ADVERTISEMENT

ಮರಿಯಮ್ಮನಹಳ್ಳಿ | ಹೀಗೊಂದು ಮಾದರಿ ‘ಅರಿವು ಕೇಂದ್ರ’

114–ಡಣಾಪುರ: ಗ್ರಾಮ ಡಿ.ಜಿ ವಿಕಸನದಡಿ ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 5:38 IST
Last Updated 24 ಜುಲೈ 2024, 5:38 IST
ಮರಿಯಮ್ಮನಹಳ್ಳಿ ಸಮೀಪದ 114-ಡಣಾಪುರ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ (ಅರಿವು ಕೇಂದ್ರ) ಬೇಸಿಗೆ ರಜೆಯಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ವಿದ್ಯಾರ್ಥಿಗಳು
ಮರಿಯಮ್ಮನಹಳ್ಳಿ ಸಮೀಪದ 114-ಡಣಾಪುರ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ (ಅರಿವು ಕೇಂದ್ರ) ಬೇಸಿಗೆ ರಜೆಯಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ವಿದ್ಯಾರ್ಥಿಗಳು   

ಮರಿಯಮ್ಮನಹಳ್ಳಿ: ಅಲ್ಲಿ ಹಿರಿಯರಿಗಿಂತ ಮಕ್ಕಳದ್ದೇ ಕಲರವ, ನಿತ್ಯ ಶಾಲೆ ಬಿಟ್ಟ ನಂತರ, ಹಾಗೂ ಶನಿವಾರ, ಭಾನುವಾರ ಅವರದ್ದೇ ಆಟ, ಪಾಠ, ಓದು. ಕೆಲವರು ಟಿ.ವಿ, ಕಂಪ್ಯೂಟರ್ ಮುಂದೆ ಕುಳಿತ್ತಿದ್ದರೆ, ಕೆಲವರ ಕೈಯಲ್ಲಿ ದಿನಪತ್ರಿಕೆ, ಕಥೆ ಪುಸ್ತಕಗಳು, ಇನ್ನು ಕೆಲವರು ಚೆಸ್ ಇತರೆ ಆಟದಲ್ಲಿ ಮಗ್ನ...

ಇವು ಸಮೀಪದ 114-ಡಣಾಪುರ ಗ್ರಾಮದ ಹಾಗೂ ಜಿಲ್ಲೆಯ ಮಾದರಿ ‘ಅರಿವು ಕೇಂದ್ರ’ಕ್ಕೆ (ಸಾರ್ವಜನಿಕ ಗ್ರಂಥಾಲಯ) ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳಿವು.

ಶಿಕ್ಷಣ ಫೌಂಡೇಷನ್ ಸಂಸ್ಥೆಯ ಆರ್‌ಡಿಪಿಆರ್ ಇಲಾಖೆಯ ಸಹಕಾರದೊಂದಿಗೆ ರಾಜ್ಯದ ಆಯ್ದ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನಗೊಂಡಿರುವಲ್ಲಿ ಇದು ಒಂದಾಗಿದೆ.

ADVERTISEMENT

ಈ ಕಾರ್ಯಕ್ರಮದಡಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಪೀಡಿಯಾ ಮೊಬೈಲ್ ಆ್ಯಪ್‍ನಲ್ಲಿ ಅಕಡೆಮಿಕ್ ಸ್ಕಿಲ್ಸ್ ಮತ್ತು ಸ್ಟೋರೀಸ್ ಎಂಬ ಮೂರು ವಿಷಯದ ಆಡಿಯೋ, ವಿಡಿಯೋ, ಛಾಯಚಿತ್ರಗಳು, ನಕಾಶೆ, ಪ್ರಶ್ನೆ ಪತ್ರಿಕೆ, ಕ್ವಿಜ್ ಸೇರಿದಂತೆ ಇತರೆ ಕೌಶಲ ಅಭಿವೃದ್ಧಿ ಪೂರಕ ಸಂಪನ್ಮೂಲಗಳನ್ನು ಹಾಕಲಾಗಿದೆ.

ಒಂದು ಟಿವಿ, 4 ಮೊಬೈಲ್‍ಗಳು, ವೈಫೈ ರೂಟರ್ ಜೊತೆಗೆ ಒಂದು ವರ್ಷದ ಇಂಟರ್ನೆಟ್ ಅನ್ನು ರಿಚಾರ್ಜ್ ಮಾಡಿಕೊಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ‘ರೂರ್‍ಬನ್’ ಯೋಜನೆಯಡಿ ಒಟ್ಟು 7ಕಂಪ್ಯೂಟರ್, ಒಂದು ಕಲರ್ ಪ್ರಿಂಟರ್, ಚೇರ್, ಟೇಬಲ್‍ಗಳನ್ನು ಒದಗಿಸಿಕೊಟ್ಟಿದ್ದಾರೆ.

