ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆ | ಆಸ್ತಿ ತೆರಿಗೆ: ಶೇ 40.85 ಗುರಿ ಸಾಧನೆ

ಆರ್. ಹರಿಶಂಕರ್
Published 8 ಆಗಸ್ಟ್ 2024, 5:41 IST
Last Updated 8 ಆಗಸ್ಟ್ 2024, 5:41 IST
ಬಳ್ಳಾರಿ ಮಹಾನಗರ ಪಾಲಿಕೆ 
ಬಳ್ಳಾರಿ ಮಹಾನಗರ ಪಾಲಿಕೆ    

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯು ಈ ವರ್ಷದ ಆಸ್ತಿ ತೆರಿಗೆಯಲ್ಲಿ ಈ ವರೆಗೆ ಶೇ 40.85 ರಷ್ಟು ಗುರಿ ಸಾಧನೆ ಮಾಡಿರುವುದು ಲಭ್ಯ ದಾಖಲೆಗಳಿಂದ ಗೊತ್ತಾಗಿದೆ. 

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟಾರೆ 1,30,457 ಆಸ್ತಿಗಳಿವೆ. ಇವುಗಳಿಂದ ಈ ವರ್ಷದ ಒಟ್ಟು ₹48.18 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿತ್ತು. ಆದರೆ, ಈ ವರ್ಷ ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೆ ₹19.68 ಕೋಟಿ ಸಂಗ್ರಹವಾಗಿದ್ದು, ಶೇ 40.85 ರಷ್ಟು ಗುರಿ ಸಾಧನೆಯಾಗಿದೆ. ಇನ್ನುಳಿದ ಶೇ 59.15 ತೆರಿಗೆ ಮುಂದಿನ ದಿನಗಳಲ್ಲಿ ಸಂಗ್ರಹವಾಗುವ ನಿರೀಕ್ಷೆಯನ್ನು ಪಾಲಿಕೆ ಹೊಂದಿದೆ.  

ಕಳೆದ ವರ್ಷ ಜುಲೈ ಹೊತ್ತಿಗೆ ₹19.09 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಜುಲೈ ಹೊತ್ತಿಗೆ ₹60 ಲಕ್ಷ ಹೆಚ್ಚಿನ ತೆರಿಗೆ ಸಂಗ್ರಹವಾಗಿರುವುದು ದತ್ತಾಂಶಗಳಿಂದ ತಿಳಿದು ಬಂದಿದೆ.  

ADVERTISEMENT

ಪ್ರತಿ ವರ್ಷದಂತೆ ಈ ವರ್ಷವೂ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಿದರೆ ಶೇ 5ರಷ್ಟು ರಿಯಾಯಿತಿ ನೀಡುವ ಕಾರ್ಯಕ್ರಮವನ್ನು ಏಪ್ರಿಲ್‌ನಲ್ಲೇ ಜಾರಿಗೆ ತರಲಾಗಿತ್ತಾದರೂ, ಆರಂಭದಲ್ಲಿ ಸರ್ವರ್‌ ಸಮಸ್ಯೆ ಎದುರಾಗಿತ್ತು. ಬಳಿಕ ಲೋಕಸಭಾ ಚುನಾವಣೆಗಳು ಬಂದಿದ್ದರಿಂದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿನ್ನೆಡೆಯಾಗಿತ್ತು. ಹೀಗಾಗಿ ಜೂನ್‌ 10ರಂದು ಆದೇಶ ಹೊರಡಿಸಿದ್ದ ನಗರಾಭಿವೃದ್ಧಿ ಇಲಾಖೆ ರಾಜ್ಯದ ಪಾಲಿಕೆಗಳ ವ್ಯಾಪ್ತಿಯಲ್ಲಿ ಶೇ 5ರ  ರಿಯಾಯಿತಿ ದರದ ಆಸ್ತಿ ತೆರಿಗೆ ಪಾವತಿಯನ್ನು ಜುಲೈ 31ರ ವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ಆದರೂ ಈ ವರೆಗೆ ಶೇ 40.85 ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. 

ಆಗಸ್ಟ್‌ನಿಂದ ದಂಡ ಸಹಿತ ಆಸ್ತಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶೇ 95.51 ಗುರಿ ಸಾಧನೆ: ಕಳೆದ ಆರ್ಥಿಕ ವರ್ಷದಲ್ಲಿ ಬಳ್ಳಾರಿ ಮಹಾನಗರ ಪಾಲಿಯು ಒಟ್ಟು 1,25,795 ಆಸ್ತಿಗಳಿಂದ ಒಟ್ಟಾರೆ 36.51 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. 2024ರ ಮಾರ್ಚ್‌  ಅಂತ್ಯದ ಹೊತ್ತಿಗೆ ₹34.87 ಕೋಟಿ ಸಂಗ್ರಹಿಸಿದ್ದ ಪಾಲಿಕೆ ಶೇ 95.51 ಗುರಿ ಸಾಧನೆ ಮಾಡಿದೆ. ಆದರೆ, ಶೇ 4.49ರಷ್ಟು ಆಸ್ತಿ ತೆರಿಗೆ ಪಾವತಿಯಾಗದೇ ಉಳಿದಿರುವುದು ಲಭ್ಯ ಅಂಕಿ ಅಂಶಗಳಿಂದ ಗೊತ್ತಾಗಿದೆ. 

ಆಸ್ತಿ, ಗುರಿ ಹೆಚ್ಚಳ: ಕಳೆದ ವರ್ಷ ಪಾಲಿಕೆ ವ್ಯಾಪ್ತಿಯಲ್ಲಿ 1,25,795 ಆಸ್ತಿಗಳಿದ್ದವು. ಅವುಗಳಿಂದ ಒಟ್ಟು ಬೇಡಿಕೆ ₹36.51 ಕೋಟಿಯಾಗಿತ್ತು. ಈ ವರ್ಷ ಆಸ್ತಿಗಳ ಸಂಖ್ಯೆ ಮತ್ತು ಬೇಡಿಕೆ ಮೊತ್ತದಲ್ಲೂ ಹೆಚ್ಚಳವಾಗಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 1,30,457 ಆಸ್ತಿಗಳಿದ್ದು, ಕಳೆದ ಬಾರಿಗಿಂತಲೂ  4,662 ಆಸ್ತಿಗಳು ಹೆಚ್ಚಳವಾಗಿದೆ. ಈ ಆರ್ಥಿಕ ವರ್ಷದ ಬೇಡಿಕೆ ₹48.18 ಕೋಟಿಯಾಗಿದ್ದು, ₹11.67 ಕೋಟಿಯಷ್ಟು ಏರಿಕೆಯಾಗಿದೆ. 

ತೆರಿಗೆ ಸಂಗ್ರಹ ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಆದರೆ ಇನ್ನೂ ಹೆಚ್ಚಿನ ಭಾಗ ಆಗಬೇಕಿದೆ. ಜಾಗೃತಿ ಕಾರ್ಯಕ್ರಮಗಳೆಲ್ಲವೂ ಮುಗಿದಿದೆ. ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆದಾರರಿಗೆ ಇನ್ನು ಮುಂದೆ ನೋಟಿಸ್‌ ಜಾರಿಗೊಳಿಸುತ್ತೇವೆ.
– ಖಲೀಲ್‌ ಸಾಬ್‌, ಬಳ್ಳಾರಿ ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.