ADVERTISEMENT

ಕಂಪ್ಲಿ: ಹೆಚ್ಚು ಅಂಕ ಗಳಿಸಿದರೂ ಆಯ್ಕೆ ಆಗದ ವಿದ್ಯಾರ್ಥಿಗಳು

ವಸತಿ ಶಾಲೆ ಪ್ರವೇಶ ಪರೀಕ್ಷೆ:

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:18 IST
Last Updated 13 ಜೂನ್ 2024, 15:18 IST
ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಾಗರಾಜ್ ಎಸ್. ನಾಗನದೊಡ್ಡಿಗೆ ಕಂಪ್ಲಿಯ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ಗುರುವಾರ ಮನವಿ ಸಲ್ಲಿಸಿದರು
ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಾಗರಾಜ್ ಎಸ್. ನಾಗನದೊಡ್ಡಿಗೆ ಕಂಪ್ಲಿಯ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ಗುರುವಾರ ಮನವಿ ಸಲ್ಲಿಸಿದರು   

ಕಂಪ್ಲಿ: ಸರ್ಕಾರದ ವಿವಿಧ ವಸತಿ ಶಾಲೆಗಳ ಆಯ್ಕೆಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ತಾಲ್ಲೂಕಿನ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿದರೂ ಪ್ರವೇಶದಿಂದ ವಂಚಿತರಾಗಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.

ಈ ಕುರಿತ ಮನವಿಪತ್ರವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನಾಗರಾಜ್ ಎಸ್.ನಾಗನದೊಡ್ಡಿ ಅವರಿಗೆ ಗುರುವಾರ ಸಲ್ಲಿಸಿ ಅವರು ಮಾತನಾಡಿದರು.

ಕಂಪ್ಲಿಯಲ್ಲಿ ವಸತಿ ಶಾಲೆಗಳು ಇಲ್ಲದ ಕಾರಣ ಬೇರೆ ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕಿದೆ. ಅಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 75ರಷ್ಟು ಮೀಸಲು ಇರುವುದರಿಂದ ಅವರು ಕಡಿಮೆ ಅಂಕಗಳಿಸಿದರೂ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ADVERTISEMENT

ಆದರೆ, ಕಂಪ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ವಸತಿ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ಶೇ 60ಕ್ಕೂ ಅಧಿಕ ಅಂಕಗಳಿಸಿದರೂ ಆಯ್ಕೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ, ಕೂಲಿ ಕಾರ್ಮಿಕ, ಕೃಷಿಕ, ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಈ ಬಾರಿ ಹೆಚ್ಚು ಅಂಕ ಗಳಿಸಿದ್ದರೂ ವಸತಿ ಶಾಲೆಗಳ ಪ್ರವೇಶದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಿಶೇಷವಾಗಿ ಗಮನಹರಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕೆ ಕಂಪ್ಲಿ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಈ ತಾಂತ್ರಿಕ ಸಮಸ್ಯೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮರುಕಳಿಸದಿರಲು ತಾಲ್ಲೂಕಿನಲ್ಲಿ ಎರಡು ವಸತಿ ಶಾಲೆ ಆರಂಭಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಪದಾಧಿಕಾರಿಗಳಾದ ಕೆ.ಬಿ. ಮಂಜುನಾಥ, ಪಿ.ಸಾಯಿಬಾಷ, ರಾಜ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.