ಬಳ್ಳಾರಿ: ಆಗಸ್ಟ್ 22ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಸೇರಿತ್ತು. ಸಭೆಯಲ್ಲಿ ನಗರದ ಎಲ್ಲ 39ವಾರ್ಡ್‌ಗಳ ಉದ್ಯಾನಗಳನ್ನು ಸಿಬ್ಬಂದಿ ಕೊರತೆಯಿಂದ ನಿರ್ವಹಿಸಲು ಆಗದಿರುವುದರಿಂದ ಸಂಘ–ಸಂಸ್ಥೆಗಳು, ವಾರ್ಡ್ ಸಮಿತಿಗಳು, ವೆಲ್‌ಫೇರ್ ಸಮಿತಿಗಳಿಗೆ ನಿರ್ವಹಣೆ ಹೊಣೆ ವಹಿಸಿಕೊಡುವ ತೀರ್ಮಾನ ಕೈಗೊಳ್ಳಲಾಯಿತು.
ಉದ್ಯಾನಗಳ ನಿರ್ವಹಣೆ ಹೊಣೆ ಪಡೆಯುವ ಸಂಘ– ಸಂಸ್ಥೆಗಳಿಗೆ ಮಾಸಿಕ ₹ 10,000 ಗೌರವಧನ ಕೊಡಲು ಸಭೆ ಅನುಮೋದಿಸಿತು. ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪಾಲಿಕೆ 2023–24ನೇ ಸಾಲಿನ ಮುಂಗಡಪತ್ರದಲ್ಲಿ ₹ 2 ಕೋಟಿ ಮೀಸಲಿರಿಸಿದೆ. ಇದರಲ್ಲಿ ಕೆಲವೇ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸಲಾಗುತ್ತಿದೆ ಎಂದು ಮಾಸಿಕ ಸಭೆ ಕಾರ್ಯಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಒಟ್ಟು 187 ಉದ್ಯಾನಗಳಿವೆ. ಇದರಲ್ಲಿ 76 ನಗರಾಭಿವೃದ್ಧಿ ಬಡಾವಣೆ ಪಾರ್ಕ್‌ಗಳು. ಉಳಿದಿದ್ದು ಪಾಲಿಕೆ ಅಧೀನದಲ್ಲಿರುವ ಉದ್ಯಾನಗಳು. ಏಳೆಂಟು ಉದ್ಯಾನಗಳ ನಿರ್ವಹಣೆ ಹೊಣೆಯನ್ನು ಬೇರೆಯವರಿಗೆ ವಹಿಸಲಾಗಿದೆ. ಪಾಲಿಕೆ ಕಾರ್ಯಸೂಚಿ ದಾಖಲೆ ಹೇಳುವಂತೆ ಉದ್ಯಾನಗಳು ಅಭಿವೃದ್ಧಿ ಹೊಂದಿವೆಯೇ ಎಂದು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಒಂದು ಕಡೆಯಿಂದ ನಗರದ ಪ್ರದಕ್ಷಿಣೆ ಹಾಕಿದರೆ ಯಾವುದೇ ಪಾರ್ಕ್‌ಗಳೂ ಅಭಿವೃದ್ಧಿ ಆಗಿಲ್ಲ. ಮಿಗಿಲಾಗಿ ನಿರ್ವಹಣೆಯೂ ಇಲ್ಲ.
ಕತ್ತಲಾಗುತ್ತಿದ್ದಂತೆ ಉದ್ಯಾನಗಳು ಪುಂಡು– ಪೋಕರಿಗಳ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಕುಡುಕರ ಅಡ್ಡೆಯಾಗುತ್ತಿದೆ. ಜನ ಉದ್ಯಾನದೊಳಗೆ ಹೋಗಲು ಭಯಪಡುವ ವಾತಾವರಣ ಇದೆ. ಮದ್ಯದ ಬಾಟಲಿಗಳು, ಪ್ಲ್ಯಾಸ್ಟಿಕ್ ಲೋಟಗಳು ಎಲ್ಲೆಂದರಲ್ಲಿ ಚೆಲ್ಲಾಡಿರುತ್ತವೆ. ಇನ್ನು ಕೆಲ ಉದ್ಯಾನಗಳು ಅನೈತಿಕ ಚಟುವಟಿಕೆಗಳ ಸ್ವರ್ಗವಾಗಿವೆ. ಕೆಲವೇ ಕೆಲವು ಉದ್ಯಾನಗಳಲ್ಲಿ ವಾಯುವಿಹಾರಕ್ಕೆ ಬರುವ ಜನರ ದೈಹಿಕ ಸಾಮರ್ಥ್ಯಕ್ಕೆ ಬೇಕಿರುವ ಸಾಧನ ಅವಳಡಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ ಈ ಉದ್ಯಾನಗಳೂ ನಿರ್ವಹಣೆ ಕೊರತೆ ಎದುರಿಸುತ್ತಿವೆ.
