ಹೂವಿನಹಡಗಲಿ : ತಾಲ್ಲೂಕಿನಲ್ಲಿ ಕಟಾವು ಹಂತದಲ್ಲಿ ಮಳೆಗೆ ಸಿಲುಕಿದ್ದ ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಯ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ರೈತರು ಹೊಲದಲ್ಲಿ ಈರುಳ್ಳಿ ಕಿತ್ತು ಹಾಕಿದ ಸಂದರ್ಭದಲ್ಲೇ ವಾರವಿಡೀ ಮಳೆ ಸುರಿದಿತ್ತು. ಫಸಲು ಕಟಾವಿಗೆ ಬಂದಿರುವ ಹೊಲಗಳಿಗೆ ಮಳೆ ನೀರು ನುಗ್ಗಿ ಬೆಳೆ ಹಾನಿಗೀಡಾಗಿತ್ತು. ಮಳೆ ಕಡಿಮೆಯಾದ ಬಳಿಕ ರೈತರು ಹರಸಾಹಸಪಟ್ಟು ಕೊಳೆತ ಈರುಳ್ಳಿಯನ್ನು ಬೇರ್ಪಡಿಸಿ ತಿಪ್ಪೆಗೆ ಸುರಿದು, ಕೆಡದೇ ಇರುವ ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಗೆ ಕಳಿಸಿದ್ದಾರೆ. ಈ ಫಸಲು ಅಲ್ಲಿ ಖರೀದಿಯಾಗದೇ ರೈತರು ಕಣ್ಣೀರು ಹಾಕುವಂತಾಗಿದೆ. ಲಾರಿಯ ಬಾಡಿಗೆ ಹಣವೂ ಸಿಗದೇ ಪರದಾಡುವ ಸ್ಥಿತಿ ಬಂದಿದೆ.
ಉತ್ತಂಗಿ, ಕೆಂಚಮ್ಮನಹಳ್ಳಿ, ಗುಜನೂರು ಗ್ರಾಮಗಳ ರೈತರು ಸೋಮವಾರ ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಕೊಂಡೊಯ್ದಿದ್ದಾರೆ. ಮಳೆಗೆ ಸಿಲುಕಿದ ಫಸಲನ್ನು ವರ್ತಕರು ಖರೀದಿಗೆ ಮನಸ್ಸು ಮಾಡದೇ ಇರುವುದರಿಂದ ಎರಡು ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆವು. ಕಟಾವು ಮಾಡುವ ವೇಳೆ ಮಳೆ ಸುರಿದಿದ್ದರಿಂದ ಬೆಳೆ ಹಾನಿಗೀಡಾಗಿತ್ತು. 258 ಪಾಕೀಟ್ ಈರುಳ್ಳಿ ಉತ್ಪಾದನೆಯಾದರೂ ಬಹುಪಾಲು ಕೊಳೆತು ಹೋಗಿತ್ತು. ಕೆಡದೇ ಇರುವ ಗುಣಮಟ್ಟದ ಈರುಳ್ಳಿ ಬೇರ್ಪಡಿಸಿ 65 ಪಾಕೀಟ್ ಮಾತ್ರ ಬೆಂಗಳೂರಿಗೆ ಕೊಂಡೊಯ್ದಿದ್ದೆ. ಎರಡು ದಿನ ಕಳೆದರೂ ವರ್ತಕರು ನಮ್ಮ ಮಾಲು ಖರೀದಿಸಲು ಒಪ್ಪಲೇ ಇಲ್ಲ. ಲಾರಿ ಬಾಡಿಗೆ ಪಾವತಿಸುವುದು ಹೇಗೆಂದು ಚಿಂತೆಗೀಡಾಗಿತ್ತು. ಸಿದ್ದಗಂಗಾ ಟ್ರೇಡರ್ಸ್ ನ ಮಾಲೀಕರು ಲಾರಿ ಬಾಡಿಗೆ ಪಾವತಿಸಿ, ನಮ್ಮ ಖರ್ಚಿಗೆ ಎರಡು ಸಾವಿರ ಕೊಟ್ಟು ಕಳಿಸಿದರು. ಇದು ನನ್ನೊಬ್ಬನ ಸ್ಥಿತಿಯಲ್ಲ. ಹಲವು ರೈತರು ಈ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಉತ್ತಂಗಿಯ ರೈತ ಕೆ.ಎಂ. ಕೊಟ್ರೇಶ ಅಳಲು ತೋಡಿಕೊಂಡರು.
ಬೀಜ, ಗೊಬ್ಬರ, ಬೆಳೆ ನಿರ್ವಹಣೆಗೆ 1.50 ಲಕ್ಷ ಖರ್ಚು ಮಾಡಿದ್ದೇವೆ. ಈ ಬಾರಿ ಉತ್ತಮ ಬೆಲೆ ಇರುವುದರಿಂದ 5 ಲಕ್ಷ ರೂ. ಆದಾಯದ ನಿರೀಕ್ಷೆಯಲ್ಲಿದ್ದೆವು. ಆದರೆ, ನಾವು ಹಾಕಿದ ಬಂಡವಾಳವೂ ಬಾರದೇ ನಷ್ಟಕ್ಕೀಡಾಗಿದ್ದೇವೆ. ಸರ್ಕಾರವೇ ನಮ್ಮ ನೆರವಿಗೆ ಬರಬೇಕು ಎಂದು ಅವರು ಹೇಳಿದರು.
ಮಳೆಯಿಂದ ಈರುಳ್ಳಿ ಬೆಳೆ ಹಾನಿಗೀಡಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಿರ್ವಹಣೆ ಖರ್ಚು ಆಧರಿಸಿ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು’ ಎಂದು ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.