ADVERTISEMENT

ವಿದ್ಯಾರ್ಥಿನಿಗೆ ಥಳಿತ ಪ್ರಕರಣ: ಕಸ್ತೂರಬಾ ಗಾಂಧಿ ಶಾಲೆಗೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:32 IST
Last Updated 24 ಜುಲೈ 2024, 16:32 IST

ಕಾನಹೊಸಹಳ್ಳಿ: ಸಮೀಪದ ಬಣವಿಕಲ್ಲು ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿ ಚಿಕ್ಕಮ್ಮ ಎಂಬುವವರಿಗೆ ಮುಖ್ಯಶಿಕ್ಷಕಿ ಥಳಿಸಿದ್ದಾರೆಂಬ ದೂರಿನ ಹಿನ್ನೆಲೆ ಶಾಲೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಮುಖ್ಯಶಿಕ್ಷಕಿ ವಾಣಿ ಹಾಗೂ ವಿದ್ಯಾರ್ಥಿನಿಯ ಪಾಲಕರನ್ನು ವಿಚಾರಿಸಿದ್ದಾರೆ. ‘ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹೊಡೆದಿಲ್ಲ. ಆದರೆ, ಆಕಸ್ಮಿಕವಾಗಿ ಸ್ಕೇಲ್ ತಗುಲಿದ್ದರಿಂದ ವಿದ್ಯಾರ್ಥಿನಿ ಕಾಲಿಗೆ ನೋವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ವೈದ್ಯರಲ್ಲಿ ತಪಾಸಣೆ ಮಾಡಿಸಲಾಗಿತ್ತು’ ಎಂದು ಮುಖ್ಯಶಿಕ್ಷಕಿ ವಾಣಿ ಹೇಳಿದ್ದಾರೆ.

‘ಮಗಳಿಗೆ ಮೊದಲೇ ಕಾಲಿನ ಆಪರೇಷನ್ ಆಗಿತ್ತು. ಶಾಲೆಯಲ್ಲಿ ಮುಖ್ಯಶಿಕ್ಷಕಿ ಹಿಡಿದಿದ್ದ ಸ್ಕೇಲ್ ಅಚಾತುರ್ಯದಿಂದ ಅದೇ ಕಾಲಿಗೆ ತಗುಲಿದ್ದರಿಂದ ಸ್ವಲ್ಪ ನೋವಾಗಿತ್ತು’ ಎಂದು ಚಿಕ್ಕಮ್ಮ ಅವರ ತಾಯಿ ಅಧಿಕಾರಿಗಳಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಸಂತಿ, ಬಿ.ಆರ್.ಪಿ ರೇವಣಸಿದ್ದಪ್ಪ, ಸಿ.ಆರ್.ಪಿ ಮಹಾಂತೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಅನ್ನಪೂರ್ಣಮ್ಮ, ಗ್ರಾಮ ಪಂಚಾಯ್ತಿ ಪಿಡಿಒ ತಿಪ್ಪೇಸ್ವಾಮಿ, ಕಸ್ತೂರಬಾ ಗಾಂಧಿ ವಸತಿ ಶಾಲೆಯ ಮುಖ್ಯಶಿಕ್ಷಕಿ ವಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.