ಬಳ್ಳಾರಿ: 'ತಾಲ್ಲೂಕಿನ ಆಲ್ದಹಳ್ಳಿಯಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಒಣಮೆಣಸಿನಕಾಯಿ ಮಾರುಕಟ್ಟೆಯಿಂದ ರಾಜ್ಯದ ನಾಲ್ಕು ಜಿಲ್ಲೆಗಳು ಮತ್ತು ಆಂಧ್ರದ ಎರಡು ಜಿಲ್ಲೆಯ ಸಾವಿರಾರು ರೈತರಿಗೆ ಅನುಕೂಲವಾಗಲಿದೆ' ಎಂದು ಬಿಜೆಪಿ ಜಿಲ್ಲಾ ವಕ್ತಾರ ಡಾ.ಬಿ.ಕೆ.ಎಸ್. ಸುಂದರ್ ಪ್ರತಿಪಾದಿಸಿದರು.
'ಬಳ್ಳಾರಿ, ವಿಜಯನಗರ, ರಾಯಚೂರು, ಅನಂತಪುರ, ಕರ್ನೂಲ್, ಚಿತ್ರದುರ್ಗ ಜಿಲ್ಲೆಗಳ ರೈತರು ಮೆಣಸಿನಕಾಯಿ ಮಾರಲು ಗುಂಟೂರು, ಬ್ಯಾಡಗಿಗೆ ಹೋಗಬೇಕಾದ ಅನಿವಾರ್ಯತೆ ಕೊನೆಯಾಗಲಿದೆ' ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಬಜೆಟ್‌ನಲ್ಲಿ ಜಿಲ್ಲೆಯ ಆರೋಗ್ಯ, ಕೃಷಿ ಮತ್ತು ಇತಿಹಾಸದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿರುವುದು ಸ್ವಾಗತಾರ್ಹ ನಡೆ' ಎಂದರು.
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರಿಗೆಯ ಭಾರವಿಲ್ಲದ ಜನಪರ ಬಜೆಟ್ ಮಂಡಿಸಿದ್ದಾರೆ. ಆದರೆ ಬಜೆಟ್ ಮಂಡನೆಯಲ್ಲಿ ಪಾಲ್ಗೊಳ್ಳದ ಕಾಂಗ್ರೆಸ್ ನಿಲುವು ಖಂಡನೀಯ' ಎಂದು ಹೇಳಿದರು.
ಮುಖಂಡರಾದ ಎಸ್. ಗುರುಲಿಂಗನಗೌಡ, ಕೃಷ್ಣಾ ರೆಡ್ಡಿ, ಶಶಿಕಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.