ADVERTISEMENT

PV Web Exclusive: ವಿಜಯನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪಟ್ಟ ಯಾರಿಗೆ?

ಸಿರಾಜ್‌ ಶೇಖ್‌, ವೀಣಾ ಮಹಾಂತೇಶ, ಗುಜ್ಜಲ್‌ ನಾಗರಾಜ್‌, ಕುರಿ ಶಿವಮೂರ್ತಿ ಆಕಾಂಕ್ಷಿಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ನವೆಂಬರ್ 2021, 12:31 IST
Last Updated 29 ನವೆಂಬರ್ 2021, 12:31 IST
ವೀಣಾ, ಸಿರಾಜ್‌ ಶೇಖ್‌, ಗುಜ್ಜಲ್‌, ಕುರಿ ಶಿವಮೂರ್ತಿ
ವೀಣಾ, ಸಿರಾಜ್‌ ಶೇಖ್‌, ಗುಜ್ಜಲ್‌, ಕುರಿ ಶಿವಮೂರ್ತಿ   

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿದು ಬರಲಿದೆ ಎಂಬ ಚರ್ಚೆಗಳು ಜಿಲ್ಲೆಯಾದ್ಯಂತ ಬಿರುಸುಗೊಂಡಿದೆ.

ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರ ಅವಧಿ ಕಳೆದ ವರ್ಷವೇ ಮುಗಿದಿದೆ. ಬಳ್ಳಾರಿಯಿಂದ ವಿಜಯನಗರ ಜಿಲ್ಲೆ ವಿಭಜನೆಗೊಂಡಿರುವುದರಿಂದ ಈ ಸಲ ಜಿಲ್ಲೆಗೆ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ. ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸ್ಥಾನ ಇರುವುದಿಲ್ಲ. ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಶಿವಯೋಗಿ ಅವರೇ ತಾತ್ಕಾಲಿಕವಾಗಿ ಆ ಹುದ್ದೆಯಲ್ಲಿ ಮುಂದುವರೆದಿದ್ದಾರೆ.

ಹೊಸ ಜಿಲ್ಲೆಗೆ ಮೊದಲ ಅಧ್ಯಕ್ಷರಾಗಲು ಹಲವರು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಮಾಜಿಶಾಸಕ, ಕಾಂಗ್ರೆಸ್‌ ಪಕ್ಷದ ವಕ್ತಾರ ಸಿರಾಜ್‌ ಶೇಖ್‌, ವೀರಶೈವ–ಲಿಂಗಾಯತ ಸಮಾಜದಿಂದ ಕಾಂಗ್ರೆಸ್‌ ವಕ್ತಾರೆ ವೀಣಾ ಮಹಾಂತೇಶ್‌, ವಾಲ್ಮೀಕಿ ನಾಯಕ ಸಮಾಜದಿಂದ ಗುಜ್ಜಲ್‌ ನಾಗರಾಜ್‌, ಕುರುಬ ಸಮಾಜದಿಂದ ಕುರಿ ಶಿವಮೂರ್ತಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ADVERTISEMENT

ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಆಂತರಿಕ ನಿಯಮ ಜಾರಿಗೆ ಬಂದಿರುವುದರಿಂದ ಹಾಲಿ ಶಾಸಕರಿಗೆ ಅಧ್ಯಕ್ಷ ಸ್ಥಾನ ಸಿಗುವುದಿಲ್ಲ. ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಆರು ತಾಲ್ಲೂಕು, ಐದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇಲ್ಲಿ ಮುಸ್ಲಿಂ, ವೀರಶೈವ ಲಿಂಗಾಯತರು, ಕುರುಬ ಸಮಾಜದ ಶಾಸಕರಿಲ್ಲ. ಹೀಗಾಗಿ ಈ ಸಮುದಾಯದ ಒಬ್ಬರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ.

ಸಿರಾಜ್‌ ಶೇಖ್‌ ಅವರು ಪಕ್ಷದ ಹಲವು ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪಕ್ಷ ನಿಷ್ಠೆ ಹೊಂದಿದ್ದಾರೆ. ಹೀಗಾಗಿ ಅವರ ಬಗ್ಗೆ ಹೆಚ್ಚಿನವರು ಒಲವು ಹೊಂದಿದ್ದಾರೆ. ಆದರೆ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಅವರು ಅವರ ನೇಮಕಕ್ಕೆ ವಿರೋಧಿಸುತ್ತಿದ್ದಾರೆ. ಹೋದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿರಾಜ್‌ ಶೇಖ್‌ ಅವರು, ‘ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಈ ಪೈಕಿ ಹಗರಿಬೊಮ್ಮನಹಳ್ಳಿಯಲ್ಲಿ ಲಂಬಾಣಿ ಸಮುದಾಯದ ಬದಲು ಮಾದಿಗ ಸಮಾಜಕ್ಕೆ ಸೇರಿದ ವ್ಯಕ್ತಿಗೆ ಟಿಕೆಟ್‌ ನೀಡಬೇಕು’ ಎಂದು ಹೇಳಿದ್ದರು. ಈ ವಿಷಯವೇ ಭೀಮಾ ನಾಯ್ಕ ಅವರ ವಿರೋಧಕ್ಕೆ ಮುಖ್ಯ ಕಾರಣ.

