ADVERTISEMENT

ಏಕೀಕರಣ ಹೋರಾಟ ಕನ್ನಡಿಗರ ಅಸ್ಮಿತೆ: ವಿದ್ವಾಂಸ ಕೆ.ರವೀಂದ್ರನಾಥ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:21 IST
Last Updated 24 ನವೆಂಬರ್ 2024, 16:21 IST
ಕೊಟ್ಟೂರಿನ ಡಾ.ಎಚ್.ಜಿ.ರಾಜ್ ಸಭಾಭವನದಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕೊಟ್ಟೂರಿನ ಡಾ.ಎಚ್.ಜಿ.ರಾಜ್ ಸಭಾಭವನದಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಕೊಟ್ಟೂರು: ‘ಹರಿದು ಹಂಚಿಹೋಗಿದ್ದ ಕನ್ನಡ ನೆಲಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರ ಅಸ್ಮಿತೆಯಾಗಿದೆ’ ಎಂದು ವಿದ್ವಾಂಸ ಕೆ.ರವೀಂದ್ರನಾಥ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಎಚ್.ಜಿ.ರಾಜ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಬ್ರಿಟಿಷ್ ಆಡಳಿತದಲ್ಲಿ 20ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಕನ್ನಡ ನಾಡು ಹರಿದು ಹಂಚಿಹೋಗಿತ್ತು. ನಮ್ಮ ಭಾಷಿಕರೇ ಅಧಿಕವಾಗಿದ್ದ ಪ್ರದೇಶಗಳಲ್ಲಿದ್ದ ಕನ್ನಡಿಗರಿಗೆ ಭಾಷಿಕವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಇಂತಹ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಉದ್ದೇಶಕ್ಕಾಗಿ ನಾಡಿನ ಸಾಹಿತಿಗಳು, ಕಲಾವಿದರು, ಪತ್ರಿಕೆಗಳು, ಸಂಘ ಸಂಸ್ಥೆಗಳು ನಡೆಸಿದ ಏಕೀಕರಣ ಹೋರಾಟವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ADVERTISEMENT

ಕರ್ನಾಟಕ ಸಂಸ್ಕೃತಿಗೆ ನಾಡಿನ ಅರಸರು ಬಹು ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಏಕೀಕರಣದ ನಂತರ ಭಾಷಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕನ್ನಡದ ಪ್ರಾತಿನಿಧಿಕತೆಯನ್ನು ಪುನರಾವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ. ರಾಜ್ಯದಲ್ಲಿ ನಡೆದಿದ್ದ ಏಕೀಕರಣ ಹೋರಾಟಕ್ಕೆ ಬೆಂಬಲವಾಗಿ ಕೊಟ್ಟೂರಿನಲ್ಲಿ ಮಾಜಿ ಸಚಿವ ದಿ.ಎಂ.ಎಂ.ಜೆ ಸದ್ಯೋಜಾತ, ಅ.ನಂಜಪ್ಪ ಮುಂತಾದವರು ಹೋರಾಟ ನಡಿಸಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವರ್ತಕ ಪಿ.ಶ್ರೀಧರ ಶೆಟ್ಟಿ ಮಾತನಾಡಿ, ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಮ್ಮೆಲ್ಲರ ಹೃದಯ ಭಾಷೆಯಾಗಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಉನ್ನತೀಕರಣಗೊಳ್ಳಬೇಕು ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿದರು.

ದತ್ತಿ ದಾನಿಗಳಾದ ಬಿಎಸ್ ಕೊಟ್ರೇಶ್, ಜೆ.ಎಂ. ಧನಂಜಯ, ಪಿ.ಶ್ರೀಧರಶೆಟ್ಟಿ, ಕೆ.ಎಸ್.ಈಶ್ವರಗೌಡ ಇವರನ್ನು ಗೌರವಿಸಲಾಯಿತು. ಚಿತ್ರ ನಟ ಬಿ.ಎಚ್.ಸುದರ್ಶನ, ಖೋಖೋ ಆಟಗಾರ್ತಿ ಜಿ.ಪ್ರತಿಕ್ಷಾ, ಎಂ.ಎಂ. ನಟರಾಜ ಅವರನ್ನು ಸನ್ಮಾನಿಸಲಾಯಿತು. ಪ.ಪಂ.ಉಪಾಧ್ಯಕ್ಷ ಜಿ.ಸಿದ್ದಯ್ಯ, ಡಿಎಸ್‌ಎಸ್ ಮುಖಂಡ ಬದ್ದಿ ಮರಿಸ್ವಾಮಿ, ಪ್ರಾಚಾರ್ಯ ಎಂ.ಎಚ್.ಪ್ರಶಾಂತಕುಮಾರ್, ಅರವಿಂದ ಬಸಾಪುರ, ಈಶ್ವರಪ್ಪ ತುರಕಾಣಿ, ಅಜ್ಜಣ್ಣ, ಬಿ.ಎಂ.ಗಿರೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.