ಬಳ್ಳಾರಿ: ಆರ್‌ಜೆಡಿ ಮಖಂಡ ಲಾಲು ಪ್ರಸಾದ್ ಹಿಂದೊಮ್ಮೆ ‘ಬಿಹಾರದ ರಸ್ತೆಗಳನ್ನು ಬಾಲಿವುಡ್ ಖ್ಯಾತ ತಾರೆಯೊಬ್ಬರ ನುಣುಪಾದ ಕೆನ್ನೆ ರೀತಿ ನಿರ್ಮಿಸುತ್ತೇವೆ‘ ಎಂದು ಹೇಳಿ ವಿವಾದ ಸೃಷ್ಟಿಸಿದರು.
ಆನಂತರ, ಉತ್ತರ ಭಾರತದ ರಾಜ್ಯಗಳ ಕೆಲವು ಮಂತ್ರಿಗಳು ಇದೇ ತರಹದ ಹೇಳಿಕೆ ಕೊಟ್ಟು ಟೀಕೆ ಎದುರಿಸಿದ್ದರು. ಅವೆಲ್ಲವೂ ಈಗ ಇತಿಹಾಸ. ಇಲ್ಲಿ ಹೇಳಲು ಹೊರಟಿರುವುದು ತಾರೆಯರ ಕೆನ್ನೆ ಕಥೆಯನ್ನಲ್ಲ. ಬಿಹಾರದ ರಸ್ತೆಗಳ ಬಗ್ಗೆಯೂ ಅಲ್ಲ. ಬಳ್ಳಾರಿ ನಗರದ ರಸ್ತೆಗಳ ದುಃಸ್ಥಿತಿ ಕುರಿತು ಪ್ರಸ್ತಾಪಿಸಲಾಗುತ್ತಿದೆ.
ಬಳ್ಳಾರಿ ನಗರದಲ್ಲಿ ಓಡಾಡುವುದಕ್ಕೆ ಬಿಡಿ, ನೋಡುವುದಕ್ಕೂ ಒಂದು ಒಳ್ಳೆಯ ರಸ್ತೆಯಿಲ್ಲ. ಯಾವುದೇ ರಸ್ತೆಗೆ ಹೋದರೂ ಮೊಣಕಾಲುದ್ದ ಗುಂಡಿಗಳು, ಬಾನೆತ್ತರಕ್ಕೆ ಏಳುವ ದೂಳು, ದ್ವಿಚಕ್ರ ವಾಹನಗಳ ಬ್ರೇಕ್ ಒತ್ತಿದರೆ ಸರ್‍ರನೆ ಜಾರುವ ಮಣ್ಣು, ಪೈಪ್‌ಗಳನ್ನು ಅಳವಡಿಸಲು ಅಲ್ಲಲ್ಲಿ ತೋಡಿ ಸರಿಯಾಗಿ ಮುಚ್ಚದೆ ಬಿಟ್ಟಿರುವ ಹಳ್ಳಗಳು ಕಣ್ಣಿಗೆ ರಾಚುತ್ತವೆ.
ವರ್ಷಗಟ್ಟಲೇ ರಿಪೇರಿ ಮಾಡಿದ ಮೋಕಾ ರಸ್ತೆಯಲ್ಲಿ (ಮಂತ್ರಾಲಯ ರಸ್ತೆ) ವಿಧಾನಸಭೆ ಚುನಾವಣೆಗೆ ಸ್ವಲ್ಪ ಮೊದಲು ಕಾಮಗಾರಿ ಮುಗಿಯಿತು. ಅಂತೂ ಇಂತೂ ರಸ್ತೆ ಮುಗಿಯಿತು ಎಂದು ನಾಗರಿಕರು ನೆಮ್ಮದಿಯ ನಿಟ್ಟುಸಿರಿಡುವಷ್ಟರಲ್ಲಿ ಮತ್ತೆ ರಸ್ತೆ ಗುಂಡಿಗಳು ಬಿದ್ದಿವೆ. ಈ ಗುಂಡಿಗಳಲ್ಲಿ ಅದೆಷ್ಟು ಬೈಕ್ ಸವಾರರು ಬಿದ್ದಿದ್ದಾರೊ?
