ತೆಕ್ಕಲಕೋಟೆ: ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದ್ದು, ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯ ನಡವಿ, ನಿಟ್ಟೂರು, ಉಡೇ ಗೋಳ, ಬಲಕುಂದಿ, ಕರೂರು ಹೋಬಳಿ ವ್ಯಾಪ್ತಿಯ ದರೂರು, ಹೆಚ್. ಹೊಸಳ್ಳಿ ಸೇರಿದಂತೆ ಬಹುತೇಕ ಆರ್. ಎಸ್. ಆರ್ , ಗಂಗಾಕಾವೇರಿ ಹಾಗೂ ಸೋನಾ ಮಸೂರಿ ಭತ್ತದ ಗದ್ದೆಗಳು ಮಳೆಗೆ ನೆಲಕಚ್ಚಿವೆ.
‘ಕೊಯ್ಲಿಗೆ ಸಿದ್ದಗೊಂಡ ಭತ್ತದ ಗದ್ದೆ ಸಂಪೂರ್ಣವಾಗಿ ನೆಲಕಚ್ಚಿದ್ದು ಬೆಳೆ ಉತ್ತಮವಾಗಿದ್ದರೂ ಮಳೆಯಿಂದ ಬೆಲೆ ಹಾಗೂ ಇಳುವರಿಯ ಮೇಲೆ ಪ್ರಭಾವ ಬೀರುತ್ತದೆ‘ ಎಂದು ರೈತ ಅಯೂಬ್ ಆತಂಕ ವ್ಯಕ್ತಪಡಿಸಿದರು.
ಭತ್ತ ನೆಲಕ್ಕೆ ಬಿಟ್ಟಲ್ಲಿ ಮೊಳಕೆ ಒಡೆಯುವ ಸಾಧ್ಯತೆ ಇದ್ದು, ಒಂದೆರಡು ದಿನ ಬಿಸಿಲು ಬಂದರೆ ಮಾತ್ರ ಕೊಯ್ಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇನ್ನೂ ಹೆಚ್ಚಿನ ನಷ್ಟ ಸಂಭವಿಸಬಹುದು ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ 300 ಹೆಕ್ಟೇರ್ ಭತ್ತದ ಬೆಳೆ ನಷ್ಟಗೊಂಡ ವರದಿಯನ್ನು ಈಗಾಗಲೇ ಕೃಷಿ ಇಲಾಖೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.