ADVERTISEMENT

ಆಕರ್ಷಣೆಯ ಕೇಂದ್ರವಾದ ಹಂಪಿ ಪುಷ್ಕರಣಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 10:45 IST
Last Updated 13 ಜುಲೈ 2018, 10:45 IST
ಹಂಪಿಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಪುಷ್ಕರಣಿಯಿಂದ ಶುಕ್ರವಾರ ಹೂಳು ತೆಗೆದು, ಬೇರೆಡೆ ಸಾಗಿಸಲಾಯಿತು–ಪ್ರಜಾವಾಣಿ ಚಿತ್ರ
ಹಂಪಿಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಪುಷ್ಕರಣಿಯಿಂದ ಶುಕ್ರವಾರ ಹೂಳು ತೆಗೆದು, ಬೇರೆಡೆ ಸಾಗಿಸಲಾಯಿತು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಪುಷ್ಕರಣಿ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ದೇಗುಲಕ್ಕೆ ಭೇಟಿ ಕೊಡುತ್ತಿರುವ ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರು ಅದನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಅದರ ಬಗ್ಗೆ ಸ್ಥಳೀಯರಿಗೆ ಕೇಳಿ ವಿಷಯ ತಿಳಿದುಕೊಳ್ಳುತ್ತಿದ್ದಾರೆ. ಅದರ ಛಾಯಾಚಿತ್ರ, ಅದರ ಮಗ್ಗುಲಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ದೇಗುಲ ಪ್ರವೇಶಿಸುವ ಬಿಷ್ಟಪ್ಪಯ್ಯ ಮುಖ್ಯಗೋಪುರದ ಎಡಬದಿಯಲ್ಲಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ತಿಂಗಳ ಹಿಂದೆ ತೆರವುಗೊಳಿಸಲಾಗಿತ್ತು. ಇದೇ 8ರಂದು ಅಲ್ಲಿದ್ದ ಹಾಸುಗಲ್ಲುಗಳನ್ನು ಸರಿಯಾಗಿ ಜೋಡಿಸಿ ಇಡುವಾಗ ಪುಷ್ಕರಣಿ ಪತ್ತೆಯಾಗಿತ್ತು. ಸುಮಾರು ನಾಲ್ಕು ಅಡಿ ಅಳವಿರುವ ಪುಷ್ಕರಣಿಯ ಗೋಡೆಯ ಮೇಲೆ ಮೀನು, ಏಡಿ ಹಾಗೂ ನೃತ್ಯದ ಭಂಗಿಯ ಆಕರ್ಷಕ ಕೆತ್ತನೆಗಳಿವೆ. ಪುಷ್ಕರಣಿಯ ಒಂದು ಭಾಗದಲ್ಲಿ ಮೆಟ್ಟಿಲುಗಳಿವೆ. ಅದರ ವಿರುದ್ಧ ದಿಕ್ಕಿನಲ್ಲಿ ನಂದಿ ವಿಗ್ರಹವಿದ್ದು, ಅದಕ್ಕೆ ಕೊಳಾಯಿ ಸಂಪರ್ಕ ಕಲ್ಪಿಸಿದ್ದ ಕುರುಹುಗಳಿವೆ. ಆ ಕೊಳಾಯಿ ಮೂಲಕ ಈ ಹಿಂದೆ ಪುಷ್ಕರಣಿಗೆ ನೀರು ಹರಿದು ಬರುತ್ತಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪುಷ್ಕರಣಿ ಪತ್ತೆಯಾಗಿ ಪತ್ರಿಕೆಗಳಲ್ಲಿ ಸುದ್ದಿಯಾದ ಬಳಿಕ ಅನೇಕ ಜನ ಅದನ್ನು ನೋಡಿಕೊಂಡು ಹೋಗಿದ್ದಾರೆ. ನಿತ್ಯ ಅದನ್ನು ನೋಡಲೆಂದೇ ಈಗಲೂ ಹಲವು ಮಂದಿ ಬರುತ್ತಿದ್ದಾರೆ. ಸದ್ಯ ಪುಷ್ಕರಣಿಯಲ್ಲಿ ತುಂಬಿಕೊಂಡಿರುವ ಹೂಳು ತೆರವುಗೊಳಿಸಲಾಗುತ್ತಿದೆ. ಐದಾರೂ ದಿನಗಳಲ್ಲಿ ಮೂರರಿಂದ ನಾಲ್ಕು ಅಡಿಗಳಷ್ಟು ಮಣು ತೆಗೆದು ಬೇರೆಡೆ ಸಾಗಿಸಲಾಗಿದೆ. ಅದನ್ನು ಮೊದಲಿನಂತೆ ಜೀರ್ಣೋದ್ಧಾರಗೊಳಿಸಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.