ಹೊಸಪೇಟೆ: ಆನಂದ್ ಸಿಂಗ್ ಅವರು ಬಯಸಿದೆಲ್ಲ ಈಡೇರುತ್ತಿರುವ ಹೊತ್ತಿನಲ್ಲಿ ಅವರ ಖಾತೆ ಬದಲಾಗಿರುವುದು ಜಿಲ್ಲೆಯಲ್ಲಿ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.
ಹೊಸ ವರ್ಷದ ಆರಂಭದಲ್ಲೇ ಅರಣ್ಯದಂತಹ ಮಹತ್ವದ ಖಾತೆ ಅವರಿಂದ ಕಸಿದುಕೊಂಡು ಪ್ರವಾಸೋದ್ಯಮ ಖಾತೆ ಕೊಟ್ಟಿರುವುದು ಅವರಿಗಾದ ಹಿನ್ನೆಡೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.
ಆನಂದ್ ಸಿಂಗ್ ಅವರು 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಗೆದ್ದರು. 2020ರ ಆರಂಭದಲ್ಲೇ ಅವರಿಗೆ ಮಂತ್ರಿ ಸ್ಥಾನ ಒಲಿದು ಬಂತು. ಮಹತ್ವಕಾಂಕ್ಷಿ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದು, ಮುಖ್ಯಮಂತ್ರಿಯವರಿಂದ ಚಾಲನೆ ಕೊಡಿಸಲು ಯಶಸ್ವಿಯಾದರು. ಬಳಿಕ ವಿಜಯನಗರ ಜಿಲ್ಲೆ ರಚನೆಗೂ ಅನುಮೋದನೆ ಕೊಡಿಸಿದರು.
ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಲ್ಲಿ ಆನಂದ್ ಸಿಂಗ್ ಹಾಗೂ ಈ ಭಾಗದ ಜನರಿದ್ದಾರೆ. ಅದರ ಸಂಭ್ರಮಾಚರಣೆಗೂ ಸಿದ್ಧತೆ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿರುವಾಗಲೇ ಅವರ ಖಾತೆ ಅದಲು ಬದಲಾಗಿರುವುದು ಏಕೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದು, ಬೇರೆಲ್ಲ ವಿಚಾರಗಳು ಹಿಂದೆ ಸರಿದಿವೆ.
‘ಅಕ್ರಮ ಗಣಿಗಾರಿಕೆ, ಅರಣ್ಯ ನಾಶ ಆರೋಪ ಸೇರಿದಂತೆ 15 ಗಂಭೀರ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆನಂದ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಅವರಿಗೆ ಅರಣ್ಯ ಖಾತೆ ಕೊಟ್ಟರೆ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಕೊಟ್ಟಿರುವ ಅರಣ್ಯ ಖಾತೆ ಹಿಂಪಡೆಯಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಎಸ್.ಆರ್. ಹಿರೇಮಠ ಸೇರಿದಂತೆ ಇತರೆ ಸಂಘಟನೆಗಳವರು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತ ಬಂದಿದ್ದಾರೆ. ಇದೇ ವಿಷಯ ಆನಂದ್ ಸಿಂಗ್ ಅವರಿಗೆ ಈಗ ಮುಳುವಾಯಿತೇ? ಹೌದು ಎನ್ನುತ್ತಾರೆ ಬಿಜೆಪಿಯ ಮುಖಂಡರು.
‘ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಕೊಟ್ಟಿರುವುದಕ್ಕೆ ಸರ್ಕಾರ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹೀಗಾಗಿಯೇ ಮುಖ್ಯಮಂತ್ರಿಯವರು ಅವರ ಖಾತೆ ಬದಲಿಸಿದ್ದಾರೆ. ಆದರೆ, ಪ್ರವಾಸೋದ್ಯಮ ಖಾತೆ ಕೂಡ ಉತ್ತಮವಾಗಿದೆ. ಈ ಹಿಂದೆ ಆನಂದ್ ಸಿಂಗ್ ಅವರು ಆ ಖಾತೆ ನಿಭಾಯಿಸಿದ್ದಾರೆ. ಅವರಿಗೆ ಅದರ ಬಗ್ಗೆ ಅನುಭವ ಇರುವುದರಿಂದ ಸುಲಭವಾಗಿ ನಿರ್ವಹಿಸುತ್ತಾರೆ. ಸಿ.ಎಂ. ಅಳೆದು ತೂಗಿಯೇ ಆ ಖಾತೆ ಕೊಟ್ಟಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಅಂದಹಾಗೆ, ಆನಂದ್ ಸಿಂಗ್ ಅವರಿಗೆ ಕೇಳಿದೆಲ್ಲ ಮುಖ್ಯಮಂತ್ರಿ ಕೊಟ್ಟಿದ್ದಾರೆ. ಅದರಲ್ಲೂ ಅವರೇ ಹೇಳಿಕೊಂಡಂತೆ ವಿಜಯನಗರ ಜಿಲ್ಲೆ ರಚನೆ, ಏತ ನೀರಾವರಿ ಯೋಜನೆ ಅನುಷ್ಠಾನ ಅವರ ಪ್ರಮುಖ ಗುರಿಯಾಗಿತ್ತು. ಅವರೆಡೂ ಈಡೇರಿವೆ. ಸರ್ಕಾರದ ಎಲ್ಲ ಖಾತೆಗಳಿಗೂ ಅದರದೇ ಆದ ಮಹತ್ವ ಇರುತ್ತದೆ. ಮಹತ್ವದ್ದು, ಮಹತ್ವದಲ್ಲದು ಎಂದು ಇರುವುದಿಲ್ಲ’ ಎಂದರು.
ಜಿಲ್ಲೆಗೆ ನಾಲ್ಕನೇ ಸಲ ಒಲಿದ ಖಾತೆ
2006ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಳ್ಳಾರಿ ಜಿಲ್ಲೆಯ ಬಿ. ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದರು. ಬಳಿಕ 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯವರೇ ಆದ ಜನಾರ್ದನ ರೆಡ್ಡಿ ಈ ಖಾತೆ ನಿರ್ವಹಿಸಿದ್ದರು. ಅದಾದ ಬಳಿಕ 2012ರಲ್ಲಿ ಆನಂದ್ ಸಿಂಗ್ ಅವರಿಗೆ ಈ ಖಾತೆ ಒಲಿದು ಬಂದಿತ್ತು. ಅದರೊಂದಿಗೆ ಮೊದಲ ಸಲ ಆನಂದ್ ಸಿಂಗ್ ಸಚಿವರಾಗಿದ್ದರು. ಈಗ ಪುನಃ ಅವರಿಗೆ ಆ ಖಾತೆ ಸಿಕ್ಕಿದೆ.
‘ನನ್ನ ಗಮನಕ್ಕೆ ತಂದು ಖಾತೆ ಬದಲು’
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನನ್ನ ಗಮನಕ್ಕೆ ತಂದ ನಂತರವೇ ಖಾತೆ ಬದಲಿಸಿದ್ದಾರೆ. ಸಿ.ಎಂ. ತಂಡದ ಕ್ಯಾಪ್ಟನ್ ಇದ್ದಂತೆ. ಅವರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಪ್ರವಾಸೋದ್ಯಮ ಖಾತೆಯೇನೂ ಕಡಿಮೆ ಇಲ್ಲ. ಬರುವ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಹಿಂದೆ ಈ ಖಾತೆ ನಿಭಾಯಿಸಿರುವೆ. ಅದರ ಬಗ್ಗೆ ಅನುಭವ ಇರುವುದರಿಂದ ಸುಲಭವಾಗಿ ನಿರ್ವಹಿಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.