ADVERTISEMENT

ಬಳ್ಳಾರಿ | ಮಹಾಪೌರರ ಮೇಲೆ ಮಹಾ ನಿರೀಕ್ಷೆ

ಬಳ್ಳಾರಿ ನಗರವನ್ನು ಕಾಡುತ್ತಿವೆ ಹಲವು ಸಮಸ್ಯೆಗಳು: ಪರಿಹಾರ ಬಯಸಿದ್ದಾರೆ ಪುರದ ಜನತೆ

ಆರ್. ಹರಿಶಂಕರ್
Published 26 ಜೂನ್ 2024, 4:36 IST
Last Updated 26 ಜೂನ್ 2024, 4:36 IST
ನಗರದ ಮಿಲ್ಲರ್‌ ಪೇಟೆಯ ಓಣಿಯೊಂದರಲ್ಲಿ ವಿಲೇವಾರಿಯಾಗದೇ ತಾಂಡವವಾಡುತ್ತಿರುವ ಕಸ... 
ನಗರದ ಮಿಲ್ಲರ್‌ ಪೇಟೆಯ ಓಣಿಯೊಂದರಲ್ಲಿ ವಿಲೇವಾರಿಯಾಗದೇ ತಾಂಡವವಾಡುತ್ತಿರುವ ಕಸ...    

ಬಳ್ಳಾರಿ: ಚುನಾವಣೆ ಮುಂದೂಡಿಕೆ, ರಾಜಕೀಯ ಮೇಲಾಟ, ಪೈಪೋಟಿಗಳ ಬಳಿಕ ಅಂತೂ ಬಳ್ಳಾರಿಗೆ ಮಹಾನಗರ ಪಾಲಿಕೆಗೆ ಮೇಯರ್‌ ಉಪ ಮೇಯರ್‌ ಆಯ್ಕೆಯಾಗಿದೆ. ನಗರದ ಮಹಾಪೌರರಾಗಿ ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿರುವ ನಂದೀಶ್‌ ಮುಲ್ಲಂಗಿ ಮತ್ತು ಉಪ ಮಹಾಪೌರರಾದ ಡಿ. ಸುಕುಂ ಅವರ ಮೇಲೆ ಮಣಭಾರ ನಿರೀಕ್ಷೆಗಳಿವೆ.

ರಾಜ್ಯದಲ್ಲಿರುವ 10 ಮಹಾನಗರ ಪಾಲಿಕೆಗಳಲ್ಲಿ ಬಳ್ಳಾರಿ ಪಾಲಿಕೆಯೂ ಒಂದು. 2011ರ ಜನಗಣತಿಯ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ 4,10,445 ಜನಸಂಖ್ಯೆ ಇತ್ತು. ಈ ಪ್ರಮಾಣ ಈಗ ಹೆಚ್ಚಾಗಿದೆ. ಅದರೆ ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ವೃದ್ಧಿಯಾಗಿಲ್ಲ. ಒಟ್ಟು 81.95 ಚದರ ಕಿ.ಮೀಗಳ ವಿಸ್ತೀರ್ಣ ಹೊಂದಿರುವ ನಗರದಲ್ಲಿ 39 ವಾರ್ಡ್‌ಗಳಿವೆ. 1,25,795 ನಾಗರಿಕ ಸ್ವತ್ತುಗಳಿವೆ. ನಗರವು ಒಟ್ಟಾರೆ 1,836 ಕಿ.ಮೀಗಳಷ್ಟು ರಸ್ತೆ ಜಾಲ ಹೊಂದಿದೆ. ನಗರಕ್ಕೆ 52.20 ಎಂಎಲ್‌ಡಿ (ದಿನವೊಂದಕ್ಕೆ ದಶಲಕ್ಷ ಲೀಟರ್‌) ನೀರಿನ ಅಗತ್ಯವುಂಟು.

ಹೀಗಿರುವ ನಗರವನ್ನು ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆಗಳು ಕುಡಿಯುವ ನೀರು, ಒಳಚರಂಡಿ ಅವ್ಯವಸ್ಥೆ ಮತ್ತು ಗುಂಡಿಬಿದ್ದ ರಸ್ತೆಗಳು.