ಕನಕ ದುರ್ಗಮ್ಮ ದೇವಸ್ಥಾನದಿಂದ ಗಾಂಧಿನಗರ ವಾಟರ್ ಬೂಸ್ಟರ್‌ವರೆಗಿನ ರಸ್ತೆಯನ್ನು ಅದೆಷ್ಟು ಸಲ ಅಗೆದಿದ್ದಾರೋ ಆ ದೇವಿಗೇ ಗೊತ್ತು... ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವವರಿಗೆ ರೇಜಿಗೆ ಬಂದಿರಬಹುದು. ಭಾರಿ ವಾಹನಗಳ ಹಿಂದೆ ಹೋದರೆ ಏಳುವ ದೂಳು ದೇಹವನ್ನು ವ್ಯಾಪಿಸಿಕೊಳ್ಳುತ್ತದೆ. ಅಸ್ತಮಾ ರೋಗಿಗಳ ಪಾಡಂತೂ ದೇವರಿಗೆ ಪ್ರೀತಿ. ಅದೆಷ್ಟು ದೂಳಿನ ಕಣಗಳು ಗಾಳಿಯಲ್ಲಿ ಶ್ವಾಸಕೋಶಕ್ಕೆ ಹೊಕ್ಕುವುದೋ?
ಭಾರಿ ಪ್ರಮಾಣದ ಸರಕನ್ನು ಹೊತ್ತ ನೂರಾರು ಟ್ರಕ್‌ಗಳು ಒಂದರ ಹಿಂದೆ ಮತ್ತೊಂದರಂತೆ ಈ ರಸ್ತೆಯಲ್ಲಿ ಸಾಗುತ್ತವೆ. ರಾತ್ರಿ ವೇಳೆ ಓಡಾಡುವ ಟ್ರಕ್‌ಗಳನ್ನು ಲೆಕ್ಕಹಾಕುವುದೇ ಕಷ್ಟ. ಅಂತರ ರಾಜ್ಯ, ಸ್ಥಳೀಯ ಬಸ್‌ಗಳು, ಕಾರುಗಳು, ದ್ವಿಚಕ್ರ ವಾಹನಗಳು ಓಡಾಡುತ್ತವೆ. ರಸ್ತೆ ಗುಂಡಿಗಳಲ್ಲಿ ಸರಕು ತುಂಬಿದ ಅದೆಷ್ಟೊ ಲಾರಿಗಳ ಚಕ್ರಗಳು ಸಿಲುಕಿ ದಿನಗಟ್ಟಲೆ ನಿಂತಿವೆಯೋ?
ಗಾಂಧಿನಗರ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಅಂಗಡಿಗಳಿವೆ. ಹತ್ತಾರು ನರ್ಸಿಂಗ್ ಹೋಂ ಹಾಗೂ ಆಸ್ಪತ್ರೆಗಳಿವೆ. ಅಂಗಡಿಗಳು, ನರ್ಸಿಂಗ್ ಹೋಂಗಳಿಗೆ ಪ್ರತಿದಿನ ದೂಳಿನ ಅಭ್ಯಂಜನವಾಗುತ್ತದೆ. ಕುಡಿಯುವ ನೀರಿನ ಪೈಪ್ ಅಳವಡಿಸಿ, ರಸ್ತೆಯ ಕಾಮಗಾರಿ ನಡೆಸಲು ₹ 1.50 ಕೋಟಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪದೇ ಪದೇ ರಸ್ತೆ ಹಾಳಾಗುವುದನ್ನು ನೋಡಿದರೆ ವೈಜ್ಞಾನಿಕವಾಗಿ ನಿರ್ಮಿಸಿದಂತಿಲ್ಲ. ಕಾಮಗಾರಿ ಕಳಪೆಯಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ಸೂಕ್ತ ವಿಚಾರಣೆಯಿಂದ ಮಾತ್ರವೇ ಸತ್ಯ ಹೊರಬಹುದು.
