ಕೂಡ್ಲಿಗಿ: ಪಟ್ಟಣದಲ್ಲಿ ಗಾಂಧೀಜಿಯವರ ಪವಿತ್ರ ಚಿತಾ ಭಸ್ಮ ತಂದು ಪ್ರತಿಷ್ಟಾಪನೆ ಮಾಡಿ, ಗಾಂಧಿ ಅವರ ಹೆಸರು ಉಳಿಸುವುದರ ಜೊತೆಗೆ ಹುತಾತ್ಮರ ಸ್ಮಾರಕ ಎಂದು ನಾಮಕರಣ ಮಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರನ್ನೂ ಶಶ್ವಾತವಾಗಿ ಉಳಿಯುವಂತೆ ಮಾಡಲಾಗಿದೆ.
ಇದರ ರೂವಾರಿ ಬಿಂದು ಮಾಧವ ಎನ್ನುವ ಶಿಕ್ಷಕ ಎಂದರೆ ಅತಿಶಯೋಕ್ತಿಯೇನಲ್ಲ. ಗಾಂಧೀಜಿ ಹಂತಕರ ಗುಂಡಿಗೆ ಬಲಿಯಾದಾಗ ತೀರ ನೊಂದವರಲ್ಲಿ ಬಿಂದು ಮಾಧವರೂ ಒಬ್ಬರು. ಗಾಂಧಿ ಅವರ ಅಂತ್ಯದೊಂದಿಗೆ ಅವರ ಆದರ್ಶಗಳು ಅಂತ್ಯವಾಗಬಾರದು ಎಂಬುದು ಅವರ ಇಚ್ಚೆಯಾಗಿತ್ತು. ಅದಕ್ಕಾಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಗಾಂಧೀಜಿ ಚಿತಾ ಭಸ್ಮವಿರುವ ಅಪೂರ್ವ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಕಾರಣೀಬೂತರಾದರು.
ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಚಿತಾ ಭಸ್ಮ ಪಡೆಯಲು ಪತ್ರ ವ್ಯವಹಾರ ನಡೆಸಲಾಯಿತು. ಈ ಪತ್ರಗಳನ್ನು ಸಹ ಒಂದು ಲೋಹದ ಪೆಟ್ಟಿಗೆಯಲ್ಲಿಟ್ಟು ಮೊಹರು ಮಾಡಲಾಗಿದೆ. ಅಂದಿನ ಲೋಕಸಭಾ ಸದಸ್ಯರಾಗಿದ್ದ ದಿ.ಟೇಕೂರು ಸುಬ್ರಣ್ಯ ನೇತೃತ್ವದಲ್ಲಿ ಚಿತಾಭಸ್ಮವನ್ನು ಕೂಡ್ಲಿಗಿ ತರಲಾಯಿತು. ಮಾರ್ಗ ಮಧ್ಯದಲ್ಲಿ ಕೆಲ ಕಾಲ ಬಳ್ಳಾರಿಯ ಮಲ್ಲಸಜ್ಜನ ವ್ಯಾಯಮ ಶಾಲೆಯಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು.
1950ರಲ್ಲಿ ಹುತಾತ್ಮರ ದಿನಾಚರಣೆಯೊಂದು (ಜ.30)ಅಂದಿನ ಹೈದರಬಾದ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಲೋಕಸಭಾ ಸದಸ್ಯರಾಗಿದ್ದ ರಮಾನಂದ ತೀರ್ಥರು ಚಿತಾಭಸ್ಮವಿದ್ದ ಗಂಧದ ಕರಂಡಕವನ್ನು ಪ್ರತಿಷ್ಟಾಪಿಸಿದರು. ಇದಕ್ಕಾಗಿ ವಿದ್ಯಾರ್ಥಿಗಳು ಕಟ್ಟೆಯೊಂದನ್ನು ನಿರ್ಮಿಸಿದ್ದರು.
ನಂತರ 1957ರಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಒದಗಿಸಿದ ಆರ್ಥಿಕ ನೆರವಿನಿಂದ ಅಮೃತ ಶಿಲೆಯಿಂದ ನಿರ್ಮಿಸಿದ ಸುಂದರ ಭವನದಲ್ಲಿ ಭಸ್ಮದ ಕರಂಡಕವನ್ನು ಪುನರ್ ಪ್ರತಿಷ್ಠಾಪಿಸಲಾಯಿತು. ಅಖಿಲ ಭಾರತ ಗಾಂಧಿ ಸ್ಮಾರಕ ಸಮಿತಿಯ ಅಧ್ಯಕ್ಷರಾಗಿದ್ದ ರಂಗನಾಥ ದಿವಾಕರ, ಖಾದಿ ಮತ್ತು ಗ್ರಾಮದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದ ಹುಕ್ಕೇರಿಕರ್ ಅವರ ಉಪಸ್ಥಿತಿಯಲ್ಲಿ 1957ರ ಏಪ್ರಿಲ್ 6ರಂದು ವಿಧಿವತ್ತಾಗಿ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್‍ರು ನೀಡಿದ ಧನಸಹಾಯದಿಂದ ಸ್ಮಾರಕ ಸಂಪೂರ್ಣಗೊಂಡು ಮಂಟಪ ಸ್ವರೂಪವನ್ನು ಪಡೆಯಿತು. ಕಾಲ ಕಾಲಕ್ಕೆ ಅನೇಕ ಬಗೆಯ ಅನುದಾನದ ಬಿಡುಗಡೆಗೊಂಡು ಸ್ಮಾರಕ ರೂಪಾಂತರಗೊಂಡರೂ, ಚಿತಾ ಭಸ್ಮವಿರುವ ಮಂಟಪವನ್ನು ಯಥಾವತ್ತಾಗಿ ಉಳಿಸಿಕೊಂಡು ಬರಲಾಗಿದೆ.
ಇಂತಹ ಸ್ಮಾರಕಕ್ಕೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ, ದಿವಂಗತ ಪ್ರಧಾನಿ ಇಂದಿರಾಗಾಂಧಿ, ಪ್ರಥಮ ದಂಡನಾಯಕ ಜನರಲ್ ಕಾರ್ಯಪ್ಪ ಸೇರಿದಂತೆ ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಗಣ್ಯರು ಚಿತಾಭಸ್ಮಕ್ಕೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.