ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮವು ಅಳಿವಿನಂಚಿಲ್ಲಿರುವ ಅಪರೂಪದ ಪಕ್ಷಿಗಳ ಸಂರಕ್ಷಿತ ತಾಣವಾಗಿದೆ.
ಇದು ಹೈದರಾಬಾದ್ ಕರ್ನಾಟಕದ ಮೊದಲ ಸಂರಕ್ಷಿತ ಪಕ್ಷಿಧಾಮವೂ ಹೌದು. 244.4 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಅಲ್ಲಿನ ಕರುಜಾಲಿ ಮರಗಳಲ್ಲಿ 140ಕ್ಕೂ ಹೆಚ್ಚು ಜಾತಿಯ ಪಕ್ಷಿಗಳ ಆಶ್ರಯ ಪಡೆದಿವೆ.
ಬೂದು ಬಣ್ಣದ ಕೊಕ್ಕರೆ, ಬೂದು ಬಕ, ಇರುಳು ಬಕ, ನೀರು ಕಾಗೆ, ಗೋವಕ್ಕಿ, ಹೆಜ್ಜಾರ್ಲೆ, ಕಬ್ಬಕ್ಕಿಗಳು, ಕೊಕ್ಕರೆ ಸೇರಿದಂತೆ ವಿವಿಧ ಪ್ರಭೇದದ ಅಸಂಖ್ಯ ಪಕ್ಷಿಗಳು ಇಲ್ಲಿ ನೆಲೆಸಿವೆ. ಇಲ್ಲೇ ಸಂತಾನೋತ್ಪತ್ತಿ ಕೂಡ ಮಾಡುತ್ತವೆ.
ವೆಂಕಾವಧೂತರ ಏತ ನೀರಾವರಿಯಿಂದ ಅಂಕಸಮುದ್ರ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು ಇರುತ್ತಿದೆ. ಹೀಗಾಗಿ ಬಾನಾಡಿಗಳು ಸದಾ ಇಲ್ಲೇ ಠಿಕಾಣಿ ಹೂಡಲು ಇದೊಂದು ಪ್ರಮುಖ ಕಾರಣವಾಗಿದೆ. ಕೆರೆಗೆ ಸೇರಿದ 70 ಎಕರೆ ಅತಿಕ್ರಮಣ ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ವಿಶ್ವ ಪರಿಸರದ ದಿನದ ಪ್ರಯುಕ್ತ ನೂರಾರು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ‘ಯುವ ಬ್ರಿಗೇಡ್’ ಸದಸ್ಯರು ಕೈ ಜೋಡಿಸಿದ್ದಾರೆ.
‘ಕೆರೆಯ ಸುತ್ತ ತಡೆಗೋಡೆ ನಿರ್ಮಿಸಬೇಕು. ಕೆರೆ ಪರಿಸರದಲ್ಲಿ ಬದುಕು ಕಂಡುಕೊಂಡಿರುವ ಪಕ್ಷಿಗಳಿಗ ರಕ್ಷಣೆ ಒದಗಿಸಿದಂತಾಗುತ್ತದೆ’ ಎನ್ನುತ್ತಾರೆ ಯುವ ಬ್ರಿಗೇಡ್ ಸದಸ್ಯ ಆರ್.ವೆಂಕರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.