ADVERTISEMENT

ಬಳ್ಳಾರಿ ಜನ ಈಗ ಶಾಂತಿಯಿಂದ ಬದುಕುತ್ತಿದ್ದಾರೆ: ಡಿ.ಕೆ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 9:46 IST
Last Updated 5 ನವೆಂಬರ್ 2024, 9:46 IST
   

ಬಳ್ಳಾರಿ: ‘ಬಳ್ಳಾರಿ ಜನ ಶಾಂತಿಯಿಂದ ಬದುಕುತ್ತಿದ್ದಾರೆ. ಅಂಥ ಕಾಲ ಈಗ ಬಂದಿದೆ. ಹಿಂದೆಲ್ಲ ಜನ ದೊಡ್ಡ ದೊಡ್ಡ ಕಷ್ಟ ಎದುರಿಸಿದರು. ಆದ್ದರಿಂದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದರು. 

ಸಂಡೂರು ತಾಲೂಕಿನ ತೋರಣಗಲ್‌ನ ತಿಮ್ಮಲಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ. ಅನ್ನಪೂರ್ಣ ಪರವಾಗಿ ಮಂಗಳವಾರ ಪ್ರಚಾರ ನಡೆಸಿದ ಅವರು ಮಾತನಾಡಿದರು. ‘ಕಾಂಗ್ರೆಸ್‌ ಕನಿಷ್ಠ ಸೇವೆಯನ್ನಾದರೂ ಮಾಡಿದೆ. ಅದಕ್ಕೆ ಕೂಲಿ ಕೇಳುತ್ತಿದ್ದೇವೆ. ಸಿಂಗಪುರ ಮಾಡುತ್ತೇವೆ, ನ್ಯೂಯಾರ್ಕ್‌ ಮಾಡುತ್ತೇವೆ, ಬೀಜಿಂಗ್‌ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಅವುಗಳಿಂದ ಪ್ರಯೋಜನವೂ ಆಗುವುದಿಲ್ಲ. ನೀವು ನೆಮ್ಮದಿಯಾಗಿರಬೇಕು’ ಎಂದು ತಿಳಿಸಿದರು. 

‘ಈಗೇನಾದರೂ ಪೊಲೀಸರಿಂದ ಕಿರುಕುಳ ಆಗುತ್ತಿದೆಯೇ, ರೌಡಿಗಳಿಂದ ಕಿರುಕುಳ ಇದೆಯೇ, ಯಾವುದಾದರೂ ತೊಂದರೆ ಇದೆಯೇ. ಬಳ್ಳಾರಿ ಜನ ಶಾಂತಿಯಿಂದ ಬದುಕುತ್ತಿದ್ದಾರೆ. ಅಂಥ ಕಾಲ ಈಗ ಬಂದಿದೆ. ಎಷ್ಟೋ ಜನ ಎಲ್ಲವನ್ನೂ ಮಾರಿಕೊಂಡರು. ದೊಡ್ಡ ದೊಡ್ಡ ಕಷ್ಟ ಅನುಭವಿಸಿದರು. ಯಾಕೆ ಕಷ್ಟ ಬಂತು ಎಂಬುದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲಾರೆ. ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮಾತ್ರ ಕೇಳುತ್ತೇನೆ’ ಎಂದು ಹೇಳಿದರು. 

ADVERTISEMENT

‘ಗ್ಯಾರಂಟಿಯಂಥ ಜನಪರ ಕಾರ್ಯಮವನ್ನು ಕೊಡಲು ಬಿಜೆಪಿಯಿಂದಾಗಲಿ, ಯಡಿಯೂರಪ್ಪ ಅವರಿಂದಾಗಲಿ, ಅವರ ಮಗ ವಿಜಯೇಂದ್ರ ಅವರಿಂದಾಗಲಿ, ಜನಾರ್ದನ ರೆಡ್ಡಿಯಿಂದಾಗಲಿ ಸಾಧ್ಯವಾಗಿಲ್ಲ’ ಎಂದೂ ಅವರು ಇದೇ ವೇಳೆ ಹೇಳಿದರು. 

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್‌, ‘ಶಾಂತಿ ಕೆಡಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಅವರ ಕಣ್ಣು ಗುಡ್ಡದ ಮೇಲೆ ಬಿದ್ದಿದೆ. ಹಿಂದೆ ಗುಡ್ಡದ ಮೇಲೆ ಕಣ್ಣು ಹಾಕಿ ಏನೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಜನ ಜಾಗೃತರಾಗಿರಬೇಕು’ ಎಂದು ಎಚ್ಚರಿಸಿದರು. 

‘ನಾವು ಸಂಡೂರನ್ನು ಬೀಜಿಂಗ್‌, ನ್ಯೂಯಾರ್ಕ್‌ ಮಾಡುವುದಿಲ್ಲ. ಅಧಿಕಾರ ಇದ್ದಾಗ ಇದೆಲ್ಲವನ್ನೂ ಬಿಜೆಪಿ ಯಾಕೆ ಮಾಡಲಿಲ್ಲ. ಎಲ್ಲರಿಗೂ ಉದ್ಯೋಗ, ಮೂಲಕಸೌಕರ್ಯ ಸಿಗಬೇಕು ಎಂಬುದು ಮಾತ್ರ ನಮ್ಮ ಗುರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.