ದಿವಂಗತ ಎಂ.ಪಿ. ಪ್ರಕಾಶ್‌ ಅವರ ಮಗಳಾದ ವೀಣಾ ಮಹಾಂತೇಶ್‌ ಅವರಿಗೆ ಈ ಸ್ಥಾನ ಒಲಿದರೂ ಅಚ್ಚರಿ ಪಡಬೇಕಿಲ್ಲ. ಸದ್ಯ ಪಕ್ಷದ ವಕ್ತಾರರಾಗಿರುವ ಅವರು ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌, ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷೆ ಆಗಿ ಕೆಲಸ ಮಾಡುತ್ತಿದ್ದಾರೆ. ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವೀರಶೈವ–ಲಿಂಗಾಯತ ಸಮಾಜದ ಯಾವುದೇ ಶಾಸಕರು ಇರದ ಕಾರಣ ಈ ಸಮಾಜಕ್ಕೆ ಪ್ರಾತಿನಿಧ್ಯ ಕೊಡಬೇಕೆಂಬ ಬೇಡಿಕೆಯೂ ಇದೆ.

ಆದರೆ, ವೀಣಾ ಅವರ ಸಹೋದರ ದಿವಂಗತ ಎಂ.ಪಿ. ರವೀಂದ್ರ ಅವರು ಎರಡು ಸಲ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಬಿ.ವಿ. ಶಿವಯೋಗಿ ಕೂಡ ಅದೇ ಸಮಾಜಕ್ಕೆ ಸೇರಿದವರು. ಈಗಾಗಲೇ ಅವರು ಏಳು ವರ್ಷಗಳಿಂದ ಆ ಹುದ್ದೆಯಲ್ಲಿದ್ದಾರೆ. ಹೀಗಾಗಿ ಅನ್ಯ ಸಮಾಜಕ್ಕೆ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬಲವಾದ ಕೂಗು ಇದೆ. ಈ ವಿಚಾರ ಮುನ್ನೆಲೆಗೆ ಬಂದರೆ ವೀಣಾ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಬಹುದು.

ಇನ್ನು, ಕುರುಬ ಸಮುದಾಯದಿಂದ ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ ಅವರ ಹೆಸರು ಕೇಳಿ ಬರುತ್ತಿದೆ. ಈ ಸಮಾಜದಿಂದ ಕೂಡ ಯಾರೂ ಶಾಸಕರಿಲ್ಲ. ಅನೇಕ ವರ್ಷಗಳಿಂದ ಈ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಈ ಸಲವಾದರೂ ಕೊಡಬೇಕು. ಅದರಲ್ಲೂ ಕುರಿ ಶಿವಮೂರ್ತಿ ಯುವಕರಾಗಿದ್ದು, ಅವರಿಗೆ ಕೊಟ್ಟರೆ ಚುರುಕಿನಿಂದ ಓಡಾಡಿ ಪಕ್ಷ ಸಂಘಟನೆ ಮಾಡುತ್ತಾರೆ ಎಂಬ ಅಭಿಪ್ರಾಯ ಇದೆ.

ವಾಲ್ಮೀಕಿ ನಾಯಕ ಸಮಾಜದಿಂದ ಕೆಪಿಸಿಸಿ ಮಾನವ ಹಕ್ಕುಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜಲ್‌ ನಾಗರಾಜ್‌ ಅವರ ಹೆಸರು ಕೇಳಿ ಬರುತ್ತಿದೆ. ಅನೇಕ ವರ್ಷಗಳಿಂದ ಪಕ್ಷದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತ ಬಂದಿರುವ ಗುಜ್ಜಲ್‌ ನಾಗರಾಜ್‌ ಕೂಡ ಯುವಕರಾಗಿದ್ದು, ಅವರನ್ನು ಅಧ್ಯಕ್ಷರಾಗಿ ಮಾಡಿದರೆ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮಾಜಕ್ಕೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ ಎನ್ನುವುದು ಆ ಸಮಾಜದ ಕೆಲವು ಮುಖಂಡರ ವಾದ.

ಪರಿಶಿಷ್ಟ ಜಾತಿಗೆ (ಎಡಗೈ) ಸೇರಿದ ಹೆಗ್ಡಾಳ್‌ ರಾಮಣ್ಣ ಅವರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು. ಏಕೆಂದರೆ ಆ ಸಮಾಜಕ್ಕೆ ಯಾವುದೇ ಪ್ರಾತಿನಿಧ್ಯ ಇಲ್ಲ ಎನ್ನುವುದು ಆ ಸಮಾಜದವರ ವಾದ. ಆದರೆ, ಪಕ್ಷದ ವೇದಿಕೆಯಲ್ಲಿ ಇವರ ಹೆಸರು ಚರ್ಚೆಗೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.