ADVERTISEMENT

ಕಂಪ್ಲಿ | ಕರಡಿ ಸೆರೆ ಕಾರ್ಯಾಚರಣೆ: ಒಂದು ಬಲೆಗೆ, ಇನ್ನೊಂದು ಪಲಾಯನ

ದೇವಸಮುದ್ರದಲ್ಲಿ ಪ್ರತ್ಯಕ್ಷ: ದರೋಜಿ ಕರಡಿಧಾಮಕ್ಕೆ ಸಾಗಾಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:18 IST
Last Updated 18 ಜೂನ್ 2024, 15:18 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ಜನನಿಬಿಡ ಸ್ಥಳದಲ್ಲಿ ಮಂಗಳವಾರ ಕಾಣಿಸಿಕೊಂಡ ಕರಡಿ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ಜನನಿಬಿಡ ಸ್ಥಳದಲ್ಲಿ ಮಂಗಳವಾರ ಕಾಣಿಸಿಕೊಂಡ ಕರಡಿ   

ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಮಂಗಳವಾರ ಕಾಣಿಸಿಕೊಂಡ ಎರಡು ಕರಡಿಗಳಲ್ಲಿ ಒಂದು ಪಲಾಯನ ಮಾಡಿದ್ದು, ಇನ್ನೊಂದು ಕರಡಿಯನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿರುವ ಘಟನೆ ಮಂಗಳವಾರ ನಡೆದಿದೆ.

ಗ್ರಾಮದ ಅಮರೇಗೌಡ ಅವರು ವಾಯು ವಿಹಾರಕ್ಕೆ ತೆರಳಿದಾಗ ಎರಡು ಕರಡಿಗಳು ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ನೋಡಿ ತಕ್ಷಣ ಗ್ರಾಮಕ್ಕೆ ಮರಳಿ ವಿಷಯ ತಲುಪಿಸಿದ್ದಾರೆ. ಬಳಿಕ ಎರಡು ಕರಡಿಗಳನ್ನು ಕಂಡ ಗ್ರಾಮಸ್ಥರು ಗಲಾಟೆ ಮಾಡಿದ್ದರಿಂದ ಒಂದು ದೇವಸಮುದ್ರ-ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆ ಓಡಿ ಹೋಗಿದೆ.

ಮತ್ತೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮಂದಿ ಬಸವೇಶ್ವರ ದೇವಸ್ಥಾನ ಬಳಿ ಕಾಣಿಸಿಕೊಳ್ಳುತ್ತಿದ್ದಂತೆ ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದ್ದಾರೆ. ಗಾಬರಿಗೊಂಡ ಕರಡಿ ಓಡಿ ಹೋಗಿ ಗ್ರಾಮದ ಹೊರ ವಲಯದ ಗೋದಾಮಿನ ಬಳಿ ದಟ್ಟವಾಗಿ ಬೆಳೆದಿರುವ ಬೇಲಿ ಪೊದೆಯಲ್ಲಿ ಅವಿತು ಕುಳಿತಿತ್ತು. ಈ ವಿಷಯವನ್ನು ಗ್ರಾಮದ ಹೊನ್ನುರಪ್ಪ ಇತರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ADVERTISEMENT

ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಂ.ಎ.ಭರತ್‍ರಾಜ್ ನೇತೃತ್ವದ ತಂಡ ಕರಡಿ ಸೆರೆಗೆ ಕಾರ್ಯಾಚರಣೆ ನಡೆಸಿತು. ಕಮಲಾಪುರ ಅಟಲ್ ಬಿಹಾರಿವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಸಹಾಯಕ ಪಶು ವೈದ್ಯಾಧಿಕಾರಿ ಮಹೇಂದ್ರ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಕರಡಿ ಸೆರೆ ಹಿಡಿಯುವುದನ್ನು ನೋಡಲು ಜನ ಕುತೂಹಲದಿಂದ ನೆರೆದಿದ್ದರು.

ಪಾರ್ಕ್ ವಲಯ ಅರಣ್ಯಾಧಿಕಾರಿ ಶಿಳ್ಳೇಕ್ಯಾತ ಭೀಮರಾಯ್ ಮಾತನಾಡಿ, ಸೆರೆ ಸಿಕ್ಕ ಹೆಣ್ಣು ಕರಡಿ 4–5ವರ್ಷ ಇದ್ದು, ಯಾವುದೇ ಗಾಯಗಳಾಗಿಲ್ಲ. ಆರೋಗ್ಯ ತಪಾಸಣೆ ನಡೆಸಿ ದರೋಜಿ ಕರಡಿಧಾಮಕ್ಕೆ ಬಿಡಲಾಗುವುದು ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಪ್ರಾಣಿಪಾಲಕ ಗುರು, ಪ್ರಾದೇಶಿಕ ವಲಯ ಸಿಬ್ಬಂದಿ ಪರಶುರಾಮ, ರಾಘವೇಂದ್ರ, ರವಿಚಂದ್ರ, ವನ್ಯಜೀವಿ ತಜ್ಞ ವೈದ್ಯರು, ಇತರರು ಭಾಗವಹಿಸಿದ್ದರು.

ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ಹೊರ ವಲಯದ ಗೋದಾಮು ಬಳಿಯ ಮುಳ್ಳು ಪೊದೆಯಲ್ಲಿ ಅಡಗಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸೆರೆ ಹಿಡಿದು ಬೋನಿನಲ್ಲಿ ಸಾಗಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.