7ಸಾವಿರ ಪುಸ್ತಕ: ದಿನಪತ್ರಿಕೆಗಳು ಸೇರಿದಂತೆ ಕಥೆ ಕಾದಂಬರಿ, ಕಲೆ, ಸಾಹಿತ್ಯ, ನಾಟಕ, ಇತಿಹಾಸ, ಆರೋಗ್ಯ, ಕೃಷಿ, ಶಿಕ್ಷಣ, ಪಠ್ಯ ಪುಸ್ತಕ, ವಿಜ್ಞಾನ, ಚರಿತ್ರೆ, ಕಾನೂನು, ಪಂಚಾಯತ್ ರಾಜ್, ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ಒಟ್ಟಾರೆ 7 ಸಾವಿರ ಪುಸ್ತಕಗಳಿವೆ.

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ನಿತ್ಯ ಬಿಡುವಿನ ಸಮಯದಲ್ಲಿ ಬಂದು ಅಧ್ಯಯನ ಮಾಡಿ ಸದುಪಯೋಗ ಪಡಿಸಿಕೊಳ್ಳುತ್ತಿರುವುದು ಈ ಗ್ರಂಥಾಲಯದ ವಿಶೇಷ ಎನ್ನುತ್ತಾರೆ ಗ್ರಂಥಪಾಲಕಿ ಜ್ಯೋತಿ.

ಸ್ಥಳೀಯ ಬಿ.ಎ ವಿದ್ಯಾರ್ಥಿನಿ ಎಲ್.ಪವಿತ್ರ ಅವರು ಗ್ರಂಥಾಲಯದಲ್ಲಿನ ಕಂಪ್ಯೂಟರ್ ಜ್ಞಾನ ಮತ್ತು ಅದಕ್ಕೆ ಪೂರಕವಾದ ಶಿಕ್ಷಣ ಪೀಡಿಯಾದಲ್ಲಿ ತಾನು ಕಲಿತಿರುವ ಕೌಶಲಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಚೆಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ‘ವಿಜಯನಗರದ ಡಣಾಪುರದ ಪವಿತ್ರರಿಗೆ ಕಂಪ್ಯೂಟರ್ ಕಲಿಕೆಯೊಂದಿಗೆ ಕನ್ನಡ ಸಾಹಿತ್ಯದ ಓದಿಗೆ ಸಹಾಯವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯದ ಓದಿಗೆ ಸಹಕರಿಸುತ್ತಲೇ, ಆಧುನಿಕ ತಂತ್ರಜ್ಞಾನದ ಜಗತ್ತನ್ನು ಪರಿಚಯಿಸುತ್ತಾ ಜ್ಞಾನದ ಹೊಸ ಲೋಕವನ್ನು ಮಕ್ಕಳ ಎದುರಿಗೆ ತೆರೆದಿಡುತ್ತಿವೆ ‘ಅರಿವು ಕೇಂದ್ರಗಳು’ ಎಂದು ಮಾಹಿತಿ ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ.

ಜಿಲ್ಲೆಯ ಒಟ್ಟು 75 ಗ್ರಂಥಾಲಯಗಳಲ್ಲಿ ಈ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನವಾಗುತ್ತಿದ್ದು, ಈ ಸಾಲಿನಲ್ಲಿ ಇನ್ನು 48 ಗ್ರಾಮ ಪಂಚಾಯ್ತಿಗಳಲ್ಲಿ ವಿಸ್ತರಿಸುವ ಯೋಜನೆಯಿದೆ ಎನ್ನುತ್ತಾರೆ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶಿವುಹನುಮ ಹಾಗೂ ಶ್ರೀಧರ್.

ಗ್ರಾಮದಲ್ಲಿ ರೂರ್‍ಬನ್ ಯೋಜನೆಯಡಿಯಲ್ಲಿ ₹35ಲಕ್ಷ ವೆಚ್ಚದಲ್ಲಿ ನೂತನ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದ್ದು ಕಾಮಗಾರಿ ಆರಂಭಿಸಲಾಗಿದೆ.
ಎನ್.ಮಂಜುನಾಥ, ಪಿಡಿಒ, ಗ್ರಾಮ ಪಂಚಾಯ್ತಿ 114-ಡಣಾಪುರ
ಮರಿಯಮ್ಮನಹಳ್ಳಿ ಸಮೀಪದ 114-ಡಣಾಪುರ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ (ಅರಿವು ಕೇಂದ್ರ) ಟಿ.ವಿ ಕಂಪ್ಯೂಟರ್ ಮುಂದೆ ತಲ್ಲೀನರಾದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.