ADVERTISEMENT

ಬಳ್ಳಾರಿಯಲ್ಲಿ ರಂಜಾನ್‌ ರಂಗು...

ವಿದ್ಯುತ್​ ದೀಪಗಳಿಂದ ಝಗಮಗಿಸುತ್ತಿವೆ ಮಾರುಕಟ್ಟೆಗಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 6:12 IST
Last Updated 7 ಏಪ್ರಿಲ್ 2024, 6:12 IST
ಬಳ್ಳಾರಿಯ ರಾಯಲ್‌ ಸರ್ಕಲ್‌ ಬಳಿಯ ಹೈದರಾಬಾದಿ ಬಿರಿಯಾನಿ ಹೊಟೇಲ್‌ನಲ್ಲಿ ತಯಾರಿಸಿಟ್ಟಿರುವ ಖಾದ್ಯ  ಚಿತ್ರಗಳು– ಮುರುಳಿಕಾಂತರಾವ್‌ 
ಬಳ್ಳಾರಿಯ ರಾಯಲ್‌ ಸರ್ಕಲ್‌ ಬಳಿಯ ಹೈದರಾಬಾದಿ ಬಿರಿಯಾನಿ ಹೊಟೇಲ್‌ನಲ್ಲಿ ತಯಾರಿಸಿಟ್ಟಿರುವ ಖಾದ್ಯ  ಚಿತ್ರಗಳು– ಮುರುಳಿಕಾಂತರಾವ್‌    

ಬಳ್ಳಾರಿ: ಪವಿತ್ರ ರಂಜಾನ್ ಸಮೀಪಿಸುತ್ತಿದೆ. ಬಳ್ಳಾರಿ ನಗರ ಹಬ್ಬದ ಆಚರಣೆಗೆ ಸಜ್ಜಾಗುತ್ತಿದೆ. ರಂಜಾನ್​ ಮಾಸದ ಪ್ರಯುಕ್ತ ಮಾರುಕಟ್ಟೆಗಳು ವಿದ್ಯುತ್​ ದೀಪಗಳಿಂದ ಝಗಮಗಿಸುತ್ತಿವೆ.

ಕಣ್ಣು ಹಾಯಿಸಿದಲ್ಲೆಲ್ಲಾ ಖರೀದಿಗೆ ಬಂದ ಜನ, ವಿವಿಧ ಹೊಟೇಲ್‌ಗಳಲ್ಲಿ ಬಗೆಬಗೆಯ ಖಾದ್ಯ. ಹಣ್ಣು, ಖರ್ಜೂರ, ಸಮೋಸ ಅಂಗಡಿಗಳ ಸಾಲು.  ಮತ್ತೊಂದೆಡೆ, ಹೊಸ ಬಟ್ಟೆ, ಆಲಂಕಾರಿಕ ವಸ್ತು ಖರೀದಿಗೆ ತಂಡೋಪತಂಡವಾಗಿ ಜನ ಬರುತ್ತಿರುವ ದೃಶ್ಯಗಳು ಸಾಮಾನ್ಯವೆಂಬಂತೆ ಕಂಡು ಬರುತ್ತಿದೆ. ‌

ಕಳೆದ 25 ದಿನಗಳಿಂದ ಕೌಲ್‌ ಬಜಾರ್‌, ಮಿಲ್ಲರ್‌ ಪೇಟೆ, ಬೆಂಗಳೂರು ರಸ್ತೆ, ರಾಯಲ್‌ ಸರ್ಕಲ್‌ಗಳಲ್ಲಿ ಹೊಟೇಲ್‌, ಮಳಿಗೆಗಳು ಜಗಮಗಿಸುತ್ತಿವೆ.  ಹೊಟೇಲ್‌ಗಳು, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ಹಬ್ಬಕ್ಕೆ ಇನ್ನು ಐದು ದಿನವಿದ್ದು, ವ್ಯಾಪಾರ ಮತ್ತಷ್ಟು ಬಿರುಸಾಗಿದೆ. 

ADVERTISEMENT

ರಂಜಾನ್ ಮಾಸವನ್ನು ಮುಸ್ಲಿಮರು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೆ. ದಿನವಿಡೀ ಉಪವಾಸವಿರುವ ಜನ, ಸಂಜೆ ಹೊತ್ತಿಗೆ ರೋಜಾ ಅಂತ್ಯಗೊಳಿಸಿ ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಇಲ್ಲಿ ತಮ್ಮಿಷ್ಟದ ತತಿನಿಸು, ಖರ್ಜೂರ, ಹಣ್ಣು, ಸಿಹಿ ಪದಾರ್ಥ, ಜ್ಯೂಸ್, ಡ್ರೈ ಫ್ರ್ಯೂಟ್ಸ್, ಚಿಕನ್-ಮಟನ್ ಖಾದ್ಯಗಳನ್ನು ಸವಿಯುತ್ತಿದ್ದಾರೆ.

ಹೊಸ ಬಟ್ಟೆ, ಟೋಪಿ, ಬುರ್ಖಾ, ಸೀರೆ, ಬಳೆ, ಆಲಂಕಾರಿಕ ವಸ್ತುಗಳು, ಸುಗಂಧ ದ್ರವ್ಯಗಳು, ಮೆಹೆಂದಿ ಖರೀದಿ ಕೂಡ ಜೋರಾಗಿದೆ. ಮಾರುಕಟ್ಟೆಯಲ್ಲಿ ಕಾಲಿಡಲು ಕೂಡ ಆಗದಷ್ಟು ಜನದಟ್ಟಣೆ ಕಂಡು ಬರುತ್ತದೆ.

ಹೊಟೇಲ್‌ಗಳಲ್ಲಿ ವೈವಿಧ್ಯಮ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಾಸ್ಮೀರಿ ಮೀಠ, ಕ್ಯಾರಟ್ ಹಲ್ವ, ಹೈದರಾಬಾದ್ ಖದ್ದೂಕಿ ಕೀರ್, ಹೈದರಾಬಾದಿ ಶಾಹಿ ತುಕಡಾ, ಕರ್ಜೂರ್ ಹಲ್ವ, ಪೈನಾಪಲ್ ಹಲ್ವ, ಖುರ್ಬಾನಿಗಳು ಜನರನ್ನು ಆಕರ್ಷಿಸುತ್ತಿವೆ. ಇನ್ನೊಂದೆಡೆ, ಸ್ವಾದಿಷ್ಟ ಮಾಂಸಾಹಾರ ಪದಾರ್ಥಗಳಾದ ಹರಾ ಮಸಾಲ ಚಿಕನ್‌, ಬೇಜಾ ಮಸಾಲ, ತವಾ ಮಟನ್, ಬಟರ್ ಚಿಕನ್, ಮಟನ್ 65, ಕೈಮಾ, ಬೋನ್ ಲೆಸ್ ಪೀಸ್‌, ಚೀಕನ್ ಸ್ಟೀಕ್‌, ಹಲೀಮ್, ಮಟನ್ ಬಿರಿಯಾನಿ, ಪರೋಠ, ಎಗ್ ಮಸಾಲಾ, ಕಬಾಬ್‌ಗಳು ಜನರ ಬಾಯಲ್ಲಿ ನೀರೂರುವಂತೆ ಮಾಡುತ್ತಿವೆ. ಈ ಭೋಜನ ಸವಿಯಲು ಬರಿ ಮುಸ್ಲಿಮರು ಮಾತ್ರವಲ್ಲದೆ, ಎಲ್ಲ ಸಮುದಾಯದ ಜನರೂ ಆಗಮಿಸುತ್ತಿದ್ದಾರೆ.  

ಹೈದರಾಬಾದ್‌ ಖಾದ್ಯವೆಂದೇ ಪರಿಚಿತವಾದ ಮಟನ್‌ ಹಲೀಮ್‌ ಈ ಬಾರಿ ಬಳ್ಳಾರಿಯ ಎಲ್ಲ ಹೊಟೇಲ್‌ಗಳಲ್ಲೂ ಲಭ್ಯವಿದ್ದು, ಜನ ಹುಡುಕಿಕೊಂಡು ಬಂದು ಅದರ ರುಚಿ ನೋಡುತ್ತಿದ್ದಾರೆ. ಯಾವ ಅಂಗಡಿಗಳಲ್ಲಿ ನೋಡಿದರೂ, ಹೆಣ್ಣುಮಕ್ಕಳ ದಂಡು. ಅಂಗಡಿಗಳ ಮಾಲೀಕರು ಸಹ ಹೊಸ ಟ್ರೆಂಡ್‌ನ ಬಟ್ಟೆ, ಚಪ್ಪಲಿಗಳನ್ನು ಅಂಗಡಿಗೆ ತರಿಸಿ ಮಾರಾಟ ಮಾಡುತ್ತಿದ್ದಾರೆ. 

ರೋಜಾ ಅಂತ್ಯಗೊಳಿಸುವ ಸಂದರ್ಭದಲ್ಲಿ ದೇಶದಲ್ಲಿ ನೆಮ್ಮದಿ, ಸುಖ, ಶಾಂತಿ, ಒಳ್ಳೆಯ ಮಳೆ-ಬೆಳೆ ಬರಲಿ, ಎಲ್ಲ ಜನರೂ ಸಮೃದ್ಧಿ ಹೊಂದಲಿ ಎಂದು ಪ್ರಾರ್ಥಿಸಲಾಗುತ್ತದೆ. ರಂಜಾನ್ ಮತ್ತೊಂದು ವಿಶೇಷತೆ ಎಂದರೆ ತಾವು ಗಳಿಕೆ ಮಾಡಿದ ಹಣ, ಬಂಗಾರ, ಬೆಳ್ಳಿ, ಆಸ್ತಿಯಲ್ಲಿ ಶೇ‌ 2ರಷ್ಟು ದಾನ ಮಾಡುವುದು. ಅಂದರೆ ಜಕಾತ್ ಮಾಡಬೇಕು‌.ಪ್ರತಿಯೊಬ್ಬ ಬಡವ ಕೂಡ ಈ ಹಬ್ಬ ಆಚರಿಸಬೇಕೆಂದು ಉಳ್ಳವರು ನೆರವಿನ ಹಸ್ತ ಚಾಚುತ್ತಾರೆ. ಹೀಗಾಗಿ ರಂಜಾನ್‌ ಒಂದು ಸೌಹಾರ್ದತೆಯ ಹಬ್ಬವೂ ಹೌದು. 

ನಗರದ ಹಲವು ಕಡೆಗಳಲ್ಲಿ ಈಗಾಗಲೇ ಇಫ್ತಾರ್‌ ಕೂಟಗಳು ನಡೆದಿವೆ. ಇದಕ್ಕೆ ಎಲ್ಲ ಸಮುದಾಯದವರನ್ನು ಆಹ್ವಾನಿಸಿ ಭಾವೈಕ್ಯತೆದ ಸಂದೇಶ ಸಾರಲಾಗಿದೆ. 

ನಗರದ ಹೊಟೇಲ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿರುವುದು  – ಚಿತ್ರ: ಮುರುಳಿಕಾಂತರಾವ್‌ 
ಮಿಲ್ಲರ್‌ ಪೇಟೆಯ ಮಸೀದಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ – ಚಿತ್ರ: ಮುರುಳಿಕಾಂತರಾವ್‌ 
ಬಳ್ಳಾರಿಯ ಹಳೇ ಬೆಂಗಳೂರು ರಸ್ತೆಯ ಬಟ್ಟೆ ಅಂಗಡಿಯೊಂದರಲ್ಲಿ ಖರೀದಿ ಭರಾಟೆ  – ಚಿತ್ರ: ಮುರುಳಿಕಾಂತರಾವ್‌ 
ರೋಜಾ ಅಂತ್ಯಗೊಳಿಸಿ ಹೊಟೇಲ್‌ಗಳಿಗೆ ಆಗಮಿಸುವವರಿಗೆ ರುಚಿಯಾದ ಗುಣಮಟ್ಟದ ಆಹಾರವನ್ನು ಸಿದ್ಧಪಡಿಸುತ್ತೇವೆ. ಹಲೀಮ್‌ ಧಮ್‌ ಬಿರಿಯಾನಿಗೆ ಹೆಚ್ಚಿನ ಬೇಡಿಕೆ ಇದೆ.
ಮೊಹಮದ್‌ ಮುನಾವರ್‌ ಷರೀಫ್‌, ಹೈದರಾಬಾದ್‌ ಬಿರಿಯಾನಿ ಹೊಟೇಲ್‌ ಮಾಲೀಕ

ಜುಮಾ ಅಲ್ವಿದಾ ರಂಜಾನ್‌ ಮಾಸದ ಕೊನೆಯ ಶುಕ್ರವಾರವಾದ ಏ.5ರಂದು ಜುಮಾ ಅಲ್ವಿದಾ ಆಚರಿಸಲಾಯಿತು. ಒಂದು ತಿಂಗಳು ಮಾಡಿರುವ ಉಪವಾಸ ಪ್ರಾರ್ಥನೆಗಿಂತಲೂ ಈ ಶುಭ ಶುಕ್ರವಾರ ಮಾಡುವ ಪ್ರಾರ್ಥನೆ ಶ್ರೇಷ್ಠ ಎಂಬ ನಂಬಿಕೆ ಮುಸ್ಲಿಂ ಸಮುದಾಯದಲ್ಲಿದೆ. ‘ಶಾಬ್ ಖದರ್’ ರಂಜಾನ್‌ ಮಾಸದ 26ನೇ ದಿನ ಈ ವಿಶೇಷ ಜರುಗಿತು. ರಾತ್ರಿ ವೇಳೆ ಸಾಮೂಹಿಕ ಪ್ರಾರ್ಥನೆ ನಡೆದವು. 

ಖರ್ಜೂರದ ಮಹತ್ವ  ರಂಜಾನ್‌ ಮಾಸದಲ್ಲಿ ಖರ್ಜೂರಕ್ಕೆ ವಿಶೇಷ ಮಹತ್ವ ಇದೆ.  ಉಪವಾಸ ಮಾಡಿದವರು ಖರ್ಜೂರ ತಿಂದು ಉಪವಾಸ ಅಂತ್ಯಗೊಳಿಸುತ್ತಾರೆ. ನಂತರ ಆಹಾರ ಸ್ವೀಕರಿಸುತ್ತಾರೆ. ಖರ್ಜೂರ ಅತ್ಯಂತ ಪೌಷ್ಟಿಕವೂ ಹೌದು. ಪ್ರತಿ ಮುಸ್ಲಿಮರೂ ಖರ್ಜೂರ ಸೇವಿಸಲೇ ಬೇಕಾಗಿರುವುದರಿಂದ ಅದಕ್ಕೆ ಮಾರುಕಟ್ಟೆಯಲ್ಲಿ ಬೆಲೆಯೂ ಜೋರಿದೆ. ಗುಣಮಟಕ್ಕೆ ಅನುಗುಣವಾಗಿ ಬೆಲೆಯನ್ನೂ ನಿಗದಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.