ಬಳ್ಳಾರಿ: ‘ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿರುವ ಭತ್ತದ ಬೆಳೆ ಹಾನಿಯ ಸಮೀಕ್ಷೆ ನಡೆಸಬೇಕು. ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಕ್ವಿಂಟಲ್‌ಗೆ ₹2300 ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆರ್.ಮಾಧವರೆಡ್ಡಿ, ‘ನಾಲ್ಕು ಜಿಲ್ಲೆಗಳ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಲಕ್ಷ ಮೆಟ್ರಿಕ್ ಟನ್‌ನಷ್ಟು ಭತ್ತವನ್ನು ಬೆಳೆಯುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಟ 30, ಗರಿಷ್ಟ 35 ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿತ್ತು. ಕಳೆದ ಮೂರು ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರತಿ ಎಕರೆಗೆ ಅಂದಾಜು 7 ಕ್ವಿಂಟಲ್‌ನಷ್ಟು ಭತ್ತ ಹಾಳಾಗಿದೆ’ ಎಂದರು.
‘ಈಗಾಗಲೇ ಭತ್ತ ಕಟಾವು, ಒಕ್ಕಣೆ ಕೆಲಸ ನಡೆಯುತ್ತಿದೆ. ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಡಿ.1 ರಿಂದ ನಾಲ್ಕೂ ಜಿಲ್ಲೆಗಳಲ್ಲಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
‘ಆಂಧ್ರ, ತೆಲಂಗಾಣದ ಸರ್ಕಾರಗಳು ಅಲ್ಲಿನ ರೈತರಿಂದ 111 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಬೆಂಬಲ ಬೆಲೆಯಡಿಯಲ್ಲಿ ₹2320 ಖರೀದಿ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಕೇವಲ 2.25 ಲಕ್ಷ ಮೆಟ್ರಿಕ್ ಟನ್ (2,48,015 ಟನ್) ಖರೀದಿಸಲು ನಿರ್ಧಾರ ಮಾಡಿದೆ. ಇದನ್ನು ನೋಡಿದರೆ, ಬೆಂಬಲ ಬೆಲೆ ಘೋಷಣೆ ಮಾಡಿರುವುದು ಕೇವಲ ರೈತರ ಕಣ್ಣೊರೆಸುವ ತಂತ್ರ ಮಾತ್ರ’ ಎಂದರು.
‘ಸರ್ಕಾರದ ಈ ನಡೆಯಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. 2.25 ಲಕ್ಷ ಮೆಟ್ರಿಕ್ ಟನ್ ಮಿತಿಯನ್ನು ತೆಗೆದು, ಪ್ರತಿ ರೈತನಿಂದ ಕನಿಷ್ಟ 150 ಕ್ವಿಂಟಲ್ ಭತ್ತವನ್ನು ಬೆಂಬಲ ಬೆಲೆಯಡಿಯಲ್ಲಿ ಖರೀದಿಸಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.