ADVERTISEMENT

ಕುರುಗೋಡು | ಬಾರದ ಮಳೆ: ಬಾಡುತ್ತಿದೆ ಬೆಳೆ

ತುಂಗಭದ್ರಾ ಜಲಾಶಯದಲ್ಲೂ ನೀರಿನ ಹರಿವಿನ ಪ್ರಮಾಣ ಕಡಿಮೆ

ವಾಗೀಶ ಕುರುಗೋಡು
Published 10 ಜುಲೈ 2024, 6:05 IST
Last Updated 10 ಜುಲೈ 2024, 6:05 IST

ಮಳೆ ಕೊರತೆಯಿಂದಾಗಿ ಕುರುಗೋಡಿನ ಮುಷ್ಟಗಟ್ಟೆ ರಸ್ತೆಯಲ್ಲಿನ ಜಮೀನಿನಲ್ಲಿ ನವಣೆ ಬೆಳೆ ಬಾಡುವ ಹಂತ ತಲುಪಿದೆ

ಮಳೆ ಕೊರತೆಯಿಂದಾಗಿ ಕುರುಗೋಡಿನ ಮುಷ್ಟಗಟ್ಟೆ ರಸ್ತೆಯಲ್ಲಿನ ಜಮೀನಿನಲ್ಲಿ ನವಣೆ ಬೆಳೆ ಬಾಡುವ ಹಂತ ತಲುಪಿದೆ

ಕುರುಗೋಡು: ಮಳೆ ಕೊರತೆಯಿಂದಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಹತ್ತಿ, ನವಣೆ, ಸಜ್ಜೆ, ತೊಗರಿ ಬೆಳೆ ಬೆಳವಣಿಗೆ  ಹಂತದಲ್ಲೇ ಬಾಡುವ ಸ್ಥಿತಿ ತಲುಪಿದೆ. ಮಳೆ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ

ADVERTISEMENT

ದಟ್ಟ ಮೋಡ ಆವರಿಸಿದರೂ, ಬೀಸುವ ಗಾಳಿಗೆ ಮೋಡ ಮುಂದೆ ಸಾಗುತ್ತಿದೆ. ಮಳೆಗಾಗಿ ಕಾಯುತ್ತಿರುವ ರೈತರಲ್ಲಿ ನಿರಾಸೆ ಮೂಡಿಸಿದೆ.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದು, ಭತ್ತ, ಮೆಣಸಿನಕಾಯಿ, ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯುವ ನೀರಾವರಿ ಭೂಮಿ ಹೊಂದಿರುವ ರೈತರಲ್ಲಿ ಆತಂಕ ಮನೆಮಾಡಿದೆ.

ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಮಳೆಯಾಶ್ರಿತ ಮತ್ತು 17,500 ನೀರಾವರಿ ಕೃಷಿ ಭೂಮಿ ಇದೆ. ಮಳೆಯಾಶ್ರಿತ ಭೂಮಿಯಲ್ಲಿ 100 ಹೆಕ್ಟೇರ್ ತೊಗರಿ, 25 ಹೆಕ್ಟೇರ್ ಔಡಲ, 10 ಹೆಕ್ಟೇರ್ ಸಜ್ಜೆ ಮತ್ತು 15 ಹೆಕ್ಟೇರ್ ಹತ್ತಿ  ಬಿತ್ತನೆಯಾಗಿದೆ. ನೀರಾವರಿ ರೈತರು ಭೂಮಿ ಹದ ಮಾಡಿಕೊಂಡು ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ.

‘ಈವರೆಗೆ 11.3 ಸೆಂ.ಮೀ. ಮಳೆಯಾಗಿದೆ. ಭೂಮಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಕಳೆದ ವರ್ಷ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ನಷ್ಟ ಅನುಭವಿಸ ಬೇಕಾಯಿತು. ಈ ವರ್ಷ ರೈತರಲ್ಲಿ ಆಸೆ ಮೂಡಿಸಿದ್ದ ಮುಂಗಾರು,  ಬಿತ್ತನೆಯ ನಂತರ ಕೈಕೊಟ್ಟಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂಬುದು ರೈತ ಮೂರ್ತಿ ಅವರ ಅಳಲು.

