ಹೊಸಪೇಟೆ (ವಿಜಯನಗರ): ಈ ಹಿಂದೆ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ, ಜಿಂದಾಲ್ ಸ್ಟೀಲ್ ವೆಸ್ಟರ್ನ್‌ಗೆ (ಜೆಎಸ್‌ಡಬ್ಲ್ಯೂ) ಜಮೀನು ಪರಭಾರೆ ಮಾಡಲು ಮುಂದಾದಾಗ ಅದನ್ನು ವಿರೋಧಿಸಿ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗ ಸ್ವತಃ ಅವರೇ ಸಂಪುಟ ದರ್ಜೆ ಮಂತ್ರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅದರ ಬಗ್ಗೆ ಮೌನ ತಾಳಿರುವುದೇಕೇ ಎಂಬ ಚರ್ಚೆ ಜಿಲ್ಲೆಯಾದ್ಯಂತ ನಡೆಯುತ್ತಿದೆ.
2019ರಲ್ಲಿ ಸಮ್ಮಿಶ್ರ ಸರ್ಕಾರ ಜಿಂದಾಲ್‌ಗೆ 3,667.31 ಎಕರೆ ಜಮೀನು ಪರಭಾರೆಗೆ ಮುಂದಾಗಿತ್ತು. ಅದಕ್ಕೆ ಆನಂದ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವರು ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ, ಜನರಲ್ಲಿ ತಿಳಿವಳಿಕೆ ಮೂಡಿಸಿ ಕಾಳಜಿ ತೋರಿಸಿದ್ದರು. ನಂತರ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದರು. ಆದರೆ, ಸ್ವತಃ ಅವರೇ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅದರ ಬಗ್ಗೆ ಚಕಾರ ಎತ್ತದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
‘ಜಿಂದಾಲ್‌ಗೆ ಜಮೀನು ಕೊಡುತ್ತಿರುವುದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವೆ’ ಎಂದು ಆನಂದ್ ಸಿಂಗ್ ಅವರೇ ಹಲವು ಸಲ ಆಗ ಹೇಳಿಕೊಂಡಿದ್ದರು. ಆದರೆ, ದಿನಗಳು ಕಳೆದಂತೆ ಆ ವಿಷಯ ಹಿನ್ನೆಲೆಗೆ ಸರಿಯಿತು. ಬಳಿಕ ‘ವಿಜಯನಗರ ಜಿಲ್ಲೆ ಮಾಡುವುದೇ ನನ್ನ ಏಕೈಕ ಗುರಿ’ ಎಂದು ಹೇಳಿದರು. ಉಪಚುನಾವಣೆಯುದ್ದಕ್ಕೂ ಇದೇ ವಿಷಯ ಮುನ್ನೆಲೆಯಲ್ಲಿ ಇತ್ತು. ಎಲ್ಲೂ ಕೂಡ ಜಿಂದಾಲ್ ವಿಷಯ ಚರ್ಚೆಯಾಗಲಿಲ್ಲ. ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬರೂ ಅದರ ಬಗ್ಗೆ ಚಕಾರ ಎತ್ತಿರಲಿಲ್ಲ.
ಅಸಲಿಯತ್ತೇನು?:
2008, 2013ರಲ್ಲಿ ಸತತ ಎರಡು ಸಲ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಆನಂದ್ ಸಿಂಗ್ ಅವರು, 2018ರಲ್ಲಿ ದಿಢೀರನೆ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಸೇರಿದರು. ಬಳಿಕ ನಡೆದ ಚುನಾವಣೆಯಲ್ಲೂ ಗೆದ್ದರು. ಆದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಇದರಿಂದ ತೀವ್ರ ಗೊಂದಲಕ್ಕೆ ಒಳಗಾದ ಅವರು ಅನೇಕ ತಿಂಗಳು ಜನ ಹಾಗೂ ಕ್ಷೇತ್ರದಿಂದ ದೂರ ಉಳಿದರು. ಸಮ್ಮಿಶ್ರ ಸರ್ಕಾರ, ಜಿಂದಾಲ್‌ಗೆ ಜಮೀನು ಕೊಡುವುದನ್ನು ವಿರೋಧಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ. ಪಾಟೀಲ ಸರ್ಕಾರಕ್ಕೆ ಪತ್ರ ಬರೆದರು. ಅದರ ಬೆನ್ನಲ್ಲೇ ಆನಂದ್ ಸಿಂಗ್ ಸಕ್ರಿಯರಾಗಿ, ಈ ವಿಷಯ ಕೈಗೆತ್ತಿಕೊಂಡರು.
