹಬೂಬ ನಗರ್ ಜನಗಾಮ್ ಯಾದಾದ್ರಿ ನೆಲಗೊಂಡಕ್ಕೆ ಹಾಲು ಪೂರೈಕೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.