ಅಶ್ವಿನಿ ಮತ್ತು ಕೃತಿಕಾ ಮಳೆ ಕೈಕೊಟ್ಟಿವೆ. ಮೃಗಶಿರ ಮತ್ತು ಆರಿದ್ರ ಮಳೆ ರೈತರನ್ನು ಕೈಬಿಡುವುದಿಲ್ಲ ಎಂಬ ಮಾತು ಹುಸಿಯಾಗುವ ಹಂತ ತಲುಪಿದೆ. ಭರಣಿ ಮಳೆ ಬಂದ್ರೆ ಧರಣಿ ತುಂಬ ಕಾಳು ಎನ್ನು ಮಾತಾದರೂ ನಿಜವಾಗಬಹುದು ಎನ್ನುವ ಆಶಾಭಾವನೆಯಲ್ಲಿ ರೈತರು ಕಾಯುತ್ತಿದ್ದಾರೆ.

ಕೊಟ್ಟೂರು: ತಾಲ್ಲೂಕಿನಾದ್ಯಂತ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಕಾರಣ ರೈತರು ಉತ್ಸಾಹದಿಂದ ಭೂಮಿಯನ್ನು ಹದಗೊಳಿಸಿ ಬೀಜ ಬಿತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಎಳೆ ಪೈರು ಬಾಡುವುದನ್ನು ಕಂಡು ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 38,523 ಹೆಕ್ಟೇರ್ ನೀರಾವರಿ ಹಾಗೂ ಮಳೆಯಾಶ್ರಿತ ಕೃಷಿ ಯೋಗ್ಯ ಭೂಮಿ ಇದ್ದು, ಮಳೆಯಾಶ್ರಿತ ಭೂಮಿಯಲ್ಲಿ ಬಹುಪಾಲು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

‘ತಾಲ್ಲೂಕಿನಾದ್ಯಂತ ಶೇ 90ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ’ ಎಂದು ಸಹಾಯಕ ಕೃಷಿ ಅಧಿಕಾರಿ ಶ್ಯಾಮ ಸುಂದರ್ ತಿಳಿಸಿದರು.

‘ರೈತ ಸಂಪರ್ಕ ಕೇಂದ್ರ ಹಾಗೂ ರಸಗೊಬ್ಬರ ಅಂಗಡಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬೀಜ, ಗೊಬ್ಬರದ ದಾಸ್ತಾನು ಇದ್ದು, ಮಳೆ ಬಾರದ ಹಿನ್ನೆಲೆಯಲ್ಲಿ ವಹಿವಾಟು ಮಂದಗತಿಯಲ್ಲಿ ಸಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.

ತಾಲ್ಲೂಕಿನಾದ್ಯಂತ ಬಿಸಿಲು, ಒಣಹವೆ ಮುಂದುವರಿದಿದ್ದು, ಮೋಡಗಳ ಛಾಯೆ ಕಂಡುಬಂದರೂ ಮಳೆಯ ಲಕ್ಷಣ ಮಾತ್ರ ಕಾಣದೆ ಆಗಾಗ ತುಂತುರು ಹನಿಗಳನ್ನು ಕಾಣುವಂತಾಗಿದೆ.

‘ಆರಂಭದಲ್ಲಿ ಉತ್ತಮವಾಗಿ ಸುರಿದ ಮಳೆಯಿಂದ ಬಿತ್ತನೆಗೆ ಮುಂದಾದೆವು. ನಂತರ ಮಳೆ ಬಾರದಿರುವುದರಿಂದ ಎಳೆ ಪೈರು ಬಾಡುತ್ತಿರುವುದು ಚಿಂತೆಯಾಗಿದೆ’ ಎಂದು ಹುಣಸಿಕಟ್ಟೆ ಗ್ರಾಮದ ರೈತ ಬಸವರಾಜಪ್ಪ ಅಳಲು ತೋಡಿಕೊಂಡರು.

‘ಅತಿವೃಷ್ಟಿ, ಅನಾವೃಷ್ಟಿಗಳಿಂದ ಬಳಲುತ್ತಿರುವ ನಮಗೆ ಎಲ್ಲ ಕಡೆಯಿಂದಲೂ ಹೊಡೆತವೇ ಬೀಳುತ್ತಿದೆ. ಮಳೆ ಕೃಪೆ ತೋರಬೇಕು ಎಂಬ ಹಾರೈಕೆ ಬಿಟ್ಟರೆ ನಮಗೆ ಬೇರೆ ದಾರಿಯೇ ಕಾಣಿಸುತ್ತಿಲ್ಲ’ ಎಂದರು.

ತಿಂಗಳಿನಿಂದ ಮಳೆಬಾರದೆ ಬೆಳೆ ಬಾಡುತ್ತಿದೆ. ಮೋಡಕವಿದ ವಾತಾವರಣವಿದ್ದು, ಸಾಲುಗಳ ಮದ್ಯೆ ಹರಗುವುದರಿಂದ ಬೆಳೆ ಉಳಿಸಿಕೊಳ್ಳಬೇಕು.
ದೇವರಾಜ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕುರುಗೋಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.