ಹರಪನಹಳ್ಳಿ: ತಾಲ್ಲೂಕಿನ ಮೈದೂರು ಗ್ರಾಮದ ಕೆಂಚಪ್ಪನವರ ಕುಬೇರಪ್ಪ ಮತ್ತು ಸಿದ್ದೇಶ್ವರ ಸಹೋದರರು ತಮ್ಮ ತೋಟದಲ್ಲಿ ಬಹುಬೆಳೆ ಬೆಳೆದು ಹೆಚ್ಚಿನ ಇಳುವರಿ ಪಡೆಯುವ ಮೂಲಕ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ.
10 ಎಕರೆಯಲ್ಲಿ 3,800 ದಾಳಿಂಬೆ, 3,600 ಪಪ್ಪಾಯಿ ಗಿಡಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ದಾಳಿಂಬೆ ಗಿಡಗಳಿರುವ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 14 ಅಡಿ ಅಂತರ, ಗಿಡದಿಂದ ಗಿಡಕ್ಕೆ 8 ಅಡಿ ಅಂತರದಲ್ಲಿ ಪಪ್ಪಾಯಿ ಬೆಳೆದಿದ್ದಾರೆ.
ಸಸಿ ಇದ್ದಾಗ ದಿನಕ್ಕೆ ಪ್ರತಿ ಗಿಡಕ್ಕೆ 5ರಿಂದ 6 ಲೀಟರ್ ನೀರು ಕೊಟ್ಟಿದ್ದೇವೆ. ಗಿಡವಾದಾಗ 30ರಿಂದ 40 ಲೀಟರ್ ನೀರು ಕೊಟ್ಟಿದ್ದೇವೆ. ಕೇವಲ ಒಂದೇ ವರ್ಷದಲ್ಲಿ 12 ಅಡಿ ಎತ್ತರ ಬೆಳೆದಿರುವ ಪಪ್ಪಾಯಿ, ಗಿಡವೊಂದಕ್ಕೆ
2 ಕೆ.ಜಿ. ಯಿಂದ 5 ಕೆ.ಜಿ. ತೂಕವಿರುವ 70ಕ್ಕೂ ಅಧಿಕ ಕಾಯಿಗಳನ್ನು ಹೊಂದಿವೆ. ಕೆಲ ಏಜೆನ್ಸಿ ಅವರು ಖರೀದಿಸಲು ಸಾಧ್ಯವಿಲ್ಲ ಎಂದು ವಾಪಾಸು ಹೋಗಿದ್ದರು. ಮಹಾರಾಷ್ಟ್ರ ಮೂಲದ ಏಜೆನ್ಸಿಗಳು ಆಗಮಿಸಿ ಉತ್ತಮ ಬೆಲೆ ನೀಡಿ ಪಪ್ಪಾಯಿ ಖರೀದಿಸಿದರು ಎನ್ನುತ್ತಾರೆ ಪ್ರಗತಿಪರ ರೈತ ಕೆ.ಸಿದ್ದೇಶ್ವರ.
ಎಕರೆವೊಂದಕ್ಕೆ ₹1 ಲಕ್ಷದವರೆಗೂ ಖರ್ಚು ಮಾಡಿ ಉತ್ತಮ ಇಳುವರಿ ಮೂಲಕ ಲಕ್ಷಾಂತರ ಲಾಭ ಪಡೆದಿದ್ದೇವೆ. ಮೊದಲ ಕಟಾವಿನಲ್ಲಿ 60 ಟನ್ ಪಪ್ಪಾಯಿ ಬಂದಿದೆ. ಕೆ.ಜಿವೊಂದಕ್ಕೆ ₹21ರಿಂದ ₹28 ಬೆಲೆ ಸಿಕ್ಕಿತ್ತು. ಎರಡು ಮತ್ತು ಮೂರನೇ ಕಟಾವಿನಲ್ಲಿ 250 ಟನ್ ಇಳುವರಿ ದೊರೆತಿದ್ದು, ಕೆಜಿವೊಂದಕ್ಕೆ ₹9ರಿಂದ ₹11 ರವರೆಗೆ ಬೆಲೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.