ಬಳ್ಳಾರಿ: ರಾಮ ನಾಮ ಜಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು, ರಾಮನ ಆಶಯಗಳನ್ನು ದಿಕ್ಕರಿಸುತ್ತಾ ರಾಮನಿಗೆ ಮತ್ತು ಜನರಿಗೆ ಅಪಚಾರ ಮಾಡುತ್ತಿದ್ದಾರೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಮಾತನಾಡಿದರು. ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ್ದು ಅತ್ಯಂತ ಕೆಟ್ಟ ಬಜೆಟ್. 2014ರಲ್ಲಿ ₹52 ಲಕ್ಷ ಕೋಟಿ ಇದ್ದ ದೇಶದ ಸಾಲವನ್ನು ಮೋದಿ 10 ವರ್ಷಗಳಲ್ಲಿ ₹190 ಲಕ್ಷ ಕೋಟಿಗೆ ತಂದಿಟ್ಟಿದ್ದಾರೆ. ನಾಗರಿಕರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ‘ ಎಂದು ಆರೋಪಿಸಿದರು.
’ಸಾಲ ಮಾಡಿ ದೇಶ ನಡೆಸಬಾರದು. ರೈತರಿಗೆ, ಹೈನುಗಾರರಿಗೆ ರಾಜನಾದವನು ಆದ್ಯತೆ ನೀಡಬೇಕು‘ ಎಂದು ರಾಮನು ಭರತನಿಗೆ ಹೇಳಿದ ಉಲ್ಲೇಖ ರಾಮಾಯಣದಲ್ಲಿದೆ. ಆದರೆ, ವಿಪರೀತ ಸಾಲ ಮಾಡಿರುವ ರಾಮ ಭಕ್ತ ಮೋದಿ ರಾಮನ ಆಶಯಗಳನ್ನೇ ದಿಕ್ಕರಿಸಿದ್ದಾರೆ. ಮೋದಿ, ಬಿಜೆಪಿ ನಾಯಕರಿಗೆ ರಾಮಾಯಣವೇ ಗೊತ್ತಿಲ್ಲ‘ ಎಂದು ಟೀಕಿಸಿದರು.
ಗ್ಯಾರೆಂಟಿ ನಿಲ್ಲದು: ‘ಕಪ್ಪು ಹಣ, ಉದ್ಯೋಗ ಸೃಷ್ಟಿ ಸೇರಿದಂತೆ ಬಿಜೆಪಿ ನೀಡಿದ್ದ ಆಶ್ವಾಸನೆಗಳೆಲ್ಲವೂ ಸುಳ್ಳಾಗಿವೆ. ಆದರೆ, 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದ ಕಾಂಗ್ರೆಸ್, ನುಡಿದಂತೆ ನಡೆದಿದೆ. ಗ್ಯಾರೆಂಟಿಗಳನ್ನು ಯಾರೇ ಟೀಕಿಸಿಲಿ, ಅದರ ಬಗ್ಗೆ ಏನೇ ಹೇಳಲಿ ಅವು ನಿಲ್ಲುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.
ಮೋದಿ ಯುಗದಲ್ಲಿ ನೆರೆ ರಾಷ್ಟ್ರಗಳೆಲ್ಲ ಶತ್ರುಗಳೇ: ‘ಜೈಜವಾನ್ ಜೈ ಕಿಸಾನ್‘ ಎಂದು ಪ್ರಧಾನಿ ಮೋದಿ ದೊಡ್ಡದಾಗಿ ಹೇಳುತ್ತಾರೆ. ಭಾರತಕ್ಕೆ ನೆರೆ ದೇಶಗಳೆಲ್ಲ ಇಂದು ಶತ್ರು ರಾಷ್ಟ್ರಗಳಾಗಿವೆ. ಹೀಗಿದ್ದಾಗ ಸೈನಿಕರು ನೆಮ್ಮದಿಯಿಂದ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಗುಪ್ತಚರ ಮಾಹಿತಿ ಕಲೆ ಹಾಕುವಲ್ಲಿ ದೇಶವೊಂದು ಬಲಿಷ್ಠವಾಗಿರಬೇಕು ಎಂದೂ ರಾಮ ಹೇಳುತ್ತಾನೆ. ಆದರೆ, ಸಂಸತ್ ಮೇಲಿನ ದಾಳಿಯನ್ನು ಮೊದಲೇ ಅರಿಯದ ಮೋದಿ ಸರ್ಕಾರ ರಾಮನ ನೀತಿಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಸಂಸತ್‌ಗೆ ನುಗ್ಗಿದವರ ಬಾಯಲ್ಲಿ ಈಗ ವಿರೋಧ ಪಕ್ಷಗಳ ಹೆಸರು ಹೇಳಿಸುವ ಹುನ್ನಾರವೂ ನಡೆಯುತ್ತಿದೆ ಎಂದು ಕಿಡಿ ಕಾರಿದರು.
ಬೀಜ ಯಾವಾಗ ಬೀಳುತ್ತೆ!
ಕಾಂಗ್ರೆಸ್ ಎಂಬುದು ದಷ್ಟಪುಷ್ಟ ಹೋರಿ. ಅದರ ಬೀಜ ಯಾವಾಗ ಬೀಳುತ್ತದೆ ಎಂದು ಬಿಜೆಪಿ–ಜೆಡಿಎಸ್ ಎಂಬ ನರಿಗಳು ಹಿಂಬಾಲಿಸುತ್ತಲೇ ಇವೆ. ಈ ಹೋರಿಯನ್ನು ಹಿಂಬಾಲಿಸುವುದು ಬಿಟ್ಟು ಬಿಜೆಪಿ–ಜೆಡಿಎಸ್ ಕೇಂದ್ರದ ಬಳಿಗೆ ಹೋಗಿ ಅನುದಾನ, ಜಿಎಸ್‌ಟಿ ಬಾಕಿ, ಬರ ಪರಿಹಾರ ತರಲಿ‘ ಎಂದು ಉಗ್ರಪ್ಪ ವ್ಯಂಗ್ಯವಾಡಿದರು.
ಈ ಮೂಲಕ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಭಾರತದಿಂದ ಪ್ರತ್ಯೇಕಗೊಳ್ಳುವ ಕುರಿತ ಸಂಸದ ಡಿ.ಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಭಾರತ ಜೋಡೊ ಯಾತ್ರೆ, ನ್ಯಾಯಯಾತ್ರೆ ಮಾಡಿದ ಕಾಂಗ್ರೆಸ್ ಎಂದಿಗೂ ವಿಭಜನೆ ಬಗ್ಗೆ ಆಲೋಚಿಸುವುದಿಲ್ಲ. ಅನುದಾನ, ತೆರಿಗೆ ಪಾಲಿನಲ್ಲಿನ ತಾರತಮ್ಯದ ನೋವಿನಿಂದ ಸುರೇಶ್ ವಿಭಜನೆ ಮಾತಾಡಿದ್ದಾರೆ. ಇದಕ್ಕೆ ಅನ್ಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಇಡೀ ದೇಶದಲ್ಲೇ 20 ಸೀಟು ಗೆಲ್ಲದು, ಮುಂದಿನ ಚುನಾವಣೆ ರಾಮ–ಬಾಬರ್ ನಡುವಿನ ಚುನಾವಣೆ ಎಂಬ ಸಿ.ಟಿ ರವಿ ಮಾತಿಗೆ ’ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿ ಬಿಡು ನಾಲಿಗೆ’ ಎಂದಷ್ಟೇ ಉಗ್ರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.