ADVERTISEMENT

ನೇಹಾ ಹತ್ಯೆ ಪ್ರಕರಣ: ಬಳ್ಳಾರಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 7:51 IST
Last Updated 20 ಏಪ್ರಿಲ್ 2024, 7:51 IST
   

ಬಳ್ಳಾರಿ: ಹುಬ್ಬಳ್ಳಿಯ ನೇಹಾ ಹೀರೆಮಠ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಶನಿವಾರ ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. 

ನಗರದ ನಾರಾಯಣರಾವ್‌ ಉದ್ಯಾನ (ಕಾಗೆ ಪಾರ್ಕ್‌) ದಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆಯು ಗಡಿಗಿ ಚೆನ್ನಪ್ಪ(ರಾಯಲ್) ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮ, ‘ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಿಂದುಗಳ ರಕ್ಷಣೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರ  ಆರೋಪಿಗಳನ್ನು ರಕ್ಷಣೆ ಮಾಡುತ್ತದೆ. ಅವರಿಗೆ ಶಿಕ್ಷೆ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದೂಗಳು ಹನುಮಾನ್ ಚಾಲೀಸಾ ಪಠಿಸಿದರೆ ಅವರನ್ನು ಬಂಧಿಸಲಾಗುತ್ತದೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡಲಾಗುತ್ತದೆ. ಇದು ಹಿಂದೂ ವಿರೋಧಿ ಸರ್ಕಾರವಲ್ಲದೇ ಮತ್ತೇನು’ ಎಂದು ಅವರು ಪ್ರಶ್ನಿಸಿದರು.

ಕಲ್ಯಾಣ ಸ್ವಾಮೀಜಿ, ಮಹೇಶ್ವರ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್‌ ಮೋಕಾ ಸೇರಿದಂತೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.