ADVERTISEMENT

‘ನಗರಕ್ಕೆ ಕುಡಿಯುವ ನೀರಿನ ಲಭ್ಯತೆಗೆ ತೊಂದರೆ ಇಲ್ಲ. ಆದರೆ, ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ’ ಎಂದು ಮೇಯರ್‌ ನಂದೀಶ್ ಅವರು ಅಧಿಕಾರ ವಹಿಕೊಂಡ ಮೊದಲ ದಿನ ಹೇಳಿದರು. ಆದರೆ, ನಗರದಲ್ಲಿ 7ರಿಂದ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವುದು ವಾಸ್ತವ. ನಗರದ ನೀರು ಪೂರೈಕೆ ಸಮಸ್ಯೆ ನಿವಾರಿಸಲು ನೇರ ಪೈಪ್‌ಲೈನ್‌ ವ್ಯವಸ್ಥೆ ಆಗಬೇಕೆಂಬ ಕೂಗಿದೆ. ಜತೆಗೆ ನಗರ ಹೊರವಲಯದ ಕೊಳಗಲ್‌ ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂಬ ಒತ್ತಾಯಗಳೂ ಇವೆ. ಇವುಗಳನ್ನು ಹೊಸ ಮೇಯರ್‌ ಹಾಗೂ ಉಪ ಮೇಯರ್‌ ಆದ್ಯತೆ ಮೇಲೆ ಪರಿಗಣಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ದೇಶದ ಪಾಲಿಕೆಗಳ ಪೈಕಿ ಬಳ್ಳಾರಿ ಪಾಲಿಕೆಗೆ 97ನೇ ಸ್ಥಾನವಿದೆ. ನಮ್ಮ ನಗರದ ಸ್ಥಾನವನ್ನು ಮೇಲೇರಿಸಲು ಮೇಯರ್‌ ಯೋಜನೆ ಹಾಕಿಕೊಳ್ಳಬೇಕು. ಸಾರ್ವಜನಿಕರ ಸಭೆಗಳನ್ನು ಕರೆದು ಜನರ ಸಮಸ್ಯೆ ಆಲಿಸಬೇಕು. ರಸ್ತೆಗಳು ವೈಟ್‌ ಟಾಪಿಂಗ್‌ ಆಗಬೇಕು.
ರೇಕಲ ವೆಂಕಟರೆಡ್ಡಿ, ಬಳ್ಳಾರಿ ನಗರ ನಿವಾಸಿ

ಬಳ್ಳಾರಿಯ ಒಳಚರಂಡಿ ವ್ಯವಸ್ಥೆ ದಶಕಗಳಷ್ಟು ಹಳೆಯದ್ದಾಗಿದ್ದು, ಸದ್ಯದ ಸನ್ನಿವೇಶದ ಒತ್ತಡವನ್ನು ತಾಳಿಕೊಳ್ಳದೇ ರಸ್ತೆಗೇ ಕೊಳಕನ್ನು ಚೆಲ್ಲುತ್ತಿವೆ. ನಗರದ ಬಹುತೇಕ ಪ್ರದೇಶಗಳಲ್ಲಿ ಮನೆ ಮುಂದೆಯೇ ಮೋರಿ ನೀರು ಹರಿಯುವುದು ಸಾಮಾನ್ಯವೋ ಎಂಬಂತಾಗಿದೆ. ಇದರ ಜತೆಗೆ ರಾಜಕಾಲುವೆಗಳಲ್ಲಿ ಭಾರಿ ಪ್ರಮಾಣದ ಕಸ ತುಂಬಿಕೊಂಡಿದ್ದು ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ. ಜೋರು ಮಳೆ ಬಂದರಂತೂ ನಗರದ ಹಲವು ಪ್ರದೇಶಗಳಲ್ಲಿ ಜನರಿಗೆ ಇಡೀ ರಾತ್ರಿ ಜಾಗರಣೆ ಮಾಡುವುದು, ಕೊಳಕು ನೀರನ್ನು ಮನೆಯಿಂದ ಹೊರ ಹಾಕುವುದೇ ಕೆಲಸ ಎಂಬಂತಾಗಿದೆ. ಹೊಸ ಆಡಳಿತವು ನಗರದ ಒಳಚರಂಡಿ ವ್ಯವಸ್ಥೆನ್ನು ಗಟ್ಟಿ ಮಾಡುವ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವ ಅಗತ್ಯವಿದೆ ಎನ್ನುತ್ತಾರೆ ನಾಗರಿಕ ಸಂಘಟನೆಗಳ ಮುಖಂಡರು.