ಪುನಃ ಬಿಜೆಪಿಗೆ ಮರಳಬೇಕೆಂದು ಮೊದಲೇ ಮನಸ್ಸು ಮಾಡಿಕೊಂಡಿದ್ದ ಆನಂದ್ ಸಿಂಗ್ ಅವರು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಅದು ಜಿಂದಾಲ್ ಮೂಲಕ ಈಡೇರಿತು. ಅವರು ಅಂದುಕೊಂಡಂತೆ ಬಿಜೆಪಿಯಿಂದ ಪುನಃ ಶಾಸಕರಾಗಿ ಆಯ್ಕೆಯಾದರು. ‘ವಿಜಯನಗರ ಜಿಲ್ಲೆ ಮಾಡುವುದು ನನ್ನ ಮುಖ್ಯ ಉದ್ದೇಶ. ನನಗೆ ಮಂತ್ರಿ ಸ್ಥಾನ ಬೇಕಿಲ್ಲ’ ಎಂದು ಹೋದಲೆಲ್ಲ ಹೇಳಿದರು. ಆದರೆ, ವಿಜಯನಗರ ಜಿಲ್ಲೆ ಘೋಷಣೆಯಾಗುವುದಕ್ಕೂ ಮುನ್ನವೇ ಸಚಿವರಾದರು. ಅದಾದ ಒಂದು ವರ್ಷದ ಬಳಿಕ ಜಿಲ್ಲೆಯೂ ಘೋಷಣೆಯಾಯಿತು. ಈ ಅವಧಿಯಲ್ಲಿ ಒಂದೇ ಒಂದು ಸಲ ಜಿಂದಾಲ್ ಕುರಿತು ಮಾತಾಡಲಿಲ್ಲ. ಈ ವಿಷಯ ಸಂಪೂರ್ಣವಾಗಿ ಮರೆತೇ ಹೋದರು. ರಾಜಕೀಯಕ್ಕಷ್ಟೇ ಜಿಂದಾಲ್ ವಿಷಯ ಬಳಸಿಕೊಂಡರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎನ್ನುವುದು ಅವರ ವಿರುದ್ಧದ ಆರೋಪ.
‘ಸಂಪುಟ ಸಭೆಗೂ ಮುನ್ನ ಸಚಿವರಿಗೆ ಅಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಕಿರು ಟಿಪ್ಪಣಿ ನೀಡಲಾಗುತ್ತದೆ. ಜಿಂದಾಲ್‌ಗೆ ಜಮೀನು ಮಾರಾಟ ಮಾಡುವ ವಿಷಯವೂ ಅಲ್ಲಿ ತೀರ್ಮಾನವಾಗಲಿದೆ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿಯೇ ಸಭೆಯಿಂದ ಅವರು ದೂರ ಉಳಿದರು. ಸರ್ಕಾರ ನಿರ್ಧಾರ ಪ್ರಕಟಿಸಿದ ನಂತರವಾದರೂ ಅವರು ಮಾತಾಡಬಹುದಿತ್ತು. ಆದರೆ, ಅದನ್ನು ಮಾಡಿಲ್ಲ. ಅವರ ಮೌನವೇ ಎಲ್ಲ ಹೇಳುತ್ತದೆ’ ಎಂದು ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ, ಜೆಡಿಎಸ್ ಮುಖಂಡ ಪಿ. ಶಬ್ಬೀರ್ ಆರೋಪಿಸಿದರು.
ಈ ಕುರಿತು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ‘ಜಿಂದಾಲ್‌ಗೆ ಜಮೀನು ಮಾರಾಟ ಮಾಡುವುದರ ವಿಷಯ ಸಂಪುಟದಲ್ಲಿ ಚರ್ಚೆಗೆ ಬಂದಾಗ ನೋಡೋಣ ಎಂದು ಸುಮ್ಮನಿದ್ದೆ. ಸೋಮವಾರ ನಡೆದ ಸಂಪುಟ ಸಭೆಗೂ ನಾನು ಹೋಗಲು ಆಗಲಿಲ್ಲ. ಸಭೆಯ ಅಜೆಂಡಾ ಕೂಡ ಗಮನಿಸಿರಲಿಲ್ಲ. ಜಮೀನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಏನಾದರೂ ತಿದ್ದುಪಡಿ ಮಾಡಿ, ಜಮೀನು ಕೊಡಲು ಸಾಧ್ಯವೇ ಎನ್ನುವುದರ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಕಿಕ್‌ಬ್ಯಾಕ್ ಪಡೆದಿರುವ ಅನುಮಾನ’
‘ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವುದನ್ನು ಈ ಹಿಂದೆ ಬಲವಾಗಿ ವಿರೋಧಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಆನಂದ್ ಸಿಂಗ್ ಹಾಗೂ ಬಿಜೆಪಿಯವರು ಈಗ ಅದನ್ನು ಮಾರಾಟ ಮಾಡಿರುವುದು ನೋಡಿದರೆ ಕಿಕ್‌ಬ್ಯಾಕ್ ಪಡೆದಿರುವ ಅನುಮಾನ ಬರುತ್ತಿದೆ. ಜನರು ಕೂಡ ಇದೇ ರೀತಿಯಾಗಿ ಮಾತಾಡುತ್ತಿದ್ದಾರೆ’ ಎಂದು ಬಳ್ಳಾರಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
‘ಇದೇ ಜಿಂದಾಲ್‌ನಿಂದ ಈ ಹಿಂದೆ ಯಡಿಯೂರಪ್ಪನವರು ಚೆಕ್ ರೂಪದಲ್ಲಿ ಕಿಕ್‌ಬ್ಯಾಕ್ ಪಡೆದುಕೊಂಡಿದ್ದರು. ಈಗ ಇದು ಅದರ ಮುಂದುವರಿದ ಭಾಗ. ಇಲ್ಲಿ ಪರಸ್ಪರ ಏನೋ ಋಣ ಸಂದಾಯವಾಗಿರುವಂತೆ ಕಾಣಿಸುತ್ತಿದೆ. ಜಿಂದಾಲ್‌ಗೆ ಇದುವರೆಗೆ ಎಷ್ಟು ಜಮೀನು ನೀಡಲಾಗಿದೆ. ಅದರಲ್ಲಿ ಎಷ್ಟು ಜಮೀನು ಬಳಕೆಯಾಗುತ್ತಿದೆ ಎನ್ನುವುದನ್ನು ಸರ್ಕಾರ ಹಾಗೂ ಕಂಪನಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.