ಜಿಲ್ಲೆಯ ಸಚಿವರಾಗಲೀ, ಶಾಸಕರಾಗಲೀ ಅಥವಾ ಅಧಿಕಾರಿಗಳಾಗಲೀ ಯಾರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುವುದಿಲ್ಲ. ಬಳ್ಳಾರಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಕಚೇರಿ ಇರುವುದು ಇದೇ ರಸ್ತೆಯಲ್ಲಿ. ಪ್ರತಿನಿತ್ಯ ಅವರು ಇಲ್ಲಿಯೇ ಓಡಾಡುತ್ತಾರೆ. ಸಮಸ್ಯೆ ಗಮನಕ್ಕೆ ಬಂದಿಲ್ಲವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಮೋಕಾ ರಸ್ತೆ ಅವ್ಯವಸ್ಥೆ ಅಂತ್ಯ ಕಾಣದ ಸಮಸ್ಯೆ. ಹಾಗೆಂದ ಮಾತ್ರಕ್ಕೆ ಉಳಿದ ರಸ್ತೆಗಳು ಸರಿ ಇವೆ ಎಂಬ ತೀರ್ಮಾನಕ್ಕೆ ಬರುವಂತಿಲ್ಲ. ಎಲ್ಲೆಡೆ ಬಾಯ್ತೆರದ ಗುಂಡಿಗಳು; ಅವೈಜ್ಞಾನಿಕವಾಗಿ ಹಾಕಿರುವ ಹಂಪ್ಸ್‌ಗಳು; ರಾತ್ರಿಯ ಸಮಯದಲ್ಲಿ ಅವು ಕಾಣುವುದೇ ಇಲ್ಲ! ದಾರಿ ಹೋಕರಿಗೆ ಹಂಪ್ಸ್‌ಗಳು ಕಾಣುವಂತೆ ಪ್ರತಿಫಲನ (ರಿಫ್ಲೆಕ್ಟರ್) ಹಾಕಬೇಕು. ಸಾಧ್ಯವಾಗದಿದ್ದರೆ ಬಿಳಿಯ ಬಣ್ಣವಾದರೂ ಬಳಿಯಬೇಕು. ಅದ್ಯಾವುದೂ ಕಂಡು ಬರುವುದಿಲ್ಲ.
ರಾಯಲ್ ವೃತ್ತದಿಂದ ಇಂದಿರಾ ವೃತ್ತದವರೆಗೆ ರಸ್ತೆ ವಿಸ್ತರಣೆ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ರಸ್ತೆಯ ಎರಡೂ ಬದಿಯ ಕಟ್ಟಡಗಳನ್ನು ಭಾಗಶಃ ತೆರವುಗೊಳಿಸಿ ತಿಂಗಳುಗಳೇ ಕಳೆದಿವೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಕಪ್ಪಗಲ್ ರಸ್ತೆ ವಿಸ್ತರಣೆಗೂ ಕೆಲ ಕಟ್ಟಡಗಳನ್ನು ಭಾಗಶಃ ತೆರವುಗೊಳಿಸಲಾಗಿದೆ. ಅದರದ್ದೂ ಇದೇ ಕಥೆ. ಅನಂತಪುರ ರಸ್ತೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದ್ದು ಸದ್ಯದಲ್ಲೇ ಕೆಲಸ ಶುರುವಾಗಬಹುದು ಎಂದು ಪಾಲಿಕೆ ಕಮಿಷನರ್ ಖಲೀಲ್ ‘ಪ್ರಜಾವಾಣಿ‘ಗೆ ತಿಳಿಸಿದರು.
ಈಚೆಗೆ ಪಾಲಿಕೆ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಖಲೀಲ್ ಎಲ್ಲ ರಸ್ತೆಗಳಿಗೂ ಪ್ರದಕ್ಷಿಣೆ ಹಾಕುವುದಾಗಿ ಹೇಳಿದರು.
ನಗರದ ಅಭಿವೃದ್ಧಿಗೆ ಹಣದ ಕೊರತೆಯೇನಿಲ್ಲ. ಬೇರೆ ಬೇರೆ ಮೂಲಗಳಿಂದ ಬೇಕಾದಷ್ಟು ಹಣ ಬರುತ್ತದೆ. ಕೆಎಂಇಆರ್‌ಸಿ, ಡಿಎಂಎಫ್, ಕೆಕೆಆರ್‌ಡಿಬಿ, ಎಂಎಲ್‌ಎ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹೀಗೆ ಹಲವು ಹಣದ ಮೂಲಗಳಿವೆ. ಕೊರತೆ ಆಗಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಗೆ.
ನಮ್ಮ ಅಂಗಡಿ ಬಳಿ ರಸ್ತೆ ಗುಂಡಿಗೆ ಕಲ್ಲುಗಳನ್ನು ಸುರಿಯಲಾಗಿದೆ. ಇದರಿಂದ ವಿಪರೀತ ದೂಳು ಬರುತ್ತಿದೆ. ಭಾರಿ ವಾಹನಗಳು ಹೋದಾಗ ಕಲ್ಲುಗಳು ಸಿಡಿದು ಅಂಗಡಿಗೆ ಬೀಳುತ್ತಿವೆವಿ. ಸುರೇಶ್ ನಂದಿನಿ ಹಾಲು ವಿತರಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.