ಬಳ್ಳಾರಿ ನಗರ 1,836 ಕಿ.ಮೀಗಳಷ್ಟು ರಸ್ತೆ ಜಾಲವನ್ನು ಹೊಂದಿದೆ. ಆದರೆ, ನಗರದಲ್ಲಿ 1500 ಗುಂಡಿಗಳಿವೆ ಎಂದು ನಾಗರಿಕ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಅಭಿವೃದ್ಧಿ ಕಾರ್ಯದ ನೆಪದಲ್ಲಿ, ಕೇಬಲ್‌, ಕೊಳವೆ ಅಳವಡಿಕೆ ಸೇರಿದಂತೆ ನಾನಾ ಕಾರಣಗಳಿಗಾಗಿ ನಗರದ 500 ಕಡೆ ರಸ್ತೆಯನ್ನು ಅಗೆಯಲಾಗಿದೆ ಎನ್ನಲಾಗಿದೆ. ಇವುಗಳಿಂದ ರಸ್ತೆಗಳು ಮತ್ತಷ್ಟು ಹಾಳಾಗುತ್ತಿವೆ ಎಂಬ ವಾದವಿದೆ. ಮಳೆಗಾಲ ಆರಂಭವಾಗಿರುವುದರಿಂದ ರಸ್ತೆಗಳು ಮತ್ತಷ್ಟು ಹಾಳಾಗುವ ಸಾಧ್ಯತೆಗಳುಂಟು. ಮತ್ತೊಂದೆಡೆ, ಕಳಪೆ ಕಾಮಗಾರಿಗಳಿಂದಾಗಿ ರಸ್ತೆಗಳು ಹಾಳಾಗುತ್ತಿವೆ. ಆದ್ದರಿಂದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕೆಂಬ ಕೂಗು ಇದೆ.

ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೊಳಗಲ್‌ನಲ್ಲಿ ಕೆರೆಯಾಗಬೇಕು. ಸಂಗಂ ವೃತ್ತದಿಂದ ರೂಪನಗುಡಿ ಬೈಪಾಸ್‌ ವರೆಗೆ ರಸ್ತೆ ವಿಸ್ತರಣೆ ಆಗಬೇಕು. ಡ್ರೈನೇಜ್‌ ತುಂಬಾ ಹದಗೆಟ್ಟಿದೆ. ಕಸ ವಿಲೇವರಿ ಸರಿಯಾಗಿ ಆಗುತ್ತಿಲ್ಲ. 
ಮೇಕಲ ಈಶ್ವರ ರೆಡ್ಡಿ, ಸಾಮಾಜಿಕ ಕಾರ್ಯಕರ್ತ, ಬಳ್ಳಾರಿ

ಇದರ ಜತೆಗೆ, ನಗರದಲ್ಲಿ ಬಹುತೇಕ ಪ್ರದೇಶಗಳಲ್ಲಿ ಸ್ವಚ್ಚತೆ ಸಮಸ್ಯೆ ಕಾಡುತ್ತಿದೆ. ಪ್ರತಿಷ್ಟಿತ ಬಡಾವಣೆಗಳಲ್ಲಿ ಕಸ ಕಾಲಕಾಲಕ್ಕೆ ವಿಲೇವಾರಿಗೊಳ್ಳುತ್ತದೆ. ಕೊಳೆಗೇರಿಗಳಲ್ಲಿ ಅನಾಥವಾಗಿ ಕೊಳೆಯುತ್ತಿರುತ್ತವೆ. ನಗರದ ಶುಚಿತ್ವ ಕಾಯ್ದುಕೊಳ್ಳುವುದರತ್ತ ಗಮನ ಹರಿಸಬೇಕಿದೆ. ಹಲವು ರಸ್ತೆಗಳು ಕಿರಿದಾಗಿವೆ. ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಬೆಂಗಳೂರು ರಸ್ತೆಯ ಹಳೇ ಮಟನ್ ಮಾರ್ಕೆಟ್‌ ಕೆಡವಿ 2 ವರ್ಷವಾಗಿದೆ. ಅಲ್ಲಿ ಮಾರುಕಟ್ಟೆ ನಿರ್ಮಾಣವಾಗಬೇಕೆಂಬ ಕೂಗಿದೆ. ಕಟ್ಟಡ ಬೀಳಿಸಿದ ಜಾಗ ಪಾಳು ಬಿದ್ದಿದ್ದು, ನಾಯಿ, ಹಂದಿಗಳ ಬೀಡಾಗಿದೆ. ಹೀಗಿರುವಾಗಲೇ, ಹಳೇ ಮುನ್ಸಿಪಲ್‌ ಕಟ್ಟಡ ಕೆಡವಲು ಸಿದ್ಧತೆಗಳು ನಡೆದಿವೆ. ಅವೈಜ್ಞಾನಿಕ ನಿರ್ಧಾರಗಳ ಬಗ್ಗೆ ಜನರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಈ ಸಮಸ್ಯೆಗಳ ಬಗ್ಗೆ ಮಹಾಪೌರರು ಗಮನ ಹರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.  

ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಕಾಡುತ್ತಿದೆ. ಸುಧಾ ಕ್ರಾಸ್‌ ಬಳಿ ಮೇಲ್ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆಯು ಬೇಡಿಕೆಯಾಗಿಯೇ ಉಳಿದಿದೆ ಎಂಬ ಬೇಸರ ಜನರಲ್ಲಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.