ADVERTISEMENT

ಬಸ್‌ ಟಿಕೆಟ್‌ ದರ ಏರಿಕೆ ಇಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:15 IST
Last Updated 20 ಜೂನ್ 2024, 15:15 IST
ಬಳ್ಳಾರಿ ಜಿಲ್ಲೆಯ ತೋರಣಗಲ್‌ ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ನೀಡಿದ ನಿಂಬೆಹಣ್ಣನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುತೂಹಲದಿಂದ ನೋಡಿದರು.
ಚಿತ್ರ: ಮುರುಳಿಕಾಂತರಾವ್‌ 
ಬಳ್ಳಾರಿ ಜಿಲ್ಲೆಯ ತೋರಣಗಲ್‌ ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ನೀಡಿದ ನಿಂಬೆಹಣ್ಣನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುತೂಹಲದಿಂದ ನೋಡಿದರು. ಚಿತ್ರ: ಮುರುಳಿಕಾಂತರಾವ್‌    

ಬಳ್ಳಾರಿ: ‘ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾವ ಸದ್ಯ ಸರ್ಕಾರದ ಮುಂದೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

‘ಯೋಗರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲೆಯ ತೋರಣಗಲ್‍ಗೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಬಸ್ ಪ್ರಯಾಣ ದರ ಏರಿಕೆ ಇಲ್ಲ’ ಎಂದರು.

ಪೆಟ್ರೋಲ್‌–ಡಿಸೇಲ್‌ ಮೇಲಿನ ತೆರಿಗೆ ಹೆಚ್ಚಳದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನರೇಂದ್ರ ಮೋದಿ ಪ್ರಧಾನಿಯಾದಾಗ ತೈಲ ದರ ಎಷ್ಟಿತ್ತು? ಅವರು ಅಧಿಕಾರಕ್ಕೆ ಬಂದಾಗ ₹9.48 ಇದ್ದ ಹೆಚ್ಚುವರಿ ಅಬಕಾರಿ ಸುಂಕ ಈಗ  ₹32.98ಕ್ಕೆ ಏರಿಕೆಯಾಗಿದೆ. ಹಾಗಾದರೆ ತೈಲ ದರ ಏರಿಸಿದ್ದು ಯಾರು? ಮನಮೋಹನ್‌ ಸಿಂಗ್‌ ಅಧಿಕಾರದಲ್ಲಿ ಇದ್ದಾಗ ಕಚ್ಚಾ ತೈಲ ದರ ಕಡಿಮೆ ಇತ್ತು. ಆದರೂ ಪೆಟ್ರೋಲ್‌–ಡೀಸೆಲ್‌ ದರ ಕಡಿಮೆ ಇತ್ತು. ಈಗ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ಪೆಟ್ರೋಲ್–ಡೀಸೆಲ್‌ ದರ ಇಳಿಕೆ ಮಾಡುತ್ತಿಲ್ಲ’ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.  

ADVERTISEMENT

‘ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ ₹ 60 ಸಾವಿರ ಕೋಟಿ ಬೇಕು. ಅದಕ್ಕೆ ಸಂಪನ್ಮೂಲ ಕ್ರೋಡೀಕರಿಸಬೇಕು. ಹಾಗೆಂದು ಗ್ಯಾರಂಟಿಗಾಗಿ ಹಣ ಹೊಂದಿಸುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಸಂಪನ್ಮೂಲ ಬೇಕು. ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸುತ್ತಾರೆ. ಹಾಗಿದ್ದರೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಅವರು ಹೇಳಲಿ ನೋಡೋಣ’ ಎಂದು ಸವಾಲು ಹಾಕಿದರು.  

ದೇವದಾರಿ ಗಣಿಗಾರಿಕೆಗೆ ಪರಿಸರ ಹೋರಾಟಗಾರರು ವಿರೋಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಗಣಿಗಾರಿಕೆಗೆ ಅನುಮತಿ ನೀಡಿದವರು ಕುಮಾರಸ್ವಾಮಿ. ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹಿಂದೊಮ್ಮೆ ಅವರೇ ಗಣಿಗಾರಿಕೆ ವಿರೋಧಿಸಿದ್ದರು. ಇದಕ್ಕೆ ಅವರೇ ಉತ್ತರಿಸಬೇಕು’ ಎಂದರು.

‘‌ತುಂಗಭದ್ರಾ ಜಲಾಶಯಕ್ಕೆ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾರಂಭಕ್ಕೆ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.