ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಬುರ‍್ರಕಥೆ ಕಲಾವಿದೆ ಪೆದ್ದ ಮಾರೆಕ್ಕ ಅವರು 2021ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪೆದ್ದ ಮಾರೆಕ್ಕ ಅವರು ಅಕ್ಷರ ಲೋಕದಿಂದ ದೂರವಿದ್ದರೂ ಬುರ‍್ರಕಥೆ ಮತ್ತು ಕಾವ್ಯಗಳನ್ನು ಜನಜನಿತಗೊಳಿಸಿ ಅನೇಕ ಪಾತ್ರಗಳನ್ನು ಅಮರವಾಗುವಂತೆ ಮಾಡಿದ್ದಾರೆ.
ಕುಮಾರರಾಮ, ಕೃಷ್ಣಗೊಲ್ಲ, ಸ್ಯಾಸಿ ಚಿನ್ನಮ್ಮ, ಎಲ್ಲಮ್ಮ, ಮರ್ವಾಡಿ ಶೇಠ್, ಬಾಲನಾಗಮ್ಮ, ಬಲಿಚಕ್ರವರ್ತಿ, ಬೊಬ್ಬುಲಿ ನಾಗಿರೆಡ್ಡಿ ಮಹಾಕಾವ್ಯ, ಆದೋನಿ ಲಕ್ಷ್ಮಮ್ಮ ಕಾವ್ಯ, ಜೈ ಸಿಂಗ್ ರಾಜ ಮತ್ತು ಮಹಮ್ಮದ್ ಖಾನರ ಕಾವ್ಯ, ಗಂಗಿ ಗೌರಿ ಹಾಡುಗಳನ್ನು ತಮ್ಮ 58ನೇ ವಯಸ್ಸಿನಲ್ಲಿಯೂ ತಂಬೂರಿ, ಬುಡ್ಗ ವಾದ್ಯದ ಮೂಲಕ ತಮ್ಮ ಕಂಠ ಸಿರಿಯಲ್ಲಿ ದಣಿವಿಲ್ಲದೆ ಹಾಡುತ್ತಾರೆ.
ತಂದೆ ಕಥಲಾ ಪೆದ್ದಯ್ಯ, ತಾಯಂದಿರಾದ ಹೊನ್ನೂರಮ್ಮ ಮತ್ತು ಸಂಕಲ ಗಿಡ್ಡಮ್ಮ ಅವರಿಂದ ಬುರ‍್ರಕಥೆ ಕಾವ್ಯಗಳನ್ನು ಮೊದಲು ತೆಲುಗಿನಲ್ಲಿ ಹಾಡುವುದು ಕಲಿತುಕೊಂಡರು. ಬಳಿಕ ದರೋಜಿ ಈರಮ್ಮನವರ ಸ್ಫೂರ್ತಿಯಿಂದ ಕನ್ನಡದಲ್ಲಿ ಸರಾಗವಾಗಿ ಹಾಡುವುದನ್ನು ಕಲಿತರು. ಪತಿ ದೊಡ್ಡ ಮಾರೆಪ್ಪ ಅವರೊಂದಿಗೆ ಹಳ್ಳಿಗಳನ್ನು ಸುತ್ತಾಡುತ್ತಾ ಬುರ‍್ರಕಥೆ, ಕಾವ್ಯಗಳನ್ನು ಪ್ರಸ್ತುತಪಡಿಸಿ ದಾನದಿಂದ ಬಂದ ಧವಸ ದಾನ್ಯಗಳಿಂದ ಜೀವನ ನಡೆಸುತ್ತಿದ್ದೆವು ಎಂದು ಪೆದ್ದ ಮಾರೆಕ್ಕ ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡರು.
ಹಂಪಿ ಉತ್ಸವ, ಜನಪದ ಉತ್ಸವ, ಆದಿವಾಸಿ ಉತ್ಸವ, ಜಾನಪದ ಜಾತ್ರೆ, ರಾಜ್ಯ, ಹೊರ ರಾಜ್ಯಗಳಲ್ಲಿ ಬುರ‍್ರಕಥೆ ಕಾವ್ಯಗಳನ್ನು ಪ್ರಸ್ತುತ ಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರುಶಿಷ್ಯ ಪರಂಪರೆ ಯೋಜನೆಯಡಿಯಲ್ಲಿ ಬುರ‍್ರಕಥೆ ಕಲೆ ತರಬೇತಿ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರ ದಾಖಲೆಯ ಅವಲೋಕಿಸಿದಾಗ ಅಮೆರಿಕದ ಸಂಶೋಧಕರಿಗೂ ಸಂಶೋಧನಾ ಆಕರವಾಗಿದ್ದಾರೆ.
2015ರಲ್ಲಿ ಗ್ರಾಮದ ಎಸ್.ಸಿ ಮೀಸಲು ವಾರ್ಡ್‍ನಿಂದ ಸ್ಪರ್ಧಿಸಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾರೆಕ್ಕ ಅವರ ಸಾಧನೆ ಗುರುತಿಸಿ 2015ನೇ ಸಾಲಿನಲ್ಲಿ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್ ಬುರ‍್ರಕಥಾ ಈರಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ಕುಗ್ರಾಮದಲ್ಲಿ ಎಲೆಮರೆ ಕಾಯಿಯಂತಿದ್ದ ನನ್ನನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ ಮತ್ತು ಹಳೇದರೋಜಿ ಡಾ ಅಶ್ವ ರಾಮು ಅವರು ಗುರುತಿಸಿ ಬುರ‍್ರಕಥೆ ಪರಂಪರೆಗೆ ಗೌರವ ತಂದಿದ್ದಾರೆ ಎಂದು
ಪ್ರಶಸ್ತಿ ಪುರಸ್ಕೃತೆ ಪೆದ್ದ ಮಾರೆಕ್ಕ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.