‘ಜನರಿಗಿಲ್ಲ ಪ್ರಯೋಜನ’ ಸರಕು ಸಾಗಣೆ ವಾಹನಗಳ ಮೇಲಿನ ತೆರಿಗೆ ಹೆಚ್ಚಳ, ವಿದ್ಯುತ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ದರ ಹೆಚ್ಚಿಸಿರುವುದರಿಂದ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಅಸಂಘಟಿತ ಕಾರ್ಮಿಕರ ಬಗ್ಗೆ ಬಜೆಟ್‌ನಲ್ಲಿ ಏನೂ ಇಲ್ಲ. ಇದೊಂದು ನಿರಾಶಾದಾಯ, ಜನರಿಗೆ ಪ್ರಯೋಜನವಿಲ್ಲದ ಬಜೆಟ್ ಎಂಬುದು ಜನರಪ್ರತಿಕ್ರಿಯೆಗಳಾಗಿವೆ.
ಗಣಿ ಸಂತ್ರಸ್ತರ ಅಭಿವೃದ್ಧಿ ಎಲ್ಲಿ?
ಜಿಲ್ಲೆಯಲ್ಲಿ ನಡೆಯುವ ಅದಿರು ಗಣಿಗಾರಿಕೆಯು ಸರ್ಕಾರಕ್ಕೆ ವಾರ್ಷಿಕ ಸಾವಿರಾರು ಕೋಟಿ ಆದಾಯ ನೀಡುತ್ತಿದ್ದರೂ, ಈ ಪ್ರದೇಶದ ಸಂತ್ರಸ್ತರ ಅಭಿವೃದ್ಧಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ. ಡೀಸೆಲ್, ವಿದ್ಯುತ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕಲಾಗಿದೆ. ಘೋಷಣೆಯಾದ ಯೋಜನೆಗಳು ಜಾರಿಯಾಗುತ್ತವೆ ಎಂಬ ಭರವಸೆ ಇಲ್ಲ.
–ಶ್ರೀಶೈಲ ಆಲ್ದಳ್ಳಿ, ಜನ ಸಂಗ್ರಾಮ ಪರಿಷತ್ ಮುಖಂಡ, ಸಂಡೂರು
ಬೆಳೆ ಸಾಲ ಮನ್ನಾ ಆಶಾದಾಯಕ
ರೈತರ ಸಾಲ ಮನ್ನಾ ಮಾಡಿರುವುದು ಆಶಾದಾಯಕ. ಆದರೆ ಈ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ತಾಲ್ಲೂಕಿನಲ್ಲಿ ಭದ್ರಾ ಮೇಲ್ದಾಂಡೆ ಯೋಜನೆ ಜಾರಿ ಬಗ್ಗೆ ಚಕಾರ ಎತ್ತಿಲ್ಲ. ಹಿಂದಿನ ಬಜೆಟ್‌ನಲ್ಲೂ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ಕಂಡುಬಂದಿತ್ತು. ಈಗಿನ ಮುಖ್ಯಮಂತ್ರಿ ಅದನ್ನೇ ಮುಂದುವರಿಸಿದ್ದಾರೆ. ಹಿಂದುಳಿದ ತಾಲ್ಲೂಕುಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
– ಎಂ. ಬಸವರಾಜ, ಸಾವಯವ ಕೃಷಿಕ. ಕೂಡ್ಲಿಗಿ
ದೂರವೇ ಉಳಿದ ಕೃಷಿ ಕಾಲೇಜು ಸ್ಥಾಪನೆ
ಬಳ್ಳಾರಿ ತಾಲ್ಲೂಕಿನ ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸದೇ ಇರುವುದು ನಿರಾಶೆ ಮೂಡಿಸಿದ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಈ ಅಂಶವಿದ್ದರೂ ಘೋಷಣೆಯಾಗಿಲ್ಲ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆಯಬೇಕು ಇಂಧನ, ವಿದ್ಯುತ್ ದರ ಹೆಚ್ಚಳವು ಬಡ, ಮಧ್ಯಮ ವರ್ಗದ ಮೇಲೆ ಬರೆ ಎಳೆದಿದೆ. ದರ ಹೆಚ್ಚಳ ನಿರ್ಧಾರವನ್ನು ವಾಪಸ್ ಪಡೆಯಬೇಕು.
–ಎಸ್.ಪನ್ನರಾಜ್, ಹೈ–ಕ ಹೋರಾಟ ಸಮಿತಿ ಅಧ್ಯಕ್ಷ, ಬಳ್ಳಾರಿ
ಶಾಲೆಗಳಲ್ಲಿ ಬಯೋಮೆಟ್ರಿಕ್ ಅನುಕೂಲಕರ
ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಶೈಕ್ಷಣಿಕ ಚಟುವಟಿಕೆಯ ಮೇಲೆ ನಿಗಾ ಇಡಬಹುದು. ತಡವಾಗಿ ಬರುವ ಹಾಗೂ ಬೇಗ ಹೋಗುವ ಶಿಕ್ಷಕರನ್ನು ನಿಯಂತ್ರಿಸಬಹುದು. ಶಿಕ್ಷಕರಲ್ಲಿ ವೃತ್ತಿಪರತೆ, ಶಿಸ್ತು, ಸಮಯಪಾಲನೆಯನ್ನು ರೂಪಿಸಬಹುದು.
–ಬಿ.ಜಿ.ರೂಪ, ಮುಖ್ಯಶಿಕ್ಷಕಿ, ಕಕ್ಕಬೇವಿನಹಳ್ಳಿ ಸರ್ಕಾರಿ ಪ್ರೌಢಶಾಲೆ, ಬಳ್ಳಾರಿ
‘ಗೊಂದಲದ ಬಜೆಟ್’
ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ಕೊಟ್ಟಿದ್ದರು. ಆದರೆ, ಅದು ಈಡೇರಿಲ್ಲ. ₨34 ಸಾವಿರ ಕೋಟಿಯಷ್ಟೇ ಸಾಲ ಮನ್ನಾ ಮಾಡಿದ್ದಾರೆ. ಅದು ಕೂಡ ನಾಲ್ಕು ಹಂತಗಳಲ್ಲಿ. ಈ ವರ್ಷ ₨10,650 ಸಾವಿರ ಕೋಟಿ ಸಾಲವಷ್ಟೇ ಮನ್ನಾ ಮಾಡಲಾಗಿದೆ. ಇನ್ನುಳಿದದ್ದು ಮೂರು ಹಂತಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಒಂದು ಕುಟುಂಬಕ್ಕೆ ₨2 ಲಕ್ಷ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರೂ ಸಾಲ ಪಡೆದರೆ ತೊಂದರೆಯಾಗುತ್ತದೆ. ಈ ಬಜೆಟ್ ಗೊಂದಲದಿಂದ ಕೂಡಿದೆ. ಹಿಂದಿನ ಸರ್ಕಾರ ಸುತ್ತೋಲೆಯಲ್ಲಿ 16 ಷರತ್ತುಗಳನ್ನು ವಿಧಿಸಿತ್ತು. ಈ ಸರ್ಕಾರದ ಸುತ್ತೋಲೆ ಹೇಗಿರುತ್ತದೆ ನೋಡಬೇಕು. ಪಹಣಿ ಆಧರಿಸಿ ಸಾಲ ಮನ್ನಾ ಮಾಡಬೇಕು. ತುಂಗಭದ್ರಾ ಹೂಳಿನ ಬಗ್ಗೆ ಪ್ರಸ್ತಾಪಿಸಿಲ್ಲ. ಇದರಿಂದಾಗಿ ಈ ಭಾಗದ ರೈತರಿಗೆ ನಿರಾಸೆಯಾಗಿದೆ.
– ಜೆ. ಕಾರ್ತಿಕ್, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
‘ಷರತ್ತು ವಿಧಿಸಿದ್ದು ಸರಿಯಲ್ಲ’
ರೈತರ ₨2 ಲಕ್ಷ ವರೆಗಿನ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ, ಅನೇಕ ಷರತ್ತುಗಳನ್ನು ವಿಧಿಸಿರುವುದು ಸರಿಯಲ್ಲ. ಚುನಾವಣೆಗೂ ಮುನ್ನ ಹೇಳಿರುವಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳು ಎಂಬ ವ್ಯತ್ಯಾಸ ಮಾಡದೆ ಎಲ್ಲ ರೈತರಿಗೂ ಸಾಲ ಮನ್ನಾದ ಪ್ರಯೋಜನ ಸಿಗಬೇಕು.
– ದರೂರು ಪುರುಷೋತ್ತಮಗೌಡ, ಅಧ್ಯಕ್ಷ, ತುಂಗಭದ್ರಾ ರೈತ ಸಂಘ
‘ರೈತರಲ್ಲಿ ತರತಮ ಸರಿಯಲ್ಲ’
ಎಚ್.ಡಿ. ಕುಮಾರಸ್ವಾಮಿ ಅವರು ₨2 ಲಕ್ಷ ರೈತರ ಸಾಲ ಮನ್ನಾ ಘೋಷಿಸಿರುವುದು ಒಳ್ಳೆಯ ಕ್ರಮ. ಆದರೆ, ಸಣ್ಣ ಮತ್ತು ದೊಡ್ಡ ರೈತರು ಎಂದು ತರತಮ ಮಾಡಿರುವುದು ಸರಿಯಲ್ಲ. ಎಲ್ಲ ರೈತರು ಕಷ್ಟಪಟ್ಟೇ ಬೆಳೆ ಬೆಳೆಯುತ್ತಾರೆ. ಸಣ್ಣ ರೈತ ಆತನೇ ಉಳುಮೆ ಮಾಡಿದರೆ, ದೊಡ್ಡ ರೈತ ಅನೇಕ ಜನರಿಗೆ ಕೆಲಸ ಕೊಡುತ್ತಾನೆ. ಎಲ್ಲ ರೈತರು ಒಂದೇ ಎಂದು ಭಾವಿಸುವಾಗ ಅವರ ಒಗ್ಗಟ್ಟು ಒಡೆಯುವುದು ಸರಿಯಲ್ಲ.
–ಸಂಪತ್‌ಕುಮಾರ್ ಗೌಡ, ರೈತ ಮುಖಂಡ
‘ಜನರಿಗಿಲ್ಲ ಪ್ರಯೋಜನ’
ಸರಕು ಸಾಗಣೆ ವಾಹನಗಳ ಮೇಲಿನ ತೆರಿಗೆ ಹೆಚ್ಚಳ, ವಿದ್ಯುತ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ದರ ಹೆಚ್ಚಿಸಿರುವುದರಿಂದ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಅಸಂಘಟಿತ ಕಾರ್ಮಿಕರ ಬಗ್ಗೆ ಬಜೆಟ್‌ನಲ್ಲಿ ಏನೂ ಇಲ್ಲ. ಇದೊಂದು ನಿರಾಶಾದಾಯ, ಜನರಿಗೆ ಪ್ರಯೋಜನವಿಲ್ಲದ ಬಜೆಟ್.
–ಎಸ್.ಜಗನ್ನಾಥ್, ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ, ಹಗರಿಬೊಮ್ಮನಹಳ್ಳಿ
ಸಮ್ಮಿಶ್ರ ಸರ್ಕಾರ ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮಕ್ಕೆ ಆದ್ಯತೆ ನೀಡಿರುವುದು, ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಪೂರ್ವ ಮತ್ತು ಹೆರಿಗೆ ನಂತರ ಕ್ರಮವಾಗಿ ಆರು ತಿಂಗಳು ಮಾಸಿಕ ₨1 ಸಾವಿರ ಬ್ಯಾಂಕ್ ಖಾತೆಗೆ ನೇರ ಜಮೆ ನಿರ್ಧಾರ ಸ್ವಾಗತಾರ್ಹವಾದುದು.
– ಕೆ.ಎಂ. ಹೇಮಯ್ಯಸ್ವಾಮಿ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘ
ರೈತರಿಗೆ ವಿಶ್ವಾಸ ದ್ರೋಹ
ರೈತರ ಕೃಷಿ ಸಾಲ, ಖಾಸಗಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ವಿಚಾರದಲ್ಲಿ ಕಟ್ಟಳೆ ವಿಧಿಸುವ ಮೂಲಕ ರೈತರಿಗೆ ವಿಶ್ವಾಸದ್ರೋಹ ಎಸಗಿದ್ದಾರೆ. 2017ರ ಡಿಸೆಂಬರ್ 31ರ ವರೆಗೆ ಮಾಡಿರುವ ಸಾಲದಲ್ಲಿ ₨2 ಲಕ್ಷ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಮೂಗಿಗೆ ತುಪ್ಪ ಸವರಿದ್ದಾರೆ.
– ಕೆ.ಡಿ.ನಾಯ್ಕ, ಅಧ್ಯಕ್ಷ, ಅಖಿಲ ಕರ್ನಾಟಕ ರೈತ ಸಂಘ, ಹೂವಿನಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.