ಸಂಡೂರು: ಮುಂಬರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ನೂರಕ್ಕೆ ನೂರರಷ್ಟು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕೂಡ್ಲಿಗಿ ರಸ್ತೆಯ ವಿಶ್ವಾಸ್.ಯು.ಲಾಡ್ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 'ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶ, ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ' ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ತುಕಾರಾಂ ಅವರು ಲೋಕಸಭೆಗೆ ನಮ್ಮ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದರು. ಸಂಡೂರು ಉಪಚುನಾವಣೆಗೆ ಬಿಜೆಪಿಯಿಂದ ಯಾರೇ ಜವಾಬ್ದಾರಿ ವಹಿಸಿಕೊಂಡರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಇದಕ್ಕಾಗಿ ಸಂತೋಷ್ ಲಾಡ್ ಹಾಗೂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿಯೇ ಉಳಿಯಲಿದ್ದಾರೆ’ ಎಂದು ಹೇಳಿದರು.
‘ಸಂಡೂರು ಕ್ಷೇತ್ರಕ್ಕೆ ಸುಮಾರು ₹220 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಾಗಿದೆ. ನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲಿ 12 ಸಾವಿರಕ್ಕೂಹೆಚ್ಚು ಮನೆಗಳನ್ನು ಸಂಡೂರು ತಾಲ್ಲೂಕಿಗೆ ನೀಡಲಾಗಿದೆ. ಇದೀಗ ರಾಜೀವ್ ಗಾಂಧಿ ವಸತಿ ನಿಗಮದಿಂದ ಪಟ್ಟಣದ ಕಪ್ಪಲಕುಂಟೆ ರಸ್ತೆಯಲ್ಲಿ 560 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುತ್ತಿದ್ದೇವೆ. ತುಕಾರಾಂ ತಮ್ಮ ಅಧಿಕಾರದ ಅವಧಿಯಲ್ಲಿ ₹ 2500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ರಾಜ್ಯದ ಆಯವ್ಯಯ ₹3.71 ಲಕ್ಷ ಕೋಟಿಯಾದರೆ ₹56 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳ ಮೂಲಕ ಬಡಜನರಿಗೆ ಒದಗಿಸಿದ್ದೇವೆ’ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ‘ಬಿಜೆಪಿಯವರು ದೇವರು, ಧರ್ಮದ ಮೇಲೆ ಚುನಾವಣೆ ಎದುರಿಸಿದರೆ ನಾವು ಧಾರ್ಮಿಕ ಆಚರಣೆಗಳ ಜೊತೆ, ಜೊತೆಗೆ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನಂಬಿಕೆ ತೋರಿದ್ದೇವೆ. ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಯಾರೇ ಕಣಕ್ಕಿಳಿದರೂ ಸಿದ್ರಾಮಯ್ಯನವರ ಕೈ ಬಲಪಡಿಸಬೇಕಿದೆ. ಒಳ ಮೀಸಲಾತಿ ವಿಚಾರದಲ್ಲಿ ತಾಂತ್ರಿಕ ಚರ್ಚೆ ನಡೆಯುತ್ತಿದೆ. ಎಡಗೈ-ಬಲಗೈ ಎನ್ನದೇ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇವೆ’ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಇಲ್ಲದಿದ್ದಾಗ್ಯೂ ಬಿಜೆಪಿಯವರು ಅವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಸಿದ್ರಾಮಯ್ಯನವರು ಬಡವರಿಗೆ ಅನುಕೂಲ ಆಗುವ ಕಾರ್ಯಕ್ರಮ ಮಾಡಿದ್ದಾರೆ. ಗುಜರಾತ್ ಮಾದರಿ ಎನ್ನುವ ಬಿಜೆಪಿಯವರು ಯಾವುದರಲ್ಲಿ ಆ ರಾಜ್ಯ ಮೊದಲನೇ ಸ್ಥಾನದಲ್ಲಿದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
‘ಕಾರ್ಮಿಕ ಇಲಾಖೆಯಿಂದ ಈ ಬಾರಿ 23 ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆ ನೀಡಲಾಗಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಇ.ತುಕಾರಾಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕಿ ಲತಾ ಮಲ್ಲಿಕಾರ್ಜುನ್, ಶಾಸಕ ಡಾ.ಎನ್.ಟಿ ಶ್ರೀನಿವಾಸ್, ಜಿ.ಎನ್ ಗಣೇಶ್, ನಾರಾ ಭರತ್ ರೆಡ್ಡಿ, ಬಿ.ಎಂ.ನಾಗರಾಜ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಮುಂಡ್ರಿಗಿ ನಾಗರಾಜ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿಎವೈಎಸ್ಪಿ ಪ್ರಸಾದ್ ಗೋಖಲೆ, ತಹಶೀಲ್ದಾರ್ ಅನಿಲ್ ಕುಮಾರ್, ತಾಲ್ಲೂಕು ಪಂಚಾಯ್ತಿ ಇಒ ಷಡಕ್ಷರಯ್ಯ, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬರಪ್ಪ, ಚಿತ್ರಿಕಿ ಸತೀಶ್, ಕುರುಬರ ಸತ್ಯಪ್ಪ, ಜಯರಾಂ.ಪಿ, ಕಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್, ಚಿತ್ರಿಕಿ ಮಹಾಬಲಿ, ರಮೇಶ್ ಗಡಾದ್ ಮುಂತಾದವರು ಇದ್ದರು.
ಮೊದಲ ಬಾರಿ ಬಾಗೀನ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಾರಿಹಳ್ಳ ಜಲಾಶಯಕ್ಕೆ ಭೇಟಿ ನೀಡಿ ಬಾಗೀನ ಅರ್ಪಿಸಿದರು. ನಾರಿಹಳ್ಳ ಜಲಾಶಯಕ್ಕೆ ಬಾಗೀನ ಅರ್ಪಿಸಿರುವುದು ಇದೇ ಮೊದಲು ಎಂದೇ ಹೇಳಲಾಗುತ್ತಿದೆ. ಉಪ ಚುನಾವಣೆ ಹತ್ತಿರ ಇರುವ ಸಂಬಂಧ ಬಾಗೀನ ಕಾರ್ಯಕ್ರಮ ಪ್ರಾಮುಖ್ಯತೆ ಪಡೆದುಕೊಂಡಿದೆ. ನಂತರ ಇಲ್ಲಿನ ಕಪ್ಪಲಕುಂಟೆ ರಸ್ತೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗಿರುವ 560 ಮನೆಗಳಿಗೆ ಚಾಲನೆ ನೀಡಿ ಫಲಾನುಭವಿಗಳಿಗೆ ಕೀ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.