ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಶನಿವಾರ ಸಂಭ್ರಮ ಮನೆ ಮಾಡಿತ್ತು. ತಳಿರು, ತೋರಣ, ಹೂಗಳಿಂದ ಉದ್ಯಾನದ ಪ್ರವೇಶ ದ್ವಾರ, ಪ್ರಾಣಿಗಳ ಆವರಣಗಳನ್ನು ಅಲಂಕರಿಸಲಾಗಿತ್ತು. ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಮದುವೆ ಮನೆಯಂತೆ ಭಾಸವಾಗುತ್ತಿತ್ತು.
ಶನಿವಾರ ಉದ್ಯಾನದಲ್ಲಿ ಹಂಪಿ ಮೃಗಾಲಯದ ಉದ್ಘಾಟನಾ ಸಮಾರಂಭ ನಿಗದಿಯಾಗಿತ್ತು. ಆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು, ವನ್ಯಜೀವಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಪಾರ ಜನ ನೆರೆದಿದ್ದರು.
ಚಿರತೆ, ಕರಡಿ, ಗುಳ್ಳೆನರಿ, ಮೊಸಳೆ ಸೇರಿದಂತೆ ಇತರೆ ಪ್ರಾಣಿಗಳನ್ನು ಜನ ಹತ್ತಿರದಿಂದ ನೋಡಿ ರೋಮಾಂಚನಗೊಂಡರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡುಸಂಭ್ರಮಿಸಿದರು. ‘ಅದೋ ನೋಡಿ ಚಿರತೆ, ಕರಡಿ’ ಎಂದು ಉದ್ಗಾರ ತೆಗೆದು ಮಾತನಾಡುತ್ತಿರುವುದು ಕಂಡು ಬಂತು. ಕೆಲ ಚಿಣ್ಣರು ಅವುಗಳನ್ನು ನೋಡಿ ಅಚ್ಚರಿಪಟ್ಟರೆ, ಕೆಲವರು ಭಯಭೀತರಾಗಿ ಸಪ್ಪೆ ಮೊರೆ ಹಾಕಿದ್ದರು.
ಈ ಮಧ್ಯೆ ಸಚಿವ ಸಿ.ಸಿ. ಪಾಟೀಲ ಅವರು ರಿಬ್ಬನ್ ಕತ್ತರಿಸಿ ಮೃಗಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದರು. ಬಳಿಕ ಕಾಲ್ನಡಿಗೆಯಲ್ಲಿ ಪ್ರಾಣಿಗಳ ಆವರಣಗಳಿಗೆ ತೆರಳಿ ಅವುಗಳನ್ನು ನೋಡಿದರು. ಅವರಿಗೆ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಸಚಿವ ಹುಲಿ, ಸಿಂಹ ಸಫಾರಿ ಮಾಡಿದರು. ಇಂದಿರಾ ಪ್ರಿಯದರ್ಶಿನಿ ಜಿಂಕೆ ಉದ್ಯಾನಕ್ಕೆ ತೆರಳಿ ಕಣ್ತುಂಬಿಕೊಂಡರು.
ಬಳಿಕ ಸಚಿವರು ‘ಹಂಪಿ ಜೂ ಸಫಾರಿ’ ಕೈಪಿಡಿ ಬಿಡುಗಡೆಗೊಳಿಸಿದರು. ’ಕಲ್ಯಾಣ ಕರ್ನಾಟಕದಲ್ಲಿಯೇ ವಿಶಿಷ್ಟವಾದ ಉದ್ಯಾನವಿದು. ಸಫಾರಿ ಹಾಗೂ ಮೃಗಾಲಯ ಇದೆ. ಕಡಿಮೆ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಸಿಬ್ಬಂದಿ ಇದನ್ನು ಅಭಿವೃದ್ಧಿ ಪಡಿಸಿದ್ದಾರೆ. ಬರುವ ದಿನಗಳಲ್ಲಿ ಅಗತ್ಯ ಅನುದಾನ, ಸಿಬ್ಬಂದಿ ಕೊಟ್ಟು ಇನ್ನಷ್ಟು ಬೆಳೆಸಲಾಗುವುದು’ ಎಂದರು.
ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಈ. ತುಕಾರಾಂ, ಜಿ. ಸೋಮಶೇಖರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದೀನಾ ಮಂಜುನಾಥ, ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಶಿಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ, ವಲಯ ಅರಣ್ಯ ಅಧಿಕಾರಿ ರಮೇಶಕುಮಾರ, ಉಪ ವಲಯ ಅರಣ್ಯ ಅಧಿಕಾರಿ ಪರಮೇಶ್ವರಯ್ಯ, ಡಿ.ಸಿ.ಸಿ.ಎಫ್. ಲಿಂಗರಾಜು, ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.