ಪಾಲಿಕೆಗೆ ಹೊಂದಿಕೊಂಡಿರುವ ಡಾ. ರಾಜ್‌ಕುಮಾರ್ ಉದ್ಯಾನವನ್ನು ಬಳ್ಳಾರಿ ‘ಐಕಾನ್’ (ಹೆಗ್ಗುರುತು) ಆಗಿ ಅಭಿವೃದ್ಧಿ ಪಡಿಸಬಹುದು. ಮನೆ ಮಂದಿ ಒಟ್ಟಿಗೆ ಬಂದು ಖುಷಿ ಪಟ್ಟು ಹೋಗಬಹುದಾದ ಸೊಗಸಾದ ಉದ್ಯಾನ ಮಾಡಬಹುದು. ವಿಶಾಲವಾದ ಪ್ರದೇಶವಿದೆ. ಕೆರೆಯೂ ಇದೆ. ನೀರಿನ ಚಿಲುಮೆಯೂ ಇದೆ. ಹಿಂದೆ ಕೆರೆಯಲ್ಲಿ ದೋಣಿ ವಿಹಾರ ಇತ್ತೆಂದು ಸ್ಥಳೀಯರು ಹೇಳುತ್ತಾರೆ. ಈಗ ದೋಣಿ ವಿಹಾರ ನಿಂತಿದೆ. ಪಾಲಿಕೆ ವತಿಯಿಂದಲೇ ವಾಟರ್ ಪಾರ್ಕ್ ಅಭಿವೃದ್ಧಿಪಡಿಸಲು ವಿಫುಲವಾದ ಅವಕಾಶವಿದೆ. ಇದರಿಂದ ಆದಾಯವೂ ಬರಲಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್‌ಕುಮಾರ್ ಉದ್ಯಾನ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವೊಂದು ಕೆಲಸಗಳು ನಡೆಯುತ್ತಿವೆ. ಇದರಿಂದಾಗಿ ದೋಣಿ ವಿಹಾರ ನಿಲ್ಲಿಸಲಾಗಿದೆ ಎಂದು ಪಾಲಿಕೆ ಮೂಲಗಳು ಸ್ಪಷ್ಟಪಡಿಸಿವೆ.
ರಾಜ್‌ಕುಮಾರ್ ಉದ್ಯಾನ ಪ್ರವೇಶಕ್ಕೆ ಪ್ರವೇಶ ಶುಲ್ಕವಿದೆ. ಅಲ್ಲಿಗೆ ಹೋಗುವ ಬಹುತೇಕರು ಶಾಲಾ– ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹಾಕಿ ಗೆಳೆಯ, ಗೆಳತಿಯರ ಜತೆ ಬಂದು ಕಾಲ ಕಳೆಯುತ್ತಾರೆ. ಯೌವ್ವನದ ಹುಚ್ಚು ಹೊಳೆಯಲ್ಲಿ ಪ್ರೀತಿ– ಪ್ರೇಮದ ಸುಳಿಗೆ ಸಿಲುಕಿ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ಅಥವಾ ಪೊಲೀಸ್ ಸಿಬ್ಬಂದಿ ಅವರನ್ನು ಪ್ರಶ್ನಿಸುತ್ತಿಲ್ಲ. ಕಿವಿಮಾತು ಹೇಳಿ ಶಾಲಾ– ಕಾಲೇಜಿಗೆ ಹೋಗಲು ಬುದ್ಧಿ ಹೇಳುತ್ತಿಲ್ಲ.
ಯಾವುದೇ ನಗರ ಅಥವಾ ಊರಿಗೆ ಉದ್ಯಾನಗಳೇ ಆಕರ್ಷಣೆ. ಅವುಗಳ ನಿರ್ವಹಣೆ ಅತೀ ಮುಖ್ಯ. ನಿರ್ವಹಣೆ ಇಲ್ಲದಿದ್ದರೆ ಒತ್ತುವರಿ ಮಾಡುವ ಸಾಧ್ಯತೆ ಇರುತ್ತದೆ. ಅನಧಿಕೃತ ಕಟ್ಟಡಗಳು ತಲೆ ಎತ್ತಬಹುದು. ನಗರದ ಎಷ್ಟು ಉದ್ಯಾನಗಳು ಒತ್ತುವರಿ ಆಗಿವೆ. ಬೇರೆಯವರಿಗೆ ನಿರ್ವಹಣೆ ಹೊಣೆ ವಹಿಸಿರುವ ಪಾರ್ಕ್‌ಗಳ ಸ್ಥಿತಿಗತಿ ಹೇಗಿದೆ ಎಂದು ಪರಿಶೀಲಿಸುವ ವ್ಯವಸ್ಥೆ ಪಾಲಿಕೆಯಲ್ಲಿ ಇಲ್ಲ. ಈ ಕಾರಣಕ್ಕೆ ನಗರದ ಎಲ್ಲ ಉದ್ಯಾನಗಳ ಅಳತೆ ಮಾಡಿ, ಬಂದೋಬಸ್ತ್ ಮಾಡುವ ಅಗತ್ಯವಿದೆ.
ನಾನು ಹೊಸದಾಗಿ ಬಂದಿದ್ದೇನೆ. ಉದ್ಯಾನಗಳ ನಿರ್ವಹಣೆ ಹೊಣೆ ಪಡೆದಿರುವ ಕೆಲ ಶಾಲೆಗಳು ಅವುಗಳಿಗೆ ಬೀಗ ಹಾಕಿರುವ ವಿಷಯ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸುವೆ- ಖಲೀಲ್ ಸಾಬ್, ಪಾಲಿಕೆ ಆಯುಕ್ತ
ಉದ್ಯಾನಗಳ ನಿರ್ವಹಣೆ ಹೊಣೆ ಪಡೆದಿರುವ ಶಾಲೆಗಳು ಸದರಿ ಜಾಗಕ್ಕೆ ಬೀಗ ಹಾಕಿಕೊಂಡಿದ್ದರೆ ತಕ್ಷಣ ತೆಗೆಸಬೇಕು. ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು- ಕೆ.ಎಂ. ಮಹೇಶ್ವರಸ್ವಾಮಿ, ಗುಲ್ಬರ್ಗಾ ವಿವಿ ಸಿಂಡಿಕೇಟ್ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.