ADVERTISEMENT

ತೆಕ್ಕಲಕೋಟೆ | ಶತಮಾನದತ್ತ ಶಾಲೆ: ಸೌಕರ್ಯ ಮರೀಚಿಕೆ

ಶಿಕ್ಷಕರ ಕೊರತೆ, ಬಹುತೇಕ ಹುದ್ದೆಗಳು ಖಾಲಿ: ಪಾಠ, ಆಟಕ್ಕೂ ತೊಂದರೆ –ಮಕ್ಕಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:20 IST
Last Updated 26 ನವೆಂಬರ್ 2024, 4:20 IST
<div class="paragraphs"><p><strong>ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬೀಡಾಡಿ ದನಗಳ ಕಾಟದಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ</strong></p></div>

ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬೀಡಾಡಿ ದನಗಳ ಕಾಟದಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ

   

ತೆಕ್ಕಲಕೋಟೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿನ ಮೂಲ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಪಾಲಕರು ಮಕ್ಕಳ ಭವಿಷ್ಯ ಕುರಿತು ಆತಂಕಕ್ಕೀಡಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ 8 ರಿಂದ 10ನೇ ತರಗತಿಯವರೆಗೆ ಪ್ರಸ್ತುತ 617 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಕಾಯಂ ಶಿಕ್ಷಕರು ಹಾಗೂ 8 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 15 ಬೋಧಕ ಹಾಗೂ 3 ಜನ ಬೋಧಕೇತರ ಸಿಬ್ಬಂದಿ ಇರಬೇಕಾದ ಶಾಲೆಯಲ್ಲಿ ಇಬ್ಬರು ಮಾತ್ರ ಕಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಎಲ್ಲ ಹುದ್ದೆಗಳು ಖಾಲಿ ಇವೆ.

ADVERTISEMENT

ಉಪಪ್ರಾಚಾರ್ಯರ ಹುದ್ದೆ-1, ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ ತಲಾ 2 ಹುದ್ದೆ, ಅಲ್ಲದೆ ಕನ್ನಡ ಕಲಾ 3, ವಿಶೇಷ ಶಿಕ್ಷಕ 1, ದೈಹಿಕ ಶಿಕ್ಷಣ ಶಿಕ್ಷಕ 1, ಅಟೆಂಡರ್ 1, ಸೇವಕ 1 ಹುದ್ದೆ ಸೇರಿದಂತೆ ಒಟ್ಟು 16 ಹುದ್ದೆ ಖಾಲಿ ಇದ್ದು ಶಿಕ್ಷಕರ ಕೊರತೆಯ ಗಂಭೀರತೆ ತೋರಿಸುತ್ತಿದೆ.

ಅತಿಥಿ ಶಿಕ್ಷಕರಿಗೆ ವೇತನವೇ ಆಗಿಲ್ಲ: ಕಾಯಂ ಬೋಧಕ ಸಿಬ್ಬಂದಿ ಕೊರತೆ ಒಂದೆಡೆಯಾದರೆ 8 ಅತಿಥಿ ಶಿಕ್ಷಕರಿಗೆ ಜೂನ್ ತಿಂಗಳಿನಿಂದ ವೇತನವೇ ಆಗಿರುವುದಿಲ್ಲ. ಇದರಿಂದ ಅತಿಥಿ ಶಿಕ್ಷಕರನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟಕರವಾಗಿದೆ ಎಂದು ಪ್ರಭಾರ ಉಪ ಪ್ರಾಚಾರ್ಯೆ ರಾಧಾ ಮಲ್ಲಪ್ಪ ಸಾಲ್ಮನಿ ಅಲವತ್ತುಕೊಂಡಿದ್ದಾರೆ.

ಶಾಲೆಗೆ ಸುಸಜ್ಜಿತ ಕೊಠಡಿಗಳು ಇವೆ. ಆದರೆ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ದೂರಿದೆ. ಪ್ರಾಚಾರ್ಯರಿಗೆ ಶಾಲಾ ಆಡಳಿತ ನಿರ್ವಹಣೆ ಮಾಡುವ ಜವಾಬ್ದಾರಿ ಇರುವುದರಿಂದ ಅವರು ನಿರಂತರ ತರಗತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ವಿಷಯಕ್ಕೆ ಕನಿಷ್ಠ ಇಬ್ಬರು ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸ ಲಾಗಿದೆ ಎಂದು ಶಾಲಾ ಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖಪ್ಪ ತಿಳಿಸಿದರು.

ಮೂಲ ಸೌಕರ್ಯ ಕೊರತೆ:

ನ.16 ಶನಿವಾರ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಶಾಲಾ ಮೈದಾನ ಸಮತಟ್ಟುಗೊಳಿಸಲು ಹಾಗೂ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದಾರೆ ಎಂದು ಉಪ ಪ್ರಾಚಾರ್ಯೆ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಕೊಠಡಿ ಹಾಗೂ ಮೈದಾನದಲ್ಲಿ ಹಾಕಲಾದ ಸಿಸಿ ಕ್ಯಾಮೆರಾ ಹಾಗೂ ವಿದ್ಯುತ್ ದೀಪ ಕಿಡಿಗೇಡಿಗಳು ಒಡೆದು ಹಾಕಿದ್ದು, ಈ ಕುರಿತು ಠಾಣೆಯಲ್ಲಿ ದೂರು ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

10ಕ್ಕೂ ಹೆಚ್ಚು ಕಂಪ್ಯೂಟರ್ ಇದ್ದು, ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಲಕ್ಷಾಂತರ ಮೌಲ್ಯದ ಕಂಪ್ಯೂಟರ್ ಧೂಳು ಹಿಡಿಯುವಂತಾಗಿದ್ದು, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮರೀಚಿಕೆಯಾಗಿದೆ. ಬಿಸಿ ಊಟದ ಅಡುಗೆ ಕೋಣೆ ಇಲ್ಲದೆ ತರಗತಿಯನ್ನೇ ಬಿಸಿ ಊಟದ ಕೊಠಡಿಯನ್ನಾಗಿ ಮಾರ್ಪಡಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಶುದ್ಧ ನೀರಿನ ಘಟಕ: ಮಕ್ಕಳಿಗಾಗಿ ಪೌಷ್ಟಿಕಾಂಶ ಲವಣ ಭರಿತ ಶುದ್ಧ ಕುಡಿಯುವ ನೀರಿನ ಸತ್ವವಿರುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಈವರೆಗೆ ಮಕ್ಕಳು ಒಂದು ತೊಟ್ಟು ನೀರು ಕುಡಿದಿಲ್ಲ. ಅಲ್ಲದೆ ಪಟ್ಟಣ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ ಅನುದಾನ ಬಿಡುಗಡೆ ಆಗಿದ್ದರೂ ಗುತ್ತಿಗೆದಾ ರನ ನಿರ್ಲಕ್ಷ್ಯದಿಂದಾಗಿ ನಲ್ಲಿ ನೀರು ಇಲ್ಲದೆ ಬೋರ್ ನೀರೇ ಗತಿ ಎಂಬಂತಾಗಿದೆ.

ಪ್ರೌಢಶಾಲಾ ವಿಭಾಗದ ಶಿಕ್ಷಕರ ಕೊರತೆ ಹಾಗೂ ಮೂಲ ಸೌಕರ್ಯ ಸಮಸ್ಯೆ ಗಮನಕ್ಕೆ ಬಂದಿದೆ. ಶೀಘ್ರವೇ ಹಂತ, ಹಂತವಾಗಿ ಸಮಸ್ಯೆ ಪರಿಹರಿಸುತ್ತೇವೆ.
ಉಮಾದೇವಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.