ADVERTISEMENT

ಬಳ್ಳಾರಿ: ದಶಕವಾದರೂ ಶುರುವಾಗದ ಕಬ್ಬಿಣದ ಕಾರ್ಖಾನೆ

ಹೂಡಿಕೆಯಾಗದ ಬಂಡವಾಳ, ಸೃಷ್ಟಿಯಾಗದ ಉದ್ಯೋಗ, ಸಾಗುವಳಿಯಾಗದ ಸಾವಿರಾರು ಎಕರೆ ಭೂಮಿ

ಆರ್. ಹರಿಶಂಕರ್
Published 16 ಅಕ್ಟೋಬರ್ 2024, 22:08 IST
Last Updated 16 ಅಕ್ಟೋಬರ್ 2024, 22:08 IST
   

ಬಳ್ಳಾರಿ: ದೇಶದ ‘ನವರತ್ನ’ ಕಂಪನಿಗಳಲ್ಲಿ ಒಂದಾದ ಭಾರತೀಯ ಉಕ್ಕು ಸಚಿವಾಲಯದಡಿ ಬರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣದ ಕಾರ್ಖಾನೆ ಆರಂಭಿಸುವುದಾಗಿ ಹೇಳಿ 2014ರಲ್ಲೇ ಸಾವಿರಾರು ಎಕರೆ ಜಮೀನು ಪಡೆದಿದೆ. ಆದರೆ, ಈವರೆಗೆ ಕಾರ್ಖಾನೆ ತೆರೆದಿಲ್ಲ. 

ಇದರ ಪರಿಣಾಮ ಕನಿಷ್ಠ ₹ 28 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವುದು ತಪ್ಪಿದೆ. 50 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಅವಕಾಶವನ್ನೂ ಕೈಚೆಲ್ಲಿದಂತಾಗಿದೆ. ಸಾವಿರಾರು ಎಕರೆ ಭೂಮಿ ಒಂದು ದಶಕದಿಂದ ಸಾಗುವಳಿಯೂ ಇಲ್ಲದೇ, ಕೈಗಾರಿಕೆಗೂ ಬಳಕೆಯಾಗದೇ ಪಾಳು ಬಿದ್ದಿದೆ. ಉದ್ಯೋಗ ಸಿಗುವ ಭರವಸೆಯಲ್ಲಿ ಬಳ್ಳಾರಿಯ ಜನ ಉಕ್ಕಿನ ಕಾರ್ಖಾನೆಗೆ ಭೂಮಿ ನೀಡಿದ್ದರು. 

ವಾರ್ಷಿಕ 3 ದಶಲಕ್ಷ ಟನ್‌  ಉತ್ಪಾದನಾ ಸಾಮರ್ಥ್ಯದ ಕರ್ನಾಟಕ ವಿಜಯನಗರ ಸ್ಟೀಲ್ಸ್‌ ಲಿಮಿಟೆಡ್‌ (ಕೆವಿಎಸ್‌ಎಲ್‌) ಹೆಸರಿನ ಕಾರ್ಖಾನೆ ಸ್ಥಾಪಿಸುವುದಾಗಿಯೂ, ಅದಕ್ಕಾಗಿ ₹9 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿಯೂ, ಭವಿಷ್ಯದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು 6 ದಶಲಕ್ಷ ಟನ್‌ಗೆ ವಿಸ್ತರಿಸುವುದಾಗಿ ಎನ್‌ಎಂಡಿಸಿ 2014ರಲ್ಲಿ ಹೇಳಿತ್ತು. ₹639.61 ಕೋಟಿ ಪರಿಹಾರ ಪಾವತಿ ಮಾಡಿ ಬಳ್ಳಾರಿ ಹೊರವಲಯದ ವೇಣಿವೀರಾಪುರ ಎಂಬಲ್ಲಿ 2,857.54 ಎಕರೆ ಜಮೀನನ್ನೂ ಖರೀದಿಸಿತು. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) 2017ರಲ್ಲಿ ಭೂಮಿಯನ್ನು ಅದರ ವಶಕ್ಕೆ ನೀಡಿ, 2018ರಲ್ಲಿ ಸ್ವಾಧೀನ ಪತ್ರವನ್ನೂ ಕೊಟ್ಟಿದೆ. ನಿಯಮಗಳ ಪ್ರಕಾರ, ಸ್ವಾಧೀನ ಪತ್ರ ಸಿಕ್ಕು ಐದು ವರ್ಷಗಳಲ್ಲಿ ಉತ್ಪಾದನೆ ಆರಂಭಿಸಬೇಕಿದ್ದರೂ, ಎನ್‌ಎಂಡಿಸಿ ಕಾರ್ಖಾನೆ ಸ್ಥಾಪನೆಗೆ ಅಡಿಗಲ್ಲೂ ಹಾಕಿಲ್ಲ. 

ADVERTISEMENT

ಕಾರ್ಖಾನೆ ಸ್ಥಾಪಿಸುವಲ್ಲಿ ಎನ್‌ಎಂಡಿಸಿ ವಿಳಂಬ ಮಾಡುತ್ತಿರುವ ಬಗ್ಗೆ ಬಳ್ಳಾರಿ ಜಿಲ್ಲೆಯ ಕೆಐಎಡಿಬಿ ಅಧಿಕಾರಿಗಳು ಕೇಂದ್ರ ಕಚೇರಿಗೆ ವರದಿ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಎನ್‌ಎಂಡಿಸಿಗೆ ನೋಟಿಸ್‌ ಕೂಡ ರವಾನೆ ಆಗಿದೆ. ಆದರೆ, ಈವರೆಗೆ ಕಾರ್ಖಾನೆ ಸ್ಥಾಪನೆ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. 

ಈ ಕುರಿತು ಪ್ರತಿಕ್ರಿಯಿಸಿರುವ ಕೆಐಎಡಿಬಿ ಅಧಿಕಾರಿಗಳು, ‘ಎನ್‌ಎಂಡಿಸಿ ಸರ್ಕಾರಿ ಸಂಸ್ಥೆ. ಅದಕ್ಕೆ ನಿಯಮಗಳಲ್ಲಿ ಸಡಿಲಿಕೆ ಇರುತ್ತದೆ. ಕಾರ್ಖಾನೆ ಆರಂಭಿಸದೇ ಇರುವ ಬಗ್ಗೆ 34ಬಿ ಅಡಿ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು. ಆದರೆ, ಉತ್ತರ ಏನು ಬಂದಿದೆ ಎಂಬುದರ ಬಗ್ಗೆ ಹೇಳಲು ನಿರಾಕರಿಸಿದರು. 

‘ಕಾರ್ಖಾನೆ ಸ್ಥಾಪಿಸಲು ನೀರು, ಸವಲತ್ತು, ಕಚ್ಚಾ ಪದಾರ್ಥಗಳಿಲ್ಲ’ ಎಂದು ಎನ್‌ಎಂಡಿಸಿ ಸಬೂಬು ಹೇಳುತ್ತಿರುವುದಾಗಿ ಕೆಐಎಡಿಬಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.  

ಎನ್ಎಂಡಿಸಿ ಮತ್ತು ಕೆಐಒಸಿಎಲ್‌ ಎರಡೂ ಭಾರತೀಯ ಉಕ್ಕು ಸಚಿವಾಲಯದಡಿ ಬರುವ ಸಂಸ್ಥೆಗಳು. ಒಂದೆಡೆ, ಸ್ವಂತದ ಗಣಿ ಇಲ್ಲದೇ ಕೆಐಒಸಿಎಲ್‌ ಕಾರ್ಖಾನೆ ಸೊರಗುತ್ತಿದೆ ಎನ್ನುತ್ತಿರುವ ಉಕ್ಕು ಸಚಿವಾಲಯ, ಇನ್ನೊಂದೆಡೆ, ಸಂಡೂರಿನಲ್ಲೇ ಎರಡು ದೊಡ್ಡ ಗಣಿಗಳನ್ನು ಹೊಂದಿದ್ದರೂ, ಕಾರ್ಖಾನೆ ತೆರೆಯಲು ಎನ್‌ಎಂಡಿಸಿ ಮುಂದಾಗದಿರುವ ಬಗ್ಗೆ ಸುಮ್ಮನಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ‌

ಎನ್‌ಎಂಡಿಸಿ ಏನು ಹೇಳುತ್ತಿದೆ?

ಕೆಐಎಡಿಬಿ ಷರತ್ತುಗಳ ಪ್ರಕಾರ, ಭೂಮಿ ಹಂಚಿಕೆಯಾಗಿ 9 ತಿಂಗಳ ಒಳಗಾಗಿ ನಿರ್ಮಾಣ ಪ್ರಕ್ರಿಯೆ ಆರಂಭವಾಗಬೇಕು. ಭೂಮಿ ಸ್ವಾಧೀನಕ್ಕೆ ಬಂದ 5 ವರ್ಷಗಳಲ್ಲಿ ಉತ್ಪಾದನೆ ಆರಂಭಿಸಬೇಕು. ಭೂಮಿಯ ಗುತ್ತಿಗೆ ಅವಧಿಯನ್ನು 99 ವರ್ಷಗಳವರೆಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರವನ್ನು ಕೋರಲಾಗಿದೆ. ‌ಸದ್ಯ ಕಂಪನಿಯು, ನಿರ್ದಿಷ್ಟ ಭೂಮಿಯಲ್ಲಿ ವಿವಿಧ ವ್ಯಾಪಾರ ಅವಕಾಶದ ಸಾಧ್ಯತೆ ಪರಿಶೀಲಿಸುತ್ತಿದೆ. ಈಗ ಭೂಮಿಯನ್ನು ಚಾಲ್ತಿಯಲ್ಲದ ಆಸ್ತಿ ಎಂದು ಪರಿಗಣಿಸಲಾಗಿದೆ. ಮುಂದಿನ ಹಣಕಾಸಿನ ತೀರ್ಮಾನಗಳು ರಾಜ್ಯ ಸರ್ಕಾರ ಮತ್ತು ಕೆವಿಎಸ್‌ಎಲ್‌ನ ನಡುವಿನ ಒಪ್ಪಂದದ ಮೇಲೆ ಅವಲಂಬಿಸಿವೆ ಎಂದು ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಹೇಳಿಕೊಂಡಿದೆ.

ಇದು ಸಕಾಲ :‘ಕಬ್ಬಿಣ ಉತ್ಪಾದನೆ ಕ್ಷೇತ್ರದಲ್ಲಿ ಖಾಸಗಿ ಕಂಪನಿ ಜಿಂದಾಲ್‌ ಏಕಚಕ್ರಾಧಿಪತ್ಯ ಸಾಧಿಸಿದೆ. ಅದರ ಪ್ರಧಾನ ಕಾರ್ಖಾನೆ ಇರುವುದು ಬಳ್ಳಾರಿಯಲ್ಲಿ. ಎನ್‌ಎಂಡಿಸಿ ಇಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿದರೆ ಜಿಂದಾಲ್‌ಗೆ ಆರೋಗ್ಯಕರ ಪೈಪೋಟಿ ನೀಡಬಹುದು. ಸರ್ಕಾರ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರೂ ₹1ಲಕ್ಷ ಕೋಟಿ ಆಕರ್ಷಿಸುವುದು ಕಷ್ಟ. ಆದರೆ, ಎನ್‌ಎಂಡಿಸಿ ಕಾರ್ಖಾನೆ ಸ್ಥಾಪಿಸಿದರೆ ಒಂದೇ ಬಾರಿಗೆ ಕನಿಷ್ಠ ₹30 ಸಾವಿರ ಕೋಟಿ ಬಂಡವಾಳ ಹರಿದು ಬರುತ್ತದೆ. ನಮ್ಮವರೇ ಆದ ಎಚ್‌.ಡಿ ಕುಮಾರಸ್ವಾಮಿ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವರಾಗಿದ್ದಾರೆ. ಕಾರ್ಖಾನೆ ತರಲು ಇದು ಸಕಾಲ’ ಎಂದು ಎನ್‌ಎಂಡಿಸಿಗೆ ಭೂಮಿ ನೀಡಿದ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ನಾರಾ ಪ್ರತಾಪ್‌ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಅ

ಅದಿರು ಮಾರುತ್ತಿರುವ ಎನ್‌ಎಂಡಿಸಿ

ಎನ್‌ಎಂಡಿಸಿಯು ಸಂಡೂರಿನಲ್ಲಿ ದೋಣಿಮಲೈ ಮತ್ತು ಕುಮಾರಸ್ವಾಮಿ ಕಬ್ಬಿಣದ ಅದಿರಿನ ಗಣಿಗಳನ್ನು ಹೊಂದಿದೆ. ಇವೆರಡರ ವಾರ್ಷಿಕ ಅದಿರು ಉತ್ಪಾದನೆ 15.62 ದಶಲಕ್ಷ ಟನ್‌. ಇಲ್ಲಿನ ಅದಿರನ್ನು ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ವಿಎಸ್‌ಪಿ), ಕೆಐಒಸಿಎಲ್‌, ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಭಾರತ್‌ ಲಿಮಿಟೆಡ್, ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ ಡೋಲ್ವಿ(ಮಹಾರಾಷ್ಟ್ರ), ಮಾ ಮಹಾಮಾಯಾ ಇಂಡಸ್ಟ್ರೀಸ್ ಲಿಮಿಟೆಡ್ (ವಿಜಯನಗರ, ಆಂಧ್ರಪ್ರದೇಶ), ಸ್ಟೀಲ್ ಎಕ್ಸ್‌ಚೇಂಜ್‌ ಇಂಡಿಯಾ ಲಿಮಿಟೆಡ್ (ವಿಶಾಖಪಟ್ಟಣ, ಆಂಧ್ರಪ್ರದೇಶ), ಸನ್ ಫ್ಲಾಗ್ ಐರನ್ ಆ್ಯಂಡ್‌ ಸ್ಟೀಲ್ ಕಂಪನಿ (ನಾಗಪುರ, ಮಹಾರಾಷ್ಟ್ರ) ವೆಲ್‌ಸ್ಪಾನ್‌ ಸ್ಟೀಲ್ ಲಿಮಿಟೆಡ್‌ (ಮುಂಬೈ)ಗೆ ಮಾರಾಟ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.