ADVERTISEMENT

ತೆಕ್ಕಲಕೋಟೆ: ಸಜ್ಜಾದರೂ ಬಳಕೆಗೆ ಸಿಗದ ಶೌಚಾಲಯ

ಪ್ರಜಾವಾಣಿ ವಿಶೇಷ
Published 13 ಸೆಪ್ಟೆಂಬರ್ 2024, 6:19 IST
Last Updated 13 ಸೆಪ್ಟೆಂಬರ್ 2024, 6:19 IST
<div class="paragraphs"><p>ತೆಕ್ಕಲಕೋಟೆ ಸಮೀಪದ ಗೋಸಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಹೊರಗೆ ಬಿಸಿಯೂಟ ತಯಾರಿಸುತ್ತಿರುವುದು</p></div>

ತೆಕ್ಕಲಕೋಟೆ ಸಮೀಪದ ಗೋಸಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಹೊರಗೆ ಬಿಸಿಯೂಟ ತಯಾರಿಸುತ್ತಿರುವುದು

   

ತೆಕ್ಕಲಕೋಟೆ: ಸಮೀಪದ ಗೋಸಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಾಣವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ಸಿಗದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. 

ಶೌಚಾಲಯ ಹಾಗೂ ಅಡುಗೆ ಕೋಣೆಗೆ ಬೀಗ ಹಾಕಲಾಗಿದೆ. ಶಾಲೆಯ ಆವರಣದಲ್ಲಿಯೇ ಬಿಸಿಯೂಟ ತಯಾರಿಸಲಾಗುತ್ತಿದೆ. ವಿದ್ಯಾರ್ಥಿಗಳು ಬಯಲುಶೌಚ ಅವಲಂಬಿಸಿದ್ದಾರೆ. 

ADVERTISEMENT

ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 180 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅಡುಗೆ ಕೋಣೆ ಮತ್ತು ಸುಸಜ್ಜಿತ ಶೌಚಾಲಯ ಒದಗಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ₹7.45 ಲಕ್ಷ ವೆಚ್ಚದಲ್ಲಿ ಅಡುಗೆ ಕೋಣೆ ಮತ್ತು ₹3 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಮುಗಿದು ಮೂರು ತಿಂಗಳು ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಉದ್ಘಾಟನೆಯಾಗಿಲ್ಲ.  

‘ಮಳೆ, ಗಾಳಿ ಹಾಗೂ ದೂಳಿನಿಂದಾಗಿ ಶಾಲೆಯ ಆವರಣದಲ್ಲಿ ಬಿಸಿಯೂಟ ತಯಾರಿಸಲು ತೊಂದರೆಯಾಗುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಅಡುಗೆ ಕೊಣೆಯನ್ನು ನೀಡಿದರೆ ನಮಗೆ ಅನುಕೂಲವಾಗುತ್ತದೆ’ ಎಂದು ಬಿಸಿಯೂಟ ತಯಾರಿಸುವ ಮಹಿಳೆಯರು ಮನವಿ ಮಾಡುತ್ತಾರೆ. 

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸೋಮಲಿಂಗ ಮನವಿ ಮಾಡಿದರು. 

‘ಶಾಲೆಯಲ್ಲಿ ಶೌಚಾಲಯ ಸೌಲಭ್ಯವಿಲ್ಲದೆ ನಾವು ಕೂಡ ಮನೆಗೆ ತೆರಳಿ ಶೌಚಾಕಾರ್ಯ ಮುಗಿಸಿಕೊಂಡು ಬರುತ್ತೇವೆ. ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ’ ಎಂದು ಮುಖ್ಯಶಿಕ್ಷಕ ಪಂಚಣ್ಣ ದೂರುತ್ತಾರೆ.

ಕಾಮಗಾರಿ ಮುಗಿಸಿದ ತಕ್ಷಣ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವಂತೆ ಪಿಡಿಒಗೆ ಸೂಚನೆ ನೀಡಲಾಗಿತ್ತು. ಆದರೆ ಈ ವರೆಗೆ ಹಸ್ತಾಂತರ ಮಾಡದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಪರಿಶೀಲಿಸಲಾಗುವುದು
ಮನೋಹರ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ
ಅಡುಗೆ ಕೋಣೆ, ಶೌಚಾಲಯಕ್ಕೆ ಸಂಬಂಧಿಸಿದಂತೆ ಇನ್ನೂ ಸಣ್ಣ ಪುಟ್ಟ ಕಾಮಗಾರಿ ಬಾಕಿಯಿದೆ. ಶೀಘ್ರದಲ್ಲಿ ಮುಗಿಸಿ, ಅಧಿಕಾರಿಗಳು ಪರಿಶೀಲಿಸಿದ ನಂತರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗುವುದು
ಲೀಲಾವತಿ, ಗ್ರಾ.ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.