ADVERTISEMENT

ವಿಜಯನಗರ ಕ್ಷೇತ್ರ ಉಪಚುನಾವಣೆ: ಗೊಂದಲದಲ್ಲಿ ಮುಳುಗಿದ ಮೂರೂ ಪಕ್ಷಗಳ ಕಾರ್ಯಕರ್ತರು

ಅಂತಿಮಗೊಳ್ಳದ ಅಭ್ಯರ್ಥಿಗಳ ಹೆಸರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಸೆಪ್ಟೆಂಬರ್ 2019, 19:45 IST
Last Updated 25 ಸೆಪ್ಟೆಂಬರ್ 2019, 19:45 IST
ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌. ಸುವರ್ಣ ಸಣೇಕಪ್ಪ ಅವರು ಬುಧವಾರ ಚುನಾವಣಾ ಅಧಿಕಾರಿ ಪಿ.ಎನ್‌. ಲೋಕೇಶ್‌ ಅವರಿಗೆ ನಾಮಪತ್ರ ಸಲ್ಲಿಸಿದರು
ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌. ಸುವರ್ಣ ಸಣೇಕಪ್ಪ ಅವರು ಬುಧವಾರ ಚುನಾವಣಾ ಅಧಿಕಾರಿ ಪಿ.ಎನ್‌. ಲೋಕೇಶ್‌ ಅವರಿಗೆ ನಾಮಪತ್ರ ಸಲ್ಲಿಸಿದರು   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿ ಮೂರು ದಿನಗಳಾಗಿವೆ. ಆದರೆ, ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬುದು ಇದುವರೆಗೆ ಅಂತಿಮಗೊಂಡಿಲ್ಲ. ಇದರಿಂದಾಗಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಕಾರ್ಯಕರ್ತರು ವರಿಷ್ಠರ ತೀರ್ಮಾನಕ್ಕೆ ಕಾದು ಕುಳಿತಿದ್ದಾರೆ. ಅಷ್ಟೇ ಅಲ್ಲ, ಒಂದು ಪಕ್ಷದ ತಂತ್ರ ನೋಡಿ, ಇನ್ನೊಂದು ಪಕ್ಷ ಪ್ರತಿತಂತ್ರ ಹೆಣೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿಯೇ ಮೂರೂ ಪಕ್ಷಗಳು ಸದ್ಯದಮಟ್ಟಿಗೆ ಮೌನ ವಹಿಸಿವೆ.

ಆನಂದ್‌ ಸಿಂಗ್‌ ಅವರ ಶಾಸಕತ್ವ ಅನರ್ಹತೆ ಪ್ರಕರಣ ಇದುವರೆಗೆ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ವರೆಗೆ ಕಾದು ನೋಡಿ ಮುಂದಿನ ತೀರ್ಮಾನಕ್ಕೆ ಬರಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಒಂದುವೇಳೆ ಅವರಿಗೆ ಟಿಕೆಟ್‌ ಸಿಗದಿದ್ದರೆ ಸಿಂಗ್‌ ಪತ್ನಿ ಲಕ್ಷ್ಮಿ ಸಿಂಗ್‌ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬಂದಿವೆ.

ADVERTISEMENT

ಬಿಜೆಪಿ ಅಭ್ಯರ್ಥಿ ಅಂತಿಮಗೊಂಡ ಬಳಿಕ ಕಾಂಗ್ರೆಸ್‌ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ. ಒಂದುವೇಳೆ ಬಿಜೆಪಿಯಿಂದ ಸಿಂಗ್‌ ಅಥವಾ ಅವರ ಪತ್ನಿ ಕಣಕ್ಕಿಳಿದರೆ ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ ಅವರನ್ನು ಪಕ್ಷಕ್ಕೆ ಕರೆತಂದು ನಿಲ್ಲಿಸುವ ಯೋಜನೆ ಕಾಂಗ್ರೆಸ್‌ ರೂಪಿಸಿದೆ. ಈಗಾಗಲೇ ಕಾಂಗ್ರೆಸ್‌ನ ಕೆಲ ಮುಖಂಡರು ಗವಿಯಪ್ಪ ಅವರನ್ನು ಸಂಪರ್ಕಿಸಿ, ಮನವೊಲಿಸುವ ಕೆಲಸ ಮಾಡಿದ್ದಾರೆ.

ಬಿಜೆಪಿ ಟಿಕೆಟ್‌ ಸಿಗುವ ಭರವಸೆ ಗವಿಯಪ್ಪ ಹೊಂದಿದ್ದಾರೆ. ಬಿಜೆಪಿಯ ಸ್ಥಳೀಯ ಮುಖಂಡರು ಅವರ ಪರ ವಕಾಲತ್ತು ಮಾಡುತ್ತಿದ್ದಾರೆ. ಒಂದುವೇಳೆ ಟಿಕೆಟ್‌ ಸಿಗದಿದ್ದಲ್ಲಿ ಅವರು ಕಾಂಗ್ರೆಸ್‌ಗೆ ಹೋಗುವ ಬದಲು ಪಕ್ಷೇತರರಾಗಿ ಅಖಾಡಕ್ಕೆ ದುಮುಕಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ.

ಅನೇಕ ವರ್ಷ ಕಾಂಗ್ರೆಸ್‌ ಪಕ್ಷ ಕಟ್ಟಿ ಬೆಳೆಸಿದ ದೀಪಕ್‌ ಕುಮಾರ್‌ ಸಿಂಗ್‌ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣ ಜೆ.ಡಿ.ಎಸ್‌. ಸೇರಿದ್ದರು. ಈ ಸಲ ಟಿಕೆಟ್‌ ನೀಡುವ ಭರವಸೆ ಕೊಟ್ಟರೆ ಕಾಂಗ್ರೆಸ್‌ಗೆ ಬರುವ ಚಿಂತನೆ ನಡೆಸಿದ್ದಾರೆ. ಆದರೆ, ಅವರಿಗೆ ಇದುವರೆಗೆ ಯಾವುದೇ ರೀತಿಯ ಖಚಿತ ಭರವಸೆ ಸಿಗದ ಕಾರಣ ಕಾದು ನೋಡುತ್ತಿದ್ದಾರೆ ಎನ್ನಲಾಗಿದೆ.

ಜೆ.ಡಿ.ಎಸ್‌.ನಿಂದ ಮಾಜಿಶಾಸಕ ಎನ್‌.ಎಂ. ನಬಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇನ್ನಷ್ಟೇ ಅವರ ಹೆಸರು ಅಂತಿಮಗೊಳ್ಳಬೇಕಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದ ಕಾರಣ ಸದ್ಯದ ಮಟ್ಟಿಗೆ ಆ ಪಕ್ಷಗಳಲ್ಲಿ ಯಾವುದೇ ರೀತಿಯ ಬೆಳವಣಿಗೆಗಳು ಕೂಡ ನಡೆಯುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.