ಬಳ್ಳಾರಿ: ‘ಮನುಷ್ಯನಿಗೆ ಪಾರ್ಶ್ವವಾಯು ಸಂಭವಿಸಿದಾಗ ಮೊದಲ ನಾಲ್ಕು ಗಂಟೆಯೊಳಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಆವರಣದ ಮೆದುಳಿನ ಚಿಕಿತ್ಸಾ ಕೇಂದ್ರದಲ್ಲಿ ಮಂಗಳವಾರ ಆಯೋಜಿಸದ್ದ ‘ವಿಶ್ವ ಸ್ಟ್ರೋಕ್ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
‘ದೈಹಿಕ ಬಲಹೀನತೆ, ಮೆದುಳು ನಿಷ್ಕ್ರೀಯತೆ ಲಕ್ಷಣ ಹೊಂದಿದ ಪಾರ್ಶ್ವವಾಯು ನಾಟಿ ಔಷಧಿಯಿಂದ ಸಂಪೂರ್ಣ ಗುಣಮುಖವಾಗುವುದಿಲ್ಲ. ಆಧುನಿಕ ಚಿಕಿತ್ಸೆಯಿಂದ ಮಾತ್ರ ಪೂರ್ಣ ಗುಣಮುಖವಾಗುವ ಭರವಸೆ ಇದೆ’ ಎಂದು ತಿಳಿಸಿದರು.
‘ಜಿಲ್ಲಾ ಆಸ್ಪತ್ರೆಯಲಿ ಸ್ಟ್ರೋಕ್ ಖಾಯಿಲೆಗೆ ತಜ್ಞ ವೈದ್ಯರಿಂದ ಸ್ಪೀಚ್ ತೆರಪಿ, ಫಿಸಿಕಲ್ ಥೆರಪಿ ಸೌಲಭ್ಯವಿದೆ. ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವಿದೆ. ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು’ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್ ಮಾತನಾಡಿ, ‘ಅಧಿಕ ರಕ್ತದೊತ್ತಡ, ಹೆಚ್ಚಿನ ಮಧುಮೇಹ, ತಲೆಸುತ್ತು, ರಕ್ತ ಪರಿಚಲನೆಯಲ್ಲಿ ಬದಲಾವಣೆ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ಸಮಸ್ಯೆಯಿಂದ ರೋಗಮುಕ್ತರಾಗಬೇಕು’ ಎಂದು ಹೇಳಿದರು.
ಯಾವುದೇ ಖಾಯಿಲೆಯಿಂದ ಬಳಲುತ್ತಿರುವವರು ಆತ್ಮಸ್ಥೈರ್ಯದಿಂದ ಜೀವನ ನಡೆಸಬೇಕು. ಉತ್ತಮ ಆರೋಗ್ಯ ಹೊಂದಲು ಮದ್ಯಸೇವನೆ, ಧೂಮಪಾನ ವ್ಯಸನದಿಂದ ದೂರವಿರಬೇಕು.
ಪಾರ್ಶ್ವವಾಯು ಕುರಿತು ಅರಿವು ಮೂಡಿಸಲು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಕಿರು-ನಾಟಕ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.