ADVERTISEMENT

ಸಂಶೋಧನೆ ನೌಕರಿಗಲ್ಲ, ಜ್ಞಾನ ಸೃಷ್ಟಿಗೆ: ಎಸ್‌.ವ್ಹಿ. ಸಂಕನೂರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:43 IST
Last Updated 13 ಅಕ್ಟೋಬರ್ 2018, 12:43 IST
ಹೊಸಪೇಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್‌.ವ್ಹಿ. ಸಂಕನೂರ ಮಾತನಾಡಿದರು
ಹೊಸಪೇಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್‌.ವ್ಹಿ. ಸಂಕನೂರ ಮಾತನಾಡಿದರು   

ಹೊಸಪೇಟೆ: ‘ಉದ್ಯೋಗ ಗಿಟ್ಟಿಸಿಕೊಳ್ಳಲು ಸಂಶೋಧನೆ ಮಾಡುತ್ತಿದ್ದೇವೆ ಹೊರತು ಜ್ಞಾನ ಸೃಷ್ಟಿಗೆ ಅಲ್ಲ. ಈ ಕಾರಣಕ್ಕಾಗಿ ಜಗತ್ತಿನಲ್ಲಿ ಸಂಶೋಧನೆಯಲ್ಲಿ ಭಾರತ 66ನೇ ಸ್ಥಾನದಲ್ಲಿದೆ’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್‌.ವ್ಹಿ. ಸಂಕನೂರ ಹೇಳೀದರು.

ಪರಿಷತ್ತು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಶನಿವಾರ ನಗರದ ವಿಜಯನಗರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಸಂಶೋಧನೆಯ ಬಗ್ಗೆ ಭಾರತೀಯರು ಆಸಕ್ತಿ ತೋರುತ್ತಿಲ್ಲ. ಎಚ್‌1ಎನ್‌1ನಿಂದ ಅನೇಕ ಜನ ಸಾವನ್ನಪ್ಪುತ್ತಿದ್ದಾರೆ. ಏಡ್ಸ್‌ಗೆ ಔಷಧಿ ಕಂಡು ಹಿಡಿಯಲು ಆಗುತ್ತಿಲ್ಲ. ಭಾರತ ಸೇರಿದಂತೆ ಇಡೀ ಜಗತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು. ಆದರೆ, ಆಗುತ್ತಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘ಹೊಸ ಹೊಸ ಸಂಶೋಧನೆಗಳ ಮೂಲಕ ಮಾನವನ ಕಲ್ಯಾಣ ಆಗಬೇಕು. ಜಗತ್ತಿನಲ್ಲಿ 585 ಜನರಿಗೆ ಇದುವರೆಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಕೇವಲ ನಾಲ್ವರು ಭಾರತೀಯರಿಗೆ ಪ್ರಶಸ್ತಿ ಸಿಕ್ಕಿದೆ. ಸಿ.ಎನ್‌.ಆರ್‌. ರಾವ್‌ ಅವರು ದೇಶ ಕಂಡ ಶ್ರೇಷ್ಠ ವಿಜ್ಞಾನಿ. ಅವರಿಗೆ ಪ್ರಶಸ್ತಿ ಸಿಗಬೇಕಿತ್ತು. ಆದರೆ, ಸಿಕ್ಕಿಲ್ಲ. ಬರುವ ದಿನಗಳಲ್ಲಿ ಅವರಿಗೆ ಸಿಗುತ್ತದೆ ಎನ್ನುವ ಆಶಾವಾದ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ವಿಜ್ಞಾನ ತಂತ್ರಜ್ಞಾನದಲ್ಲಿ ದೇಶ ಪ್ರಗತಿ ಹೊಂದಬೇಕು. ಬಡತನ, ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ನೀಗಬೇಕಾದರೆ ಸಂಶೋಧನೆಗಳು ಆಗಬೇಕು. ಅದರ ಪ್ರಯೋಜನ ಹೆಚ್ಚಿನ ಜನರಿಗೆ ತಲುಪಬೇಕು. ಆದರೆ, ನಮ್ಮಲ್ಲಿ ವಿಜ್ಞಾನದ ಕಲಿಕೆ ಬಗ್ಗೆ ಹೆಚ್ಚಿನವರಿಗೆ ಆಸಕ್ತಿಯಿಲ್ಲ. ಎಸ್‌.ಎಸ್‌.ಎಲ್‌.ಸಿ. ಆದ ನಂತರ ಶೇ 50ರಷ್ಟು ವಿದ್ಯಾರ್ಥಿಗಳು ಕಲಾ ವಿಭಾಗ, ಶೇ 20ರಷ್ಟು ವಾಣಿಜ್ಯ ಮತ್ತು ಶೇ 30ರಷ್ಟು ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತಾರೆ. ಪಿಯುಸಿ ಆದ ನಂತರ ಶೇ 20ರಷ್ಟು, ಎಂ.ಎಸ್ಸಿಗೆ ಶೇ 5ರಷ್ಟು ಹಾಗೂ ವಿಜ್ಞಾನದಲ್ಲಿ ಪಿಎಚ್‌.ಡಿ ಮಾಡುವವರ ಸಂಖ್ಯೆ ಶೇ 1ಕ್ಕಿಂತ ಕಡಿಮೆ ಇದೆ’ ಎಂದು ಅಂಕಿ ಅಂಶ ನೀಡಿದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್‌ ಕಡ್ಲೆವಾಡ ಮಾತನಾಡಿ, ‘ಪರಿಷತ್ತು 38 ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನ ಜನಪ್ರಿಯಗೊಳಿಸಲು ಕೆಲಸ ಮಾಡುತ್ತಿದೆ. ಮಾತೃಭಾಷೆಯಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ಉಪನ್ಯಾಸ ಸ್ಪರ್ಧೆಯಲ್ಲಿ ರಾಜ್ಯದ 11 ವಿಶ್ವವಿದ್ಯಾಲಯಗಳಿಂದ 88 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ’ ಎಂದು ವಿವರಿಸಿದರು.

‘ವೃಕ್ಷ ವಿಜ್ಞಾನ್‌’ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್‌ ಡಣಾಪುರ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್‌, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್‌ ಹೊರಪೇಟೆ, ಪರಿಷತ್ತಿನ ಸದಸ್ಯರಾದ ಕುಂಟೆಪ್ಪ ಗೌರಿಪುರ, ಜಗನ್ನಾಥ ಹಲ್ಮಡಗಿ, ಎಸ್‌.ಎಂ. ಕೊಟ್ರ ಸ್ವಾಮಿ, ಬಿ. ಗೋವಿಂದರಾಜ್‌, ಜಿ. ವಿಶ್ವಮೂರ್ತಿ, ಕೆ. ರಾಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.