ADVERTISEMENT

‘ಲಿಂಗತ್ವ ಅಲ್ಪ ಸಂಖ್ಯಾತರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:37 IST
Last Updated 22 ಅಕ್ಟೋಬರ್ 2024, 15:37 IST
ಸುದ್ದಿಗೋಷ್ಠಿಯಲ್ಲಿ ಮಂಗಳಮುಖಿ ಗೌಸಿಯಾ ಬೇಗಂ ಮಾತನಾಡಿದರು. ‘ಸಂಗಮ’ ಸಂಘಟನೆಯ ಬಳ್ಳಾರಿ, ವಿಜಯನಗರ ಸಂಯೋಜಕಿ ಚಾಂದಿನಿ, ಜನವಾದಿ ಮಹಿಳಾ ಸಂಘಟನೆಯ ಜೆ.ಚಂದ್ರಕುಮಾರಿ ಮತ್ತಿತರರು ಇದ್ದರು. 
ಸುದ್ದಿಗೋಷ್ಠಿಯಲ್ಲಿ ಮಂಗಳಮುಖಿ ಗೌಸಿಯಾ ಬೇಗಂ ಮಾತನಾಡಿದರು. ‘ಸಂಗಮ’ ಸಂಘಟನೆಯ ಬಳ್ಳಾರಿ, ವಿಜಯನಗರ ಸಂಯೋಜಕಿ ಚಾಂದಿನಿ, ಜನವಾದಿ ಮಹಿಳಾ ಸಂಘಟನೆಯ ಜೆ.ಚಂದ್ರಕುಮಾರಿ ಮತ್ತಿತರರು ಇದ್ದರು.    

ಬಳ್ಳಾರಿ: ಲಿಂಗತ್ವ ಅಲ್ಪ ಸಂಖ್ಯಾತರಿಗೆ ವಸತಿ ಸೌಲಭ್ಯ ನೀಡಬೇಕು, ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಅ.24 ರಂದು ಸ್ವಾಭಿಮಾನಿ ನಡಿಗೆ ಹೆಸರಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ‘ಸಂಗಮ’ ಸಂಘಟನೆಯ ಬಳ್ಳಾರಿ, ವಿಜಯನಗರ ಸಂಯೋಜಕಿ ಚಾಂದಿನಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗತ್ವ ಅಲ್ಪ ಸಂಖ್ಯಾತರು ಸಮಾಜದ ಒಂದು ಭಾಗ. ಸ್ವಾಭಿಮಾನಿಗಳಾದ ನಮಗೂ ಹಕ್ಕುಗಳು ಸಿಗಬೇಕು. ಸಮಾಜದಲ್ಲಿ ನಮ್ಮನ್ನು ಹೀನವಾಗಿ ನೋಡಲಾಗುತ್ತದೆ. ವಸತಿ, ನೌಕರಿ, ಜೀವನಕ್ಕಾಗಿ ಲೈಂಗಿಕ ಕೃತ್ಯ, ಭಿಕ್ಷಾಟನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಲಿಂಗತ್ವ ಅಲ್ಪ ಸಂಖ್ಯಾತರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಮೀಸಲಾತಿಯ ಪ್ರಕಾರ ಶೇ 1 ರಷ್ಟು ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. 

‘ಶಕ್ತಿ, ಗೃಹಲಕ್ಷ್ಮಿ ಯೋಜನೆಗಳಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರನ್ನು ಪರಿಗಣಿಸುತ್ತಿಲ್ಲ. ಸರ್ಕಾರಿ ಬಸ್‌ಗಳಲ್ಲೂ ಕಾರ್ಡ್ ತೋರಿಸಿದರೂ ನಿರ್ವಾಹಕರು ಬಿಡುತ್ತಿಲ್ಲ. ನಮ್ಮಲ್ಲೂ ಪದವಿ ವ್ಯಾಸಂಗ ಮಾಡಿರುವ ಹಲವರು ಇದ್ದಾರೆ. ಜೆಎಡ್‌ಡಬ್ಲ್ಯು ಸಂಸ್ಥೆ ಆಹ್ವಾನದ ಮೇರೆಗೆ 30–40 ಜನರು ಉದ್ಯೋಗಕ್ಕಾಗಿ ತೆರಳಿದರೆ, ನಮ್ಮನ್ನು ಸಂದರ್ಶನ ಮಾಡಿ, ನೇಮಕಾತಿ ಆದೇಶ ನೀಡಿದರು. ವಸತಿ ಸೌಲಭ್ಯ ಕಲ್ಪಿಸಿ, ಶೌಚಾಲಯವೊಂದನ್ನು ಪ್ರತ್ಯೇಕವಾಗಿ ನಿರ್ಮಿಸಿದ ಬಳಿಕ ತಿಳಿಸುವುದಾಗಿ ಹೇಳಿದ ಅವರು ಬಳಿಕ ಉದ್ಯೋಗವನ್ನೇ ನೀಡಲಿಲ್ಲ. ಒಂದೆರಡು ಬಾರಿ ನಾವು ಹೋಗಿ ಕೇಳಿದರೂ, ಅವರಿಂದ ಸ್ಪಂದನೆ ಸಿಗಲಿಲ್ಲ’ ಎಂದು ಗೌಸಿಯಾ ಬೇಗಂ ಎಂಬುವವರು  ಬೇಸರ ವ್ಯಕ್ತಪಡಿಸಿದರು.

ADVERTISEMENT

ಜನವಾದಿ ಮಹಿಳಾ ಸಂಘಟನೆಯ ಜೆ.ಚಂದ್ರಕುಮಾರಿ, ಎಫ್‌ಪಿಎಐ ಅಸೋಸಿಯೇಷನ್ ವಿಜಯಲಕ್ಷ್ಮೀ, ಸೌಖ್ಯಬೆಳಕು ಸಂಘಟನೆಯ ಶಿವಮ್ಮ, ಕೊಳಗೇರಿ ನಿವಾಸಿಗಳ ಸಂಘದ ಶೇಖರ್ ಬಾಬು ಸೇರಿ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.