ADVERTISEMENT

ಆನ್‌ಲೈನ್‌ ವಂಚಕನ ಸೆರೆ: ₹1.21 ಕೋಟಿ ವಶ

₹2.11 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿರುವ ಕಿಂಗ್‌ಪಿನ್‌ಗಾಗಿ ಮುಂದುವರಿದ ತನಿಖೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 3:18 IST
Last Updated 19 ಸೆಪ್ಟೆಂಬರ್ 2024, 3:18 IST
ಅಜಯ್‌ ಜೈಸ್ವಾಲ್‌ 
ಅಜಯ್‌ ಜೈಸ್ವಾಲ್‌    

ಬಳ್ಳಾರಿ: ನಗರದ ‘ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ₹2.11 ಕೋಟಿ ವಂಚಿಸಿದ್ದ ಆನ್‌ಲೈನ್‌ ವಂಚಕರ ತಂಡದ ದುಷ್ಕರ್ಮಿಯೊಬ್ಬನನ್ನು ಬಂಧಿಸುವಲ್ಲಿ ಬಳ್ಳಾರಿಯ ಸೈಬರ್, ಆರ್ಥಿಕ, ಮಾದಕ ವಸ್ತು (ಸಿಇಎನ್‌) ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ. 

ವಂಚನೆಯ ಜಾಲ ಬೆನ್ನುಹತ್ತಿದ್ದ ಸಿಇಎನ್‌ ವಿಭಾಗದ ಡಿಎಸ್‌ಪಿ ಸಂತೋಷ್‌ ಚೌವ್ಹಾಣ್‌ ಅವರ ತಂಡ, ಮಧ್ಯಪ್ರದೇಶಕ್ಕೆ ತೆರಳಿ ಸಿದಿ ಜಿಲ್ಲೆಯ ಅಜಯ್‌ ಕುಮಾರ್‌ ಜೈಸ್ವಾಲ್‌ ಎಂಬಾತನನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ. 

‘ಅಜಯ್‌ ಕುಮಾರ್ ಬಂಧನದಿಂದಾಗಿ ₹1.21 ಕೋಟಿ ವಶಕ್ಕೆ ಪಡೆಯಲು ಸಾಧ್ಯವಾಗಿದೆ. ಇದರ ಜತೆಗೆ ₹27.97 ಲಕ್ಷವನ್ನು ಖಾತೆಯಲ್ಲೇ ಫ್ರೀಜ್‌ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್‌ ಜಫ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಕಿಂಗ್‌ಪಿನ್‌ಗಾಗಿ ಹುಡುಕಾಟ: ‘ಅಜಯ್‌ ಸಿದಿ ಜಿಲ್ಲೆಯಲ್ಲಿ ಡೇಟಾ ಆಪರೇಟರ್‌ ಆಗಿದ್ದು, ಕಿಂಗ್‌ಪಿನ್‌ನ ಆಜ್ಞೆಯಂತೆ ನಡೆದುಕೊಳ್ಳುತ್ತಿದ್ದ. ತನಗೆ ಬಂದ ಸೂಚನೆಯಂತೆ ಹಣ ವರ್ಗಾವಣೆ, ಡ್ರಾ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಹಣವನ್ನು 18 ಖಾತೆಗಳಿಗೆ ವರ್ಗಾಯಿಸಿ ಡ್ರಾ ಮಾಡಲಾಗಿತ್ತು ಎನ್ನಲಾಗಿದೆ. ಕಿಂಗ್‌ಪಿನ್‌ ದೆಹಲಿಯಲ್ಲಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಿಇಎನ್‌ ಠಾಣೆ ಡಿಎಸ್ಪಿ ಸಂತೋಷ ಚವ್ಹಾಣ್ ನೇತೃತ್ವದ ತಂಡದಲ್ಲಿ ಇನ್ಸ್‌ಪೆಕ್ಟರ್ ರಮಾಕಾಂತ್. ವೈ.ಎಚ್., ಸಿಬ್ಬಂದಿ ಎಂ.ಜಿ. ತಿಪ್ಪೇರುದ್ರಪ್ಪ, ಹನುಮಂತರೆಡ್ಡಿ, ಯಲ್ಲೇಶಿ, ವೆಂಕಟೇಶ್ ಇದ್ದರು.

ಆರೋಪಿಯಿಂದ ವಶಕ್ಕೆ ಪಡೆದ ಹಣವನ್ನು ಬ್ಯಾಗ್‌ ತುಂಬುತ್ತಿರುವ ತನಿಖಾ ತಂಡದ ಸಿಬ್ಬಂದಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.