ತೆಕ್ಕಲಕೋಟೆ/ ಸಿರುಗುಪ್ಪ: ಸಿರುಗುಪ್ಪ ನಗರದ ಮೂಲಕ ಹಾದು ಹೋಗುವ ಬೀದರ್- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ನಿಧಾನವಾಗಿ ಸಾಗಿದ್ದು, ಸಾರ್ವಜನಿಕರು ದಿನನಿತ್ಯ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ನಗರದ ಹೊರವಲಯದ ಧಡೇಸೂಗೂರು ಸೇತುವೆಯಿಂದ ತೆಕ್ಕಲಕೋಟೆ ವರೆಗಿನ ಕೇವಲ 15 ಕಿ.ಮೀ. ಕ್ರಮಿಸಲು 45 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇರುವ ಅರೆ-ಬರೆ ರಸ್ತೆ ಸಹ ತಗ್ಗು ಗುಂಡಿಗಳಿಂದ ತುಂಬಿದೆ.
ಸಿರುಗುಪ್ಪ ತಾಲ್ಲೂಕು ಅಂತರರಾಜ್ಯ ಸಂಪರ್ಕಿಸುವುದರಿಂದ ಭಾರೀ ವಾಹನ ಸೇರಿದಂತೆ ಬಸ್, ಕಾರು, ದ್ವಿಚಕ್ರ ವಾಹನಗಳ ಓಡಾಟ ಜಾಸ್ತಿ. ಆದರೆ ಇಲ್ಲಿನ ಅರೆಬರೆ ಕಾಮಗಾರಿ, ಸೇತುವೆ ನಿರ್ಮಾಣಕ್ಕೆ ಮಾಡಿದ ತಿರುವುಗಳು ಹಾಗೂ ತಗ್ಗು ಗುಂಡಿಗಳಿಂದ ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿದ್ದು, ಕೈಕಾಲು ಮುರಿದುಕೊಂಡ ಹಾಗೂ ಜೀವ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ.
ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ 500 ಮೀಟರ್‌ಗೆ ಒಂದು ರಸ್ತೆ ವಿಸ್ತರಣೆಗೆ ಗುಂಡಿ ತೋಡಿದ್ದು ಬಿಟ್ಟರೆ ಕಾಮಗಾರಿ ಪ್ರಾರಂಭದಲ್ಲಿ ಎಲ್ಲಿತ್ತೋ ಅಲ್ಲಿಯೇ ಇದೆ ಎಂದು ಸಾರ್ವಜನಿಕರು ಗೊಣಗಾಡುತ್ತಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಯ: ಹೈದರಾಬಾದ್‌ನ ಆರ್‌ಎಂಎನ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಳೆದ ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದು, ಮಾರ್ಚ್ 2023ಕ್ಕೆ ಮುಗಿಯಬೇಕಿತ್ತು. ಆದರೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಮತ್ತೆ 9 ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರು, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
‘ತೆಕ್ಕಲಕೋಟೆಯಿಂದ ಸಿರುಗುಪ್ಪಗೆ ತೆರಳುವುದೆಂದರೆ ನರಕಯಾತನೆ ಎಂಬಂತಾಗಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಶಾಸಕರು ಗಮನ ಹರಿಸಬೇಕು’ ಎನ್ನುತ್ತಾರೆ ಬೈರಾಪುರ ಗ್ರಾಮದ ಪ್ರಗತಿಪರ ರೈತ ವೀರಪ್ಪಯ್ಯ.
ಜಿಲ್ಲಾಧಿಕಾರಿ ಲೋಕೋಪಯೋಗಿ ಸಚಿವರು ಹಾಗೂ ಮೂವರು ಸಂಸದರ ಜೊತೆ ಚರ್ಚಿಸಲಾಗಿದೆ. ಅಂತಿಮವಾಗಿ ಗುತ್ತಿಗೆದಾರರಿಗೆ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆಬಿ.ಎಂ.ನಾಗರಾಜ, ಶಾಸಕ
ವಿದ್ಯುತ್ ಹಾಗೂ ನೀರು ಸರಬರಾಜು ಕಾಮಗಾರಿ ಅನುಮೋದನೆ ವಿಳಂಬ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಕಾಮಗಾರಿ ನಿಧಾನವಾಗಿದ್ದು ಡಿಸೆಂಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆನರೇಂದ್ರ ಎನ್‌ಎಚ್‌ಎ ಚಿತ್ರದುರ